ದಾಂಡೇಲಿ: ಮಳೆಗಾಲ ಪೂರ್ವ ಸಿದ್ಧತೆ ಹಾಗೂ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತ ನಗರಸಭೆಯ ಸಭಾಂಗಣದಲ್ಲಿ ಪೌರಾಯುಕ್ತ ವಿವೇಕ ಬನ್ನೆ ಅಧ್ಯಕ್ಷಯಲ್ಲಿ ವಿಶೇಷ ಸಭೆ ಸೋಮವಾರ ನಡೆಯಿತು.
ನಗರದ ಪ್ರಮುಖ ಬೀಡಾಡಿ ದನಗಳು, ಬೀದಿ ನಾಯಿಗಳ ನಿಯಂತ್ರಣ ಹಾಗೂ ಅಪಾಯಕಾರಿ ಮರದ ಟೊಂಗೆ ತೆರವು, ಪ್ರಮುಖ ಚರಂಡಿ ಸ್ವಚ್ಛತೆ ಕುರಿತಂತೆ ನಗರಸಭೆ ಸದಸ್ಯರಿಂದ ಅನೇಕ ದೂರು ಕೇಳಿ ಬಂದವು. ಪೌರಾಯುಕ್ತರು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಯುಜಿಡಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಸದಸ್ಯರು ನಗರಸಭೆಯ ಅಧ್ಯಕ್ಷರ ಗಮನಕ್ಕೆ ತಂದು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಗುತ್ತಿಗೆದಾರರಿಗೆ ತಿಳಿಸುವಂತೆ ಒತ್ತಾಯಿಸಿದರು.
ತಹಶೀಲ್ದಾರ್ ಶೈಲೇಶ ಪರಮಾನಂದ ಮಾತನಾಡಿ, ‘147 ಅಪಾಯಕಾರಿ ಮರಗಳಲ್ಲಿ 47 ಮರಗಳ ಕೊಂಬೆಗಳನ್ನು ತೆಗೆಯಲಾಗಿದೆ. ಅರಣ್ಯ ಇಲಾಖೆ ಈ ಕಾರ್ಯಕ್ಕೆ ಸಹಕರಿಸುತ್ತಿಲ್ಲ. ಎಲ್ಲಾ ಇಲಾಖೆಗಳ ಸಹಕಾರ ಮುಖ್ಯ’ ಎಂದರು.
ಸಿ.ಆರ್.ಪಿಗಳಿಗೆ ಅಂಗನವಾಡಿ, ಶಾಲಾ ಆವರಣದಲ್ಲಿ ಇರುವ ಅಪಾಯಕಾರಿ ಮರಗಳ ಮಾಹಿತಿ ನೀಡುವಂತೆ ಹಾಗೂ ಕಾಂಪೌಂಡ್ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು. ಕೋವಿಡ್ ಮುನ್ನೆಚ್ಚರಿಕೆಯ ಭಾಗವಾಗಿ ಕಾಳಿ ನದಿಯಲ್ಲಿ ನಡೆಯುವ ರಾಫ್ಟಿಂಗ್ ಬೋಟಿಂಗ್ ಜೂನ್ 1 ರಿಂದ ಸ್ಥಗಿತಗೊಳ್ಳುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ನಗರಸಭೆ ಅಧ್ಯಕ್ಷ ಆಶ್ಫಾಕ್ ಶೇಖ್ ಮಾತನಾಡಿ, ‘ಹಳಿಯಾಳ, ಹಳೇ ದಾಂಡೇಲಿ ರಸ್ತೆಯ ಪಕ್ಕದಲ್ಲಿರುವ ಗುಜರಿ ಸಾಮಾನುಗಳನ್ನು ತೆರವು ಮಾಡುವಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಪ್ರತಿ ದಿನ ಮಾರ್ಕೆಟ್, ವಿನಾಯಕ ನಗರ , ಅಲೈಡ್ ಏರಿಯಾದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಸದಸ್ಯ ದಶರಥ ಬಂಡಿವಡ್ಡರ ಗಾಂಧಿನಗರ ಎರಡು ನಾಲಾಗಳನ್ನು ಸ್ವಚ್ಛ ಮಾಡಬೇಕು ಎಂದು ಬೇಡಿಕೆ ಇಟ್ಟರು.
ನಗರಸಭೆ ಸದಸ್ಯ ಮೋಹನ್ ಹಲವಾಯಿ ಪಶುವೈದ್ಯಾಧಿಕಾರಿ ಅರ್ಚನಾ ಸಿನ್ಹಾ, ಹೆಸ್ಕಾಂ ಎಂಜಿನಿಯರ್ ದೀಪಕ ನಾಯಕ, ಬಸ್ ಡಿಪೋ ವ್ಯವಸ್ಥಾಪಕ ಎಲ್.ಎಚ್. ರಾಥೋಡ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ನೋಡಲ್ ಅಧಿಕಾರಿಗಳ ನೇಮಕ
ಪ್ರಾಕೃತಿಕ ವಿಕೋಪ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತಾಲ್ಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನಾಗಿ ಪರಶುರಾಮ ಸಿಂಧೆ ನಾಗೇಂದ್ರ ಬಾಬು ದೊಡ್ಮನಿ ಬಸವರಾಜ ಹಳ್ಳ ಬಿ.ಎಫ್. ಗವಾಸ ಮೈಕಲ್ ಫರ್ನಾಂಡಿಸ್ ಸುನಿತಾ ನಾಯ್ಕ ಸಿದ್ದಮ್ಮ ಹಿರೇಮೇಟಿ ಅವರನ್ನು ನೇಮಕ ಮಾಡಲಾಗಿದೆ. ವಿಶೇಷ ತಂಡದಲ್ಲಿ ನಗರಸಭೆ ಅಧಿಕಾರಿಗಳಾದ ಶುಭಂ ರಾಯ್ಕರ ವಿಲಾಸ ದೇವಕರ ಸಲೀಂ ನದಾಫ್ ಆದಿನಾರಾಯಣ ಹರಿಜನ ಅವರು 31ನೇ ವಾರ್ಡ್‌ನಲ್ಲಿ ಯಾವುದೇ ಅನಾಹುತ ಸಂಭವಿಸಿದಲ್ಲಿ ಈ ಅಧಿಕಾರಿಗಳನ್ನು ಸಾರ್ವಜನಿಕರು ಸಂಪರ್ಕಿಸಬೇಕು. ತಕ್ಷಣ ಸ್ಥಳಕ್ಕೆ ಹಾಜರಿದ್ದು ಸಮಸ್ಯೆ ಪರಿಹರಿಸಲು ಜವಾಬ್ದಾರಿಯನ್ನು ಈ ತಂಡದ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಪೌರಾಯುಕ್ತ ವಿವೇಕ ಬನ್ನೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.