ADVERTISEMENT

ಕಾರವಾರ: ದೊಡ್ಡ ಡಾಲ್ಫಿನ್ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 13:41 IST
Last Updated 2 ಸೆಪ್ಟೆಂಬರ್ 2021, 13:41 IST
ಕಾರವಾರ ತಾಲ್ಲೂಕಿನ ದಂಡೇಬಾಗ್ ಕಡಲತೀರದಲ್ಲಿ ಬುಧವಾರ ಕಂಡುಬಂದ ಡಾಲ್ಫಿನ್ ಕಳೇಬರ
ಕಾರವಾರ ತಾಲ್ಲೂಕಿನ ದಂಡೇಬಾಗ್ ಕಡಲತೀರದಲ್ಲಿ ಬುಧವಾರ ಕಂಡುಬಂದ ಡಾಲ್ಫಿನ್ ಕಳೇಬರ   

ಕಾರವಾರ: ತಾಲ್ಲೂಕಿನ ದಂಡೆಬಾಗದ ಕಡಲತೀರದಲ್ಲಿ ದೊಡ್ಡ ಹೆಣ್ಣು ಡಾಲ್ಫಿನ್ ಮೀನೊಂದರ ಕಳೇಬರವು ಬುಧವಾರ ಪತ್ತೆಯಾಗಿದೆ. ‘ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್’‌ ಪ್ರಭೇದದ ಹೆಣ್ಣು ಡಾಲ್ಫಿನ್ 2.8 ಮೀಟರ್ ಉದ್ದವಿತ್ತು.

‘ಅದರ ಶರೀರವು 1.6 ಮೀಟರ್ ಸುತ್ತಳತೆ ಹೊಂದಿತ್ತು. ಉಸಿರುಗಟ್ಟಿ ಸತ್ತಿದ್ದು, ಅದರ ಶ್ವಾಸಕೋಶದಲ್ಲಿ ರಕ್ತ ತುಂಬಿಕೊಂಡು ಊದಿಕೊಂಡಿತ್ತು’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಪಶು ವೈದ್ಯಾಧಿಕಾರಿ ಡಾ.ದೀಪಕ್ ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಸಂತ ರೆಡ್ಡಿ, ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಕಾರವಾರದ ಕಡಲತೀರದಲ್ಲಿ ಡಾಲ್ಫಿನ್‌ಗಳು ಕಂಡುಬರುವುದು ಸಾಮಾನ್ಯ. ಆದರೆ, ಇಷ್ಟೊಂದು ದೊಡ್ಡದು ಇದೇ ಮೊದಲ ಬಾರಿ ಪತ್ತೆಯಾಗಿದೆ. 60ರಿಂದ 65 ವರ್ಷ ಬದುಕುವ ಈ ಮೀನುಗಳು, ಮೂರು ಮೀಟರ್‌ಗಳಷ್ಟು ಉದ್ದಕ್ಕೆ ಬೆಳೆಯಬಲ್ಲವು. ಕರ್ನಾಟಕದಲ್ಲಿ ಕಾರವಾರ, ಗೋಕರ್ಣ, ಮುರ್ಡೇಶ್ವರ, ನೇತ್ರಾಣಿ, ಉಡುಪಿ, ಮಂಗಳೂರು ಸುತ್ತಮುತ್ತ ಹಂಪ್‌ಬ್ಯಾಕ್ ಡಾಲ್ಫಿನ್‌ಗಳು ವಾಸಿಸುತ್ತವೆ.

ಕಾರವಾರದಲ್ಲಿ ಕೂರ್ಮಗಡ, ಲೈಟ್‌ಹೌಸ್, ಮಾಜಾಳಿ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಅವುಗಳನ್ನು ನೋಡಲೆಂದೇ ನೂರಾರು ಪ್ರವಾಸಿಗರು ದೋಣಿಗಳಲ್ಲಿ ಸಾಗುತ್ತಾರೆ. ನಾನಾ ಕಾರಣಗಳಿಂದ ಮೃತಪಟ್ಟ ಡಾಲ್ಫಿನ್‌ಗಳ ಕಳೇಬರಗಳು ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಈ ಹಿಂದೆಯೂ ಕಾಣಸಿಕ್ಕಿದ್ದವು.

ಡಾಲ್ಫಿನ್‌ಗಳನ್ನು ಸಂರಕ್ಷಿಸುವ ಸಲುವಾಗಿ ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ‘ಪ್ರಾಜೆಕ್ಟ್ ಡಾಲ್ಫಿನ್’ ಘೋಷಿಸಿದ್ದರು. ಅದರಂತೆ ರಾಜ್ಯ ಅರಣ್ಯ ಸಚಿವಾಲಯಕ್ಕೆ ಉತ್ತರ ಕನ್ನಡದಿಂದಲೂ ಪ್ರಸ್ತಾವ ಸಲ್ಲಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.