ADVERTISEMENT

ಶಿರಸಿ | ಪ್ರಕೃತಿ ಶಿಬಿರ: ಕಣ್ಮರೆಯಾದ ಸಂವಹನ ಕೇಂದ್ರ

ಮಾಹಿತಿ ಒದಗಿಸುವುದಕ್ಕಿಂತ ಮೋಜಿಗೆ ಒತ್ತು ನೀಡಿದ ಆರೋಪ

ಗಣಪತಿ ಹೆಗಡೆ
Published 25 ಜೂನ್ 2022, 6:50 IST
Last Updated 25 ಜೂನ್ 2022, 6:50 IST
ದಾಂಡೇಲಿ ಸಮೀಪದ ಕುಳಗಿ ಪ್ರಕೃತಿ ಶಿಬಿರದಲ್ಲಿ ಸಂವಹನ ಕೇಂದ್ರದಲ್ಲಿದ್ದ ಸಲಕರಣೆಗಳನ್ನು ನಿರುಪಯುಕ್ತ ಕಟ್ಟಡದ ಬಳಿ ಇಡಲಾಗಿರುವುದು
ದಾಂಡೇಲಿ ಸಮೀಪದ ಕುಳಗಿ ಪ್ರಕೃತಿ ಶಿಬಿರದಲ್ಲಿ ಸಂವಹನ ಕೇಂದ್ರದಲ್ಲಿದ್ದ ಸಲಕರಣೆಗಳನ್ನು ನಿರುಪಯುಕ್ತ ಕಟ್ಟಡದ ಬಳಿ ಇಡಲಾಗಿರುವುದು   

ಶಿರಸಿ: ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿರುವ ಕುಳಗಿ ಪ್ರಕೃತಿ ಶಿಬಿರದಲ್ಲಿ ಪರಿಸರ ಆಸಕ್ತರಿಗೆ ಮಾಹಿತಿ ನೀಡಲು ಇದ್ದ ಸಂವಹನ ಕೇಂದ್ರ (ಇಂಟರ್‌ಪ್ರಿಟೇಶನ್ ಸೆಂಟರ್) ಸ್ಥಗಿತಗೊಂಡು ಹಲವು ತಿಂಗಳು ಕಳೆದಿದೆ. ಅಲ್ಲಿದ್ದ ಪರಿಕರಗಳು ಪ್ರಕೃತಿಯ ಮಡಿಲಲ್ಲಿ ಬಿದ್ದಿವೆ!

ದಾಂಡೇಲಿಯಿಂದ 12 ಕಿ.ಮೀ. ದೂರದಲ್ಲಿರುವ ಕುಳಗಿ ಪ್ರಕೃತಿ ಶಿಬಿರಕ್ಕೆ ಅಧ್ಯಯನ ನಿಮಿತ್ತ ಬರುವವರ ಸಂಖ್ಯೆ ಹೆಚ್ಚಿದೆ. ಜತೆಗೆ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಈ ಮೊದಲು ಇಲ್ಲಿ ಕಾಳಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಸಸ್ಯಸಂಕುಲ, ಜೀವ ಸಂಕುಲದ ಮಾಹಿತಿ ನೀಡುವ ಸಂವಹನ ಕೇಂದ್ರವಿತ್ತು. ಅವುಗಳ ಮಾಹಿತಿಗಳನ್ನು ಒಳಗೊಂಡ ಭಿತ್ತಿಪತ್ರ, ಫಲಕ, ಸ್ತಬ್ತಚಿತ್ರ ಸೇರಿದಂತೆ ವಿವಿಧ ಸಲಕರಣೆಗಳು ಅಲ್ಲಿದ್ದವು.

ಈಗ ಕೇಂದ್ರದ ಕಟ್ಟಡ ಮಾತ್ರ ಉಳಿದುಕೊಂಡಿದೆ. ಅಲ್ಲಿ ಜಂಗಲ್ ಸಫಾರಿಯ ಕೌಂಟರ್, ಅರಣ್ಯ ಇಲಾಖೆಯ ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ. ಮಾಹಿತಿಗಳಿದ್ದ ಫಲಕ, ಪೋಸ್ಟರ್ ಗಳನ್ನು ಅಕ್ಕಪಕ್ಕದ ಜಾಗದಲ್ಲಿ ಎಸೆಯಲಾಗಿದೆ. ಇದು ಪರಿಸರ ಆಸಕ್ತರಲ್ಲಿ ಅಸಮಾಧಾನ ಮೂಡಿಸಿದೆ.

ADVERTISEMENT

‘ಸಂವಹನ ಕೇಂದ್ರದ ಮೂಲಕ ಹೊರಗಿನಿಂದ ಬಂದ ಜನರಿಗೆ ವನ್ಯಸಂಪತ್ತಿನ ಕುರಿತು ಸಮಗ್ರ ಮಾಹಿತಿ ಪಡೆಯಲು ಅನುಕೂಲವಾಗಿತ್ತು. ಜ್ಞಾನ ವೃದ್ಧಿಸುವ ಇಂತಹ ಸೌಲಭ್ಯವನ್ನು ಕೈಬಿಟ್ಟು ಕೇವಲ ಆದಾಯ ಸಂಗ್ರಹಣೆಗೆ ಟಿಕೆಟ್ ಕೌಂಟರ್, ಮಳಿಗೆ ತೆರೆದಿರುವುದು ಸರಿಯಲ್ಲ’ ಎನ್ನುತ್ತಾರೆ ಪರಿಸರಪ್ರೇಮಿಯೊಬ್ಬರು.

‘ಶಿಬಿರ ವ್ಯಾಪ್ತಿಯ ಕಟ್ಟಡಗಳಲ್ಲಿ ಟೇಬಲ್ ಟೆನ್ನಿಸ್ ಸೇರಿದಂತೆ ಮನೋರಂಜನೆಗೆ ಅಧಿಕಾರಿಗಳು ಸೌಲಭ್ಯ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಶಿಬಿರದ ಮೂಲ ಉದ್ದೇಶವನ್ನೇ ಬದಿಗೊತ್ತಲಾಗಿದೆ’ ಎಂದು ಆರೋಪಿಸಿದರು.

‘ಹಲವು ವರ್ಷಗಳ ಹಿಂದೆಯೇ ಸ್ಥಾಪನೆಯಾಗಿದ್ದ ಸಂವಹನ ಕೇಂದ್ರದಲ್ಲಿ ಪರಿಣಾಮಕಾರಿ ಬದಲಾವಣೆ ತರಬೇಕಿದೆ. ಅದಕ್ಕಾಗಿ ಈಗಿದ್ದ ಕೇಂದ್ರ ನಿಲ್ಲಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಆಧರಿಸಿ ಮಾಹಿತಿ ನೀಡುವ ಕೇಂದ್ರ ಸ್ಥಾಪನೆಗೂ ಚಿಂತನೆ ನಡೆದಿದೆ. ಮೋಜಿಗಾಗಿ ಶಿಬಿರ ಬಳಕೆಯಾಗಿಲ್ಲ’ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

*
ಸಂವಹನ ಕೇಂದ್ರ (ಇಂಟರಪ್ರಿಟೇಶನ್ ಸೆಂಟರ್) ಸಾಕಷ್ಟು ಹಳತಾಗಿರುವ ಕಾರಣ ಸ್ಥಗಿತಗೊಳಿಸಲಾಗಿದೆ. ಹೊಸ ಕೇಂದ್ರ ಸ್ಥಾಪನೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ.
-ಮರಿಯಾ ಕ್ರಿಸ್ತರಾಜು, ಕಾಳಿ ಹುಲಿ ಸಂರಕ್ಷಿತಾರಣ್ಯದ ಡಿಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.