ADVERTISEMENT

ಇಟಗುಳಿ: ಮರು ನಿರ್ಮಾಣಗೊಳ್ಳದ ತೂಗು ಸೇತುವೆ

ಅತಿವೃಷ್ಟಿಗೆ ಕೊಚ್ಚಿಹೋಗಿದ್ದ ಸಂಪರ್ಕ ಮಾರ್ಗ

ಗಣಪತಿ ಹೆಗಡೆ
Published 21 ಜೂನ್ 2022, 4:51 IST
Last Updated 21 ಜೂನ್ 2022, 4:51 IST
ಕಳೆದ ವರ್ಷದ ಜುಲೈನಲ್ಲಿ ಅತಿವೃಷ್ಟಿಯಿಂದ ಮುರಿದು ಬಿದ್ದಿದ್ದ ಶಿರಸಿ ತಾಲ್ಲೂಕಿನ ಇಟಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಂಡವರಹೊಳೆ ತೂಗು ಸೇತುವೆ
ಕಳೆದ ವರ್ಷದ ಜುಲೈನಲ್ಲಿ ಅತಿವೃಷ್ಟಿಯಿಂದ ಮುರಿದು ಬಿದ್ದಿದ್ದ ಶಿರಸಿ ತಾಲ್ಲೂಕಿನ ಇಟಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಂಡವರಹೊಳೆ ತೂಗು ಸೇತುವೆ   

ಶಿರಸಿ: ಕಳೆದ ಜುಲೈನಲ್ಲಿ ಅತಿವೃಷ್ಟಿಯಿಂದ ಪಾಂಡವರ ಹೊಳೆ ಉಕ್ಕೇರಿದ್ದರಿಂದ ಕೊಚ್ಚಿಹೋಗಿದ್ದ ಇಟಗುಳಿ ಸಮೀಪದ ತೂಗು ಸೇತುವೆಯ ಮರುನಿರ್ಮಾಣ ನಡೆದಿಲ್ಲ. ಇದರಿಂದ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರಿಗೆ ಸಂಪರ್ಕಕ್ಕೆ ಅಡ್ಡಿಯಾಗಿದೆ.

ಇಟಗುಳಿ ಗ್ರಾಮ ಪಂಚಾಯ್ತಿಯ ಕೊಪ್ಪ ಸಮೀಪ ಎರಡು ದಶಕದ ಹಿಂದೆ ನಿರ್ಮಿಸಲಾಗಿದ್ದ ತೂಗುಸೇತುವೆ ನದಿ ರಭಸಕ್ಕೆ ಮುರಿದು ಬಿದ್ದಿದೆ. ಸೇತುವೆ ಅವಶೇಷಗಳು ಈಗಲೂಹಾಗೆಯೆ ಉಳಿದುಕೊಂಡಿದೆ. ಮಳೆಗಾಲದಲ್ಲಷ್ಟೇ ಅಲ್ಲದೆ ಬೇಸಿಗೆಯಲ್ಲೂ ನದಿ ದಾಟಿ ಸಾಗುವುದು ಗ್ರಾಮಸ್ಥರಿಗೆ ಕಷ್ಟವಾಗಿದೆ.

ನೀರ್ನಳ್ಳಿ, ಇಡ್ತಳ್ಳಿ, ಶಿಂಗನಮನೆ, ಗುಬ್ಬಿಗದ್ದೆ ಸೇರಿದಂತೆ ಏಳಕ್ಕೂ ಹೆಚ್ಚು ಗ್ರಾಮಗಳಿಗೆ ಹುಲೇಕಲ್ ಸಂಪರ್ಕಿಸಲು ತೂಗುಸೇತುವೆ ಅನುಕೂಲವಾಗಿತ್ತು. ಗ್ರಾಮದ ವಿದ್ಯಾರ್ಥಿಗಳು ಹುಲೇಕಲ್ ಪ್ರೌಢಶಾಲೆಗೆ ತೆರಳಲು ದಾರಿ ಸುಗಮ ಮತ್ತು ಸಮೀಪವಾಗಿತ್ತು. ಅನೇಕ ಕೃಷಿಕರಿಗೂ ಜಮೀನುಗಳಿಗೆ ತೆರಳಲು ಅನುಕೂಲವನ್ನು ಸೇತುವೆ ಕಲ್ಪಿಸಿತ್ತು.

ADVERTISEMENT

‘ಇಡ್ತಳ್ಳಿ, ಶಿಂಗನಮನೆ ಭಾಗದ ಗ್ರಾಮಸ್ಥರು ಹುಲೇಕಲ್‍ಗೆ ತೆರಳಲು ಮುಖ್ಯರಸ್ತೆಯಿಂದ ಸಾಗಿದರೆ 15 ಕಿ.ಮೀ. ದೂರ ಕ್ರಮಿಸಬೇಕಿದೆ. ತೂಗು ಸೇತುವೆ ಇದ್ದರೆ ಒಳ ರಸ್ತೆಯಲ್ಲಿ ಸಾಗಿದರೆ 6–7 ಕಿ.ಮೀ. ದೂರ ಕಡಿಮೆ ಆಗುತ್ತಿತ್ತು. ವಿದ್ಯಾರ್ಥಿಗಳು, ಕೃಷಿಕರಿಗೆ ಈ ಮಾರ್ಗ ಅಗತ್ಯವಿದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯೆ ಗೀತಾ ಭೋವಿ.

‘ನೂರಾರು ಜನರಿಗೆ ಅನುಕೂಲವಾಗಿರುವ ತೂಗುಸೇತುವೆಯನ್ನು ಮರು ನಿರ್ಮಿಸುವಂತೆ ಪ್ರವಾಸೋದ್ಯಮ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ವರ್ಷ ಕಳೆದರೂ ಮರುನಿರ್ಮಾಣಕ್ಕೆ ಪ್ರಯತ್ನ ನಡೆದಿಲ್ಲರುವುದು ಬೇಸರದ ಸಂಗತಿ’ ಎಂದರು.

‘ಮಕ್ಕಳು ಪ್ರೌಢಶಾಲೆಗೆ ತೆರಳಲು ಮುಖ್ಯರಸ್ತೆ ಮೂಲಕ ಬಸ್‍ನಲ್ಲಿ ಪ್ರಯಾಣಿಸಬೇಕಿದೆ. ತೂಗುಸೇತುವೆ ಇದ್ದರೆ ಸೈಕಲ್ ಮೂಲಕ ಸಾಗುತ್ತಿದ್ದರು. ಪ್ರಯಾಣದ ದೂರವೂ ಕಡಿಮೆ ಇತ್ತು. ಆದಷ್ಟು ಬೇಗನೆ ಸೇತುವೆ ಮರುನಿರ್ಮಾಣವಾಗಲಿ’ ಎಂಬುದು ಗ್ರಾಮಸ್ಥರಾದ ಪ್ರದೀಪ ಹೆಗಡೆ ಇನ್ನಿತರರ ಒತ್ತಾಯ.

ಪ್ರಸ್ತಾವ ಸಲ್ಲಿಕೆ:‘ಇಟಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಂಡವರಹೊಳೆ ತೂಗು ಸೇತುವೆ ಮರುನಿರ್ಮಾಣಕ್ಕೆ ₹25 ಲಕ್ಷಕ್ಕೂ ಹೆಚ್ಚು ಅನುದಾನದ ಅಗತ್ಯವಿದೆ. ಕಳೆದ ವರ್ಷವೇ ಮರುನಿರ್ಮಾಣಕ್ಕೆ ಅನುದಾನ ಕೋರಿ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅನುಮತಿ ದೊರೆತದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.