ADVERTISEMENT

ಶಿರಸಿ | ಅಪೂರ್ಣ ಕಾಮಗಾರಿ: ನಿವಾಸಿಗಳಿಗೆ ಕಿರಿಕಿರಿ

ರಾಜೇಂದ್ರ ಹೆಗಡೆ
Published 23 ಡಿಸೆಂಬರ್ 2025, 7:48 IST
Last Updated 23 ಡಿಸೆಂಬರ್ 2025, 7:48 IST
ಶಿರಸಿಯಲ್ಲಿ ನಡೆಯುತ್ತಿರುವ ಪೈಪ್‍ಲೈನ್ ಕಾಮಗಾರಿ 
ಶಿರಸಿಯಲ್ಲಿ ನಡೆಯುತ್ತಿರುವ ಪೈಪ್‍ಲೈನ್ ಕಾಮಗಾರಿ    

ಶಿರಸಿ: ನಗರದ 26 ವಾರ್ಡ್‍ಗಳ ನಿವಾಸಿಗಳಿಗೆ ನಿರಂತರ ನೀರು ಸರಬರಾಜು ಮಾಡುವ ಉದ್ದೇಶದಿಂದ ‌ನಡೆಯುತ್ತಿರುವ  ಪೈಪ್‍ಲೈನ್ ಕಾಮಗಾರಿ ನಿರೀಕ್ಷಿತ ಗುರಿ ತಲುಪಿಲ್ಲ. ಪ್ರಸ್ತುತ ಫೆಬ್ರವರಿಯಲ್ಲಿ ನಡೆಯುವ ಮಾರಿಕಾಂಬಾ ಜಾತ್ರೆ ಮುನ್ನ ಒಂದಿಷ್ಟು ಕಾಮಗಾರಿ ಮುಗಿಸುವ ಭರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಅಧ್ವಾನಕ್ಕೆ ಕಾರಣವಾಗುತ್ತಿದ್ದು, ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದೆ. 

‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ರೂಪಿಸಲಾದ ಅಮೃತ-2 ಯೋಜನೆಯಡಿ ನಗರದೊಳಗೆ ₹65.45 ಕೋಟಿ ವೆಚ್ಚದಲ್ಲಿ ನೀರು ಪೂರೈಕೆಗೆ ಸಂಬಂಧಿಸಿ ಪೈಪ್‌ಗಳ ಅಳವಡಿಕೆ ಕಾಮಗಾರಿಯನ್ನು ಒಂದೂವರೆ ವರ್ಷದ ಹಿಂದೆಯೇ ಕೈಗೊಳ್ಳಲಾಗಿದೆ. ಜಲಮಂಡಳಿ ಕಾಮಗಾರಿ ನಿರ್ವಹಿಸುತ್ತಿದ್ದು 31 ವಾರ್ಡ್‍ಗಳ ವ್ಯಾಪ್ತಿಯ ನಗರದಲ್ಲಿ 5 ವಾರ್ಡ್‍ಗಳನ್ನು ಹೊರತುಪಡಿಸಿ 26 ವಾರ್ಡ್‍ಗಳಲ್ಲಿ ಈ ಕಾಮಗಾರಿ ನಡೆಸಲಾಗಿದೆ. ಬಹುತೇಕ ವಾರ್ಡ್‍ಗಳಲ್ಲಿ ಕಾಮಗಾರಿ ಅರೆಬರೆಯಾಗಿದ್ದು, ಹಾಲಿ ಇರುವ ನೀರಿನ ಪೂರೈಕೆ ವ್ಯವಸ್ಥೆಗೂ ಧಕ್ಕೆಯಾಗುತ್ತಿದೆ’ ಎಂಬ ದೂರು ವ್ಯಾಪಕವಾಗಿದೆ. 

‘ಇನ್ನೆರಡು ತಿಂಗಳಲ್ಲಿ ನಡೆಯಲಿರುವ ಮಾರಿಕಾಂಬಾ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಕುಡಿಯುವ ನೀರಿನ ವ್ಯವಸ್ಥೆ ಹದಗೆಟ್ಟಿದೆ. ನಟರಾಜ ರಸ್ತೆ, ಸಿ.ಪಿ,ಬಜಾರ್, ಹಳೆಬಸ್ ನಿಲ್ದಾಣ ಪ್ರದೇಶ ಸೇರಿ ಹಲವೆಡೆ ಕಾಮಗಾರಿ ಆಗಬೇಕಿದೆ. ಗಣೇಶನಗರ ಭಾಗದಲ್ಲಿ ಕಾಮಗಾರಿ ಅಪೂರ್ಣವಾದ ಕಾರಣ ವಾರದಿಂದ ನೀರಿನ ಸಮಸ್ಯೆ ಆಗುತ್ತಿದೆ. ಟ್ಯಾಂಕರ್ ಮೂಲಕ ನೀರು ಪಡೆಯುವಂತಾಗಿದೆ’ ಎಂದು ಸ್ಥಳೀಯರಾದ ನಾಗೇಶ ನಾಯ್ಕ ಹೇಳಿದರು. 

ADVERTISEMENT

‘ಕೆಲಸ ಇನ್ನೂ ಶೇಕಡ 50ರಷ್ಟು ಬಾಕಿಯಿದ್ದು, ಅದರ ನಡುವೆ ಜಾತ್ರೆ ಬಂದಿರುವುದರಿಂದ ಅದರೊಳಗೆ ಅಲ್ಲೆಲ್ಲ ಅಗೆದು ಪೈಪ್ ಅಳವಡಿಸುವುದು, ರಸ್ತೆಯಂಚನ್ನು ಸರಿಪಡಿಸುವುದು ಸುಲಭದ ಮಾತಲ್ಲ. ಜಾತ್ರೆಗೆ ಒಂದು ತಿಂಗಳ ಮೊದಲು ಕಾಮಗಾರಿ ತಾತ್ಕಾಲಿಕ ಸ್ಥಗಿತಗೊಳಿಸುವುದಾಗಿ ಯೋಜನೆ ಎಂಜಿನಿಯರ್ ತಿಳಿಸಿದ್ದು, ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳ್ಳುವುದು ಸಾಧ್ಯವೇ ಇಲ್ಲ’ ಎನ್ನುತ್ತಾರೆ ಅವರು.  

‘ಕಾಮಗಾರಿ ನಡೆಸುತ್ತಿರುವ ವಾರ್ಡ್‍ಗಳ 192 ಕಿ.ಮೀ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಅಳವಡಿಕೆ ಮಾಡಬೇಕಿದ್ದು, ಅದರಲ್ಲಿ 95 ಕಿ.ಮೀಯಲ್ಲಿ ಕೆಲಸ ಆಗಿದ್ದು, ಇನ್ನು 97 ಕಿ.ಮೀ ಬಾಕಿಯಿದೆ. ಕೆಲವೆಡೆ ರಸ್ತೆಯಂಚಿನಲ್ಲಿ ಅಗೆದ ಕಡೆಗಳಲ್ಲಿ ಜಲ್ಲಿಕಲ್ಲು ಹಾಕಿ ಮುಚ್ಚುವ ಕಾರ್ಯ ಬಾಕಿಯಿದೆ. ಹಲವೆಡೆ ಸಿಮೆಂಟ್, ಡಾಂಬರೀಕರಣ ಮಾಡಬೇಕಿದೆ. ಇದರ ಜತೆ ಈ ಹಿಂದೆ ಮೀಟರ್ ಅಳವಡಿಕೆ ಮಾಡಿದ ಕಡೆಗಳಲ್ಲಿ ನಳಗಳಿಗೆ ಹೊಸ ಪೈಪ್ ಜೋಡಣೆ ಮಾಡಿಕೊಡಬೇಕಿದೆ. ಅದರಲ್ಲಿ ಹೊಸದಾಗಿ ನಳಸಂಪರ್ಕ, ಮೀಟರ್ ಜೋಡಣೆ 3 ಸಾವಿರ ಮನೆಗಳಿಗೆ ಮಾಡಬೇಕಿದೆ. ಹಳೆ ಮೀಟರ್, ನಳಗಳಿರುವ 5 ಸಾವಿರ ಮನೆಗಳಿಗೆ ಈ ಕೆಲಸ ಮಾಡಬೇಕಿದೆ’ ಎಂಬುದು ನಗರಾಡಳಿತ ಅಧಿಕಾರಿಯೊಬ್ಬರ ಮಾತು.  

ಜ.25ರವರೆಗೆ ಸಾಧ್ಯವಾದಷ್ಟು ಕಾಮಗಾರಿ ಮುಗಿಸಿ ಜಾತ್ರೆಯ ನಂತರ ಮತ್ತೆ ಕಾಮಗಾರಿ ಕೈಗೆತ್ತಿಕೊಂಡು ಮೇ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು.
ಸೃಜನ್ ಗೌಡ ಸಹಾಯಕ ಎಂಜಿನಿಯರ್ ಜಲಮಂಡಳಿ

ಐದು ವಾರ್ಡ್‍ಗಳಲ್ಲಿಲ್ಲ ಯೋಜನೆ

  ನಗರದಲ್ಲಿ 31 ವಾರ್ಡ್‍ಗಳಿದ್ದರೂ 7 8 17 18 ಹಾಗೂ 26ನೇ ವಾರ್ಡ್‍ಗಳಲ್ಲಿ ಈ ಯೋಜನೆ ಜಾರಿಯಾಗುತ್ತಿಲ್ಲ. ಹಣ ಕೊರತೆ ಆಗುವುದರಿಂದ ಮುಂದೆ ಹಣ ಬಿಡುಗಡೆಯಾದರೆ ಈ ವಾರ್ಡ್‍ಗಳಲ್ಲೂ ಕಾಮಗಾರಿ ನಡೆಸುವುದಕ್ಕೆ ಜಲಮಂಡಳಿ ನಿರ್ಧರಿಸಿದೆ. ಮುಖ್ಯವಾಗಿ ಬಾಪೂಜಿನಗರ ಕೆಎಚ್‌ಬಿ ಕಾಲೊನಿ ಶಾಂತಿನಗರ ಬಸವೇಶ್ವರ ಕಾಲೊನಿ ಕಸ್ತೂರಬಾನಗರ ನಿಲೇಕಣಿ ಬಸವೇಶ್ವರನಗರ ಭೀಮನಗುಡ್ಡ ಪ್ರದೇಶಗಳು ಈ ವಾರ್ಡ್‍ಗಳ ವ್ಯಾಪ್ತಿಯಲ್ಲಿವೆ‘ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.