
ಶಿರಸಿ: ನಗರದ ಇಂದಿರಾ ಕ್ಯಾಂಟೀನ್‍ನಲ್ಲಿ ನಿಗದಿತ ಪಟ್ಟಿಯಲ್ಲಿರುವಂತೆ ಗುತ್ತಿಗೆದಾರರು ಉಪಹಾರವಾಗಲಿ, ಊಟವಾಗಲಿ ನೀಡುತ್ತಿಲ್ಲ. ಲಕ್ಷ್ಯವಹಿಸಬೇಕಾದ ಅಧಿಕಾರಿಗಳು ಕಾಟಾಚಾರಕ್ಕೆಂಬಂತೆ ಪರಿಶೀಲಿಸುತ್ತಿದ್ದಾರೆ ಎಂಬ ದೂರು ವ್ಯಾಪಕವಾಗಿದ್ದು, ಈ ಅವ್ಯವಸ್ಥೆ ಸರಿಯಾಗುವವರೆಗೆ ಕ್ಯಾಂಟೀನ್ ಮುಚ್ಚಿ ಎಂದು ಶಾಸಕ ಭೀಮಣ್ಣ ನಾಯ್ಕ ಎಚ್ಚರಿಕೆ ನೀಡಿದರು.
ಐದು ರಸ್ತೆ ಸಮೀಪದ ರಾಯಪ್ಪ ಹುಲೇಕಲ್ ಶಾಲಾ ಆವಾರದಲ್ಲಿ ಕಳೆದ ಮೂರು ತಿಂಗಳ ಹಿಂದೆ ಆರಂಭವಾದ ಇಂದಿರಾ ಕ್ಯಾಂಟೀನ್‌ಗೆ ಭಾನುವಾರ ಬೆಳಿಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಶಾಸಕರು ಅಲ್ಲಿನ ಅವ್ಯವಸ್ಥೆ ಕಂಡು ಗರಂ ಆದರು. ಇದೇ ವೇಳೆ ಅಡುಗೆ ಕೋಣೆ, ಆಹಾರ ತಯಾರಿಕೆ, ಅಡುಗೆ ಸಾಮಗ್ರಿಗಳ ದಾಸ್ತಾನು ಪ್ರಮಾಣ ಎಲ್ಲವನ್ನೂ ಪರಿಶೀಲಿಸಿದ ಅವರು, ‘ಕ್ಯಾಂಟಿನ್‌ನಲ್ಲಿ ಗ್ರಾಹಕರಿಗೆ ನಿಗದಿತವಾಗಿ ನೀಡಬೇಕಾದ ಉಪಹಾರಗಳನ್ನು ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಹೀಗಾಗಿಯೇ ಪರಿಶೀಲನೆಗೆ ಬಂದಿದ್ದೇನೆ. ಬಡವರಿಗೆ ಅನುಕೂಲವಾಗಲೀ ಎಂದು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಯೋಜನೆಯು ಅವ್ಯವಸ್ಥೆಯ ಕಾರಣಕ್ಕೆ ಜನತೆವರೆಗೆ ತಲುಪುತ್ತಿಲ್ಲ. ಇಡ್ಲಿ ತಯಾರಿಸದೇ ಎಷ್ಟು ದಿನ ಆಯಿತು? ಎಂದು ಕ್ಯಾಂಟೀನ್‌ನಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದರು.
ನಗರಸಭೆ ಪರಿಸರ ಎಂಜಿನಿಯರ್ ಶಿವರಾಜ ಅವರನ್ನು ಸ್ಥಳಕ್ಕೆ ಕರೆಯಿಸಿದ ಶಾಸಕರು, ಸರ್ಕಾರದ ಯೋಜನೆ ಹೀಗಾದರೆ ಹೇಗೆ? ಇದರ ನಿರ್ವಹಿಸುವವವರು? ಅಡುಗೆ ಗುಣಮಟ್ಟ, ತಯಾರಿಕೆ, ಸ್ವಚ್ಛತೆಯ ಬಗ್ಗೆ ಪರಿಶೀಲನೆ ಮಾಡುವವರು ಯಾರು? ಎಂದು ಪ್ರಶ್ನಿಸಿದರು. ‘ನಾವು ನಿತ್ಯ ಪರಿಶೀಲನೆ ಮಾಡುತ್ತಿದ್ದೇವೆ’ ಎಂದು ಅವರು ಸಮಜಾಯಿಶಿ ನೀಡುವ ಪ್ರಯತ್ನ ಮಾಡಿದರು. ಆದರೆ ಇದಕ್ಕೆ ಇನ್ನಷ್ಟು ಕೋಪಗೊಂಡ ಶಾಸಕ ಭೀಮಣ್ಣ, ‘ಹಾಗಾದರೆ ನಿತ್ಯ ಯಾವ್ಯಾವ ಆಹಾರ ಕೊಡಬೇಕು? ಅದನ್ನೆಲ್ಲ ಕೊಡುತ್ತಾ ಇದ್ದಾರಾ? ಅಡುಗೆ ಸಿಬ್ಬಂದಿ ಪ್ರಶ್ನಿಸಿದರೆ ಇಡ್ಲಿ ನೀಡದೇ ವಾರ ಆಯಿತು ಎನ್ನುತ್ತಿದ್ದಾರೆ. ಹೀಗಾದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಅಲ್ಲಿಗೆ ಬಂದ ಗ್ರಾಹಕರು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಲ್ಲ ಸಮಯದಲ್ಲೂ ಒಂದೆ ರೀತಿಯ ಆಹಾರ ನೀಡಲಾಗುತ್ತಿದೆ ಎಂದು ದೂರಿದರು.
ಇದೇ ವೇಳೆ ಗುತ್ತಿಗೆದಾರರಿಗೆ ಪೋನಾಯಿಸಿದ ಶಾಸಕರು, ಶಿರಸಿ ಹಾಗೂ ಸಿದ್ದಾಪುರ ಎರಡು ಕಡೆ ಇಂದಿರಾ ಕ್ಯಾಂಟೀನ್ ಸರಿಯಾಗಿ ನಿರ್ವಹಿಸದೇ ಸಮಸ್ಯೆ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಹಶೀಲ್ದಾರ ಪಟ್ಟರಾಜ ಗೌಡ, ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ, ಪ್ರಮುಖರಾದ ಮಧುಕರ ಬಿಲ್ಲವ, ಪ್ರಾನ್ಸಿಸ್ ನರೋನ್ಹಾ ಮತ್ತಿತರರು ಇದ್ದರು.
ಇಂದಿರಾ ಕ್ಯಾಂಟೀನ್‌ನಲ್ಲಿ ನಿಯಮದಂತೆ ಆಹಾರ ನೀಡುವಂತೆ ನೀಡಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು ಇದರ ನಿರ್ವಹಣೆ ಯಾರ್ಯಾರು ಮಾಡಬೇಕು? ಎಂಬುದರ ಬಗ್ಗೆ ತಹಶೀಲ್ದಾರ ನೇತೃತ್ವದಲ್ಲಿ ಸಭೆ ನಡೆಸಬೇಕುಭೀಮಣ್ಣ ನಾಯ್ಕ ಶಾಸಕ
ಕ್ಯಾಂಟೀನ್ ಬಂದ್: ಸರಿಯಾದ ವ್ಯವಸ್ಥೆ ಆಗುತ್ತದೆ ಎಂದಾದ ಮೇಲಷ್ಟೇ ಕ್ಯಾಂಟೀನ್ ಪುನಃ ತೆರೆಯಬೇಕು. ಅಲ್ಲಿಯವರೆಗೆ ಬಂದ್ ಮಾಡಿ ಎಂದು ಸೂಚನೆ ನೀಡಿದರು. ನಂತರ ಅಧಿಕಾರಿಗಳು ತಾಂತ್ರಿಕ ಕಾರಣದಿಂದ ಕೆಲ ದಿನ ಕ್ಯಾಂಟೀನ್ ಬಂದ್ ಮಾಡಲಾಗಿದೆ ಎಂಬ ನಾಮಫಲಕ ಅಂಟಿಸಿ ಬಂದ್ ಮಾಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.