ದಾಂಡೇಲಿ: ‘ಮಹಿಳಾ ಸಬಲಿಕರಣಕ್ಕೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಆದರೆ, ಸ್ವಾವಲಂಬನೆಯ ಬದುಕಿಗೆ ಕೌಶಲ, ತರಬೇತಿ ಅತಿ ಮುಖ್ಯ. ಕಿರಣ್ ಮಜುಂದಾರ ಷಾ, ಸುಧಾ ಮೂರ್ತಿ ಮತ್ತು ಸುನಿತಾ ವಿಲಿಯಮ್ಸ್ ಪ್ರೇರಣಾದಾಯಕ ವ್ಯಕ್ತಿತ್ವ ನಮಗೆ ಪ್ರೇರಣೆಯಾಗಬೇಕು’ ಎಂದು ದಾಂಡೇಲಿಯ ಪಕ್ಷಿ ವೀಕ್ಷಕರಾದ ರಜನಿ ರಾವ್ ಹೇಳಿದರು.
ನಗರದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ವತಿಯಿಂದ ಕಚೇರಿಯ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್ ದೇಶಪಾಂಡೆ ಅರ್‌ಸೆಟಿ ವಿಸ್ತರಣಾ ಕೇಂದ್ರದ ಯೋಜನಾಧಿಕಾರಿ ಸಂಜೀವ ವರ್ಮಾ ಜೋಶಿ ಮಾತನಾಡಿ, ‘ಮಹಿಳಾ ಉದ್ಯಮಿಗಳು ತಯಾರಿಸಿದ ಕೈತೋಟದ ಉತ್ಪನ್ನ, ಮನೆ ಆಧಾರಿತ ಉದ್ಯಮಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ರೂಪದಲ್ಲಿ ಆಯೋಜಿಸಿ ಸಾರ್ವಜನಿಕರಿಗೆ ಹಾಗೂ ಮಹಿಳಾ ಉದ್ಯಮಿಗಳಿಗೆ ಮಾರುಕಟ್ಟೆ ಒದಗಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಮಹಿಳಾ ದಿನ ಕೇವಲ ಆಚರಣೆಯಲ್ಲ ಮಹಿಳೆಯರ ಸಾಮರ್ಥ್ಯ, ಸಹನಶೀಲತೆ ಹಾಗೂ ಸಬಲಿಕರಣದ ಸಂಕೇತವಾಗಿದೆ. ಕೆನರಾ ಬ್ಯಾಂಕ್ ದೇಶಪಾಂಡೆ ಅರ್‌ಸೆಟಿ ಮಹಿಳಾ ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಮೂಲಕ ಮಹಿಳಾ ಸಬಲಿಕರಣಕ್ಕೆ ಸದಾ ಬದ್ಧವಾಗಿದೆ’ ಎಂದರು.
ಕೆನರಾ ಬ್ಯಾಂಕ್ ದೇಶಪಾಂಡೆ ಅರ್‌ಸೆಟಿ ಮೂಲಕ ತರಬೇತಿ ಪಡೆದ ಮತ್ತು ಯಶಸ್ವಿಯಾಗಿ ಉದ್ಯಮ ನಡೆಸುತ್ತಿರುವ ಅಶ್ವಿನಿ ಕಾಂಬ್ಳೆ (ಬ್ಯೂಟಿ ಪಾರ್ಲರ್), ತುಳಸಾ (ನವಗ್ರಾಮ ತರಕಾರಿ ವ್ಯಾಪಾರ) ಅವರನ್ನು ಸನ್ಮಾನಿಸಲಾಯಿತು.
ಶಿಬಿರಾರ್ಥಿಗಳಿಗೆ ಮನರಂಜನಾತ್ಮಕ ಕ್ರೀಡಾಕೂಟ ನಡೆದವು. ಸಿದ್ಧ ಉಡುಪು ತಯಾರಿಕಾ ಶಿಬಿರಾರ್ಥಿಗಳು ತಮ್ಮ ಯಶೋಗಾಥೆಯ ಅನುಭವ ಹಂಚಿಕೊಂಡರು.
ಫೀಲ್ಡ್ ಸೂಪರ್ವೈಸರ್ ನಾರಾಯಣ ವಾಡಕರ ಕಾರ್ಯಕ್ರಮ ನಿರ್ವಹಿಸಿದರು. ಅಂದಾನಪ್ಪ ಅಂಗಡಿ ಸ್ವಾಗತಿಸಿ, ವಂದಿಸಿದರು. 150 ಜನ ಸ್ವ - ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.