
ಶಿರಸಿ: ಮಲೆನಾಡಿನ ಭಾಗದ ಆಲೆಮನೆಗಳಲ್ಲಿ ಸಿದ್ಧವಾಗಿರುವ ಸಾಂಪ್ರದಾಯಿಕ ಬೆಲ್ಲಕ್ಕೆ ಈ ವರ್ಷ ಮಾರುಕಟ್ಟೆಯಲ್ಲಿ ಭಾರಿ ದರ ಸಿಕ್ಕಿದೆ. ಅತಿವೃಷ್ಟಿ ಮತ್ತು ರೋಗಬಾಧೆಯಿಂದ ಇಳುವರಿ ಕುಸಿತ ಕಂಡು ಕಂಗೆಟ್ಟಿದ್ದ ಕಬ್ಬು ಬೆಳೆಗಾರರಲ್ಲಿ ಇದು ಸಮಾಧಾನ ತಂದಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ಬೆಲ್ಲದ ದರ ಗಗನಕ್ಕೇರಿದೆ. 20 ಕೆಜಿಯ ಒಂದು ಡಬ್ಬ ಬೆಲ್ಲದ ದರ ₹3,500 ರಿಂದ ₹3,700ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬೆಲ್ಲದ ದರ ₹ 2,300 ರಿಂದ ₹2,500 ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರತಿ ಡಬ್ಬಕ್ಕೆ ₹1 ಸಾವಿರಕ್ಕೂ ಅಧಿಕ ದರ ಏರಿಕೆಯಾಗಿದೆ.
‘ಈ ಬಾರಿ ಕಬ್ಬಿನ ಇಳುವರಿ ಕುಂಠಿತಗೊಳ್ಳಲು ಹವಾಮಾನ ವೈಪರೀತ್ಯ ಕಾರಣ. ಕಬ್ಬು ನಾಟಿ ವೇಳೆ ಮೇ ತಿಂಗಳಲ್ಲೇ ಮಳೆ ಸುರಿಯಿತು. ಬಹುತೇಕ ಕಡೆ ಕಬ್ಬು ಭೂಮಿಯಲ್ಲೇ ಕೊಳೆಯಿತು. ಇನ್ನುಳಿದ ಕಡೆ ಅತಿಯಾದ ತೇವಾಂಶದಿಂದ ಕಬ್ಬು ಚಿಗುರುವುದು ವಿಳಂಬವಾಯಿತು. ಇದೆಲ್ಲದರ ನಂತರವೂ ನಿರಂತರ ಮಳೆಯಿಂದ ಕಬ್ಬಿನ ಬೆಳೆ ಹದಕ್ಕೆ ಬರಲಿಲ್ಲ’ ಎಂದು ಶಿರಸಿಯ ಕಬ್ಬು ಬೆಳೆಗಾರ ಸುಭಾಷ ಶಿರಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಿಸಿಲಿನ ಕೊರತೆ ಮತ್ತು ಅತಿಯಾದ ಮಳೆಯಿಂದ ಕಬ್ಬು ಉತ್ತಮವಾಗಿ ಬೆಳೆಯದೆ, ಗಣ್ಣುಗಳು ಚಿಕ್ಕದಾಗಿದ್ದವು. ಕಟಾವಿಗೆ ಕೇವಲ ಒಂದೆರಡು ತಿಂಗಳು ಬಾಕಿ ಇರುವಾಗ ರೋಗಬಾಧೆ ಕಾಣಿಸಿಕೊಂಡು ಕಬ್ಬು ಒಡೆದ ಪರಿಣಾಮ, ವಾರ್ಷಿಕ ಇಳುವರಿಯಲ್ಲಿ ಶೇ 35 ರಿಂದ 40ರಷ್ಟು ಭಾರಿ ಕುಸಿತವಾಗಿದೆ. ಇದರ ಮಧ್ಯೆ ಆಲೆಮನೆಯಲ್ಲಿ ತಯಾರಾಗುವ ಬೆಲ್ಲಕ್ಕೆ ದರ ಏರಿಕೆಯಾಗಿದ್ದು ಸ್ವಲ್ಪ ಸಮಾಧಾನ ತಂದಿದೆ’ ಎಂದರು.
ಸಾಂಪ್ರದಾಯಿಕವಾಗಿ ಸಿದ್ಧವಾದ ಬೆಲ್ಲವು ಗ್ರಾಹಕರ ಪಾಲಿಗೆ ತುಟ್ಟಿಯಾಗಿದ್ದರೂ ಇಳುವರಿ ನಷ್ಟ ಅನುಭವಿಸಿದ ಬೆಳೆಗಾರರಿಗೆ ಮಾತ್ರ ಈ ದಾಖಲೆ ದರವು ಒಂದಷ್ಟು ಆಸರೆಯಾಗಿದೆ.ಸೋಮಯ್ಯ ಚಾವಡಿ ಕಬ್ಬು ಬೆಳೆಗಾರ
ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಬೆಲ್ಲಕ್ಕಿಂತ ಆಲೆಮನೆಗಳಲ್ಲಿ ಸಾಂಪ್ರದಾಯಿಕವಾಗಿ ತಯಾರಿಸುವ ಬೆಲ್ಲವನ್ನೇ ಜನರು ಹೆಚ್ಚು ಇಷ್ಟಪಡುತ್ತಾರೆ.ಸುಭಾಷ ಶಿರಾಲಿ ಕಬ್ಬು ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.