ADVERTISEMENT

ಹೊಸತನದಿ ಕಂಗೊಳಿಸುವ ಬಸದಿ

8 ಶತಮಾನ ಹಳೆಯದಾದ ಪಾರ್ಶ್ವನಾಥ ಮೂರ್ತಿ ಸಂರಕ್ಷಣೆ

ಗಣಪತಿ ಹೆಗಡೆ
Published 14 ಮೇ 2022, 15:34 IST
Last Updated 14 ಮೇ 2022, 15:34 IST
ಶಿರಸಿಯಲ್ಲಿ ಮರುನಿರ್ಮಾಣಗೊಂಡಿರುವ ಪಾರ್ಶ್ವನಾಥ ತೀರ್ಥಂಕರರ ಬಸದಿ
ಶಿರಸಿಯಲ್ಲಿ ಮರುನಿರ್ಮಾಣಗೊಂಡಿರುವ ಪಾರ್ಶ್ವನಾಥ ತೀರ್ಥಂಕರರ ಬಸದಿ   

ಶಿರಸಿ: ನಾಡಿನ ಶಕ್ತಿಪೀಠ ಮಾರಿಕಾಂಬಾ ದೇವಾಲಯದ ಕಾರಣ ಶಿರಸಿಯ ಖ್ಯಾತಿ ಹೆಚ್ಚಿದೆ. ಈಗ ರಾಯರಪೇಟೆಯ ಶಂಕರ ಹೊಂಡದ ಸಮೀಪ ಪುನರುಜ್ಜೀವನ ಪಡೆದ ಎಂಟು ಶತಮಾನದಷ್ಟು ಹಳೆಯ ಬಸದಿಯೂ ಆಕರ್ಷಣೆಯ ಕೇಂದ್ರವಾಗಲಿದೆ.

ಜೈನಧರ್ಮದ 23ನೇ ತೀರ್ಥಂಕರ ಪಾರ್ಶ್ವನಾಥರ ಬಸದಿ ಹೊಸತನದಲ್ಲಿ ರೂಪುಗೊಂಡಿದೆ. ಎಂಟು ನೂರು ವರ್ಷಗಳಿಗೂ ಮೊದಲು ಸ್ಥಾಪನೆಯಾಗಿದ್ದ ಬಸದಿ ದುಸ್ಥಿತಿಯಲ್ಲಿತ್ತು. ಅದರ ಪುನರುಜ್ಜೀವನ ಕಾರ್ಯ ಈಚೆಗಷ್ಟೆ ಮುಗಿದಿದೆ.

ಅಪರೂಪದ ಶಿಲೆಗಳನ್ನು ಬಳಸಿ ಧರ್ಮಸ್ಥಳದ ಶಿಲ್ಪಿಗಳು ಬಸದಿ ನಿರ್ಮಿಸಿದ್ದಾರೆ. ಒಳಗಿನ ಗರ್ಭಗೃಹ ಮತ್ತು ಅದರ ನೆಲಹಾಸುಗಳು ಪುರಾತನ ಬಸದಿಯದ್ದೇ ಆಗಿವೆ. ಬಸದಿಗೆ ದೇವಾಲಯಗಳ ಮಾದರಿಯ ಗೋಪುರ ರಚಿಸಿರುವುದು ವಿಶೇಷವಾಗಿದೆ.

ADVERTISEMENT

ಸಂಪೂರ್ಣ ಶಿಲಾಮಯ ಬಸದಿಯನ್ನು ಈಗಲೂ ಮೂಲಸ್ವರೂಪಕ್ಕೆ ಧಕ್ಕೆ ಬರದಂತೆ ಕಟ್ಟಲಾಗಿದೆ. ಇಲ್ಲಿ ಪುರಾತನ ಪಾರ್ಶ್ವನಾಥರ ವಿಗ್ರಹವನ್ನೇ ಮರು ಸ್ಥಾಪನೆ ಮಾಡಲಾಗಿದೆ. ನಗರದ ಹೃದಯ ಭಾಗದಲ್ಲಿರುವ ಬಸದಿಗೆ ಹೊಸ ಸ್ಪರ್ಶ ಸಿಕ್ಕಿರುವುದರಿಂದ ಇದನ್ನು ಆಧ್ಯಾತ್ಮಿಕ ತಾಣದ ಜತೆಗೆ ಪ್ರವಾಸಿ ತಾಣವಾಗಿಯೂ ರೂಪಿಸುವ ಯೋಜನೆಯಲ್ಲಿ ಜೈನ ಸಮುದಾಯವಿದೆ.

‘ನಗರದಲ್ಲಿ ಶತಮಾನಗಳಷ್ಟು ಹಿಂದೆ ಹಲವು ಬಸದಿಗಳಿದ್ದವು ಎಂಬ ಉಲ್ಲೇಖವಿದೆ. ಈಚೆಗೆ ಬೆರಳೆಣಿಕೆಯಷ್ಟು ಮಾತ್ರ ಉಳಿದುಕೊಂಡಿವೆ. ಅವುಗಳ ಪೈಕಿ ಅತಿ ‍ಪುರಾತನವಾದ ಪಾರ್ಶ್ವನಾಥ ಬಸದಿಯನ್ನು ಅಭಿವೃದ್ಧಿಪಡಿಸಿದ್ದೇವೆ’ ಎನ್ನುತ್ತಾರೆ ಉದ್ಯಮಿ ದೇವರಾಜ ಕೆಲ್ಲಾ.

‘ಬಸದಿ ಧಾರ್ಮಿಕ ತಾಣವೊಂದೇ ಅಲ್ಲ. ಇದು ಐತಿಹಾಸಿಕ ಕುರುಹುಗಳನ್ನು ವಿವರಿಸುವ ಕ್ಷೇತ್ರವೂ ಆಗಿದೆ. ಪಾರ್ಶ್ವನಾಥ ತೀರ್ಥಂಕರರ ಅಪರೂಪದ ಬಸದಿಯಲ್ಲಿ ಶಿರಸಿಯ ಬಸದಿಯೂ ಒಂದಾಗಿದೆ. ಇದರ ವೀಕ್ಷಣೆಗೆ ಹಲವರು ಬರತೊಡಗಿದ್ದಾರೆ’ ಎಂದು ತಿಳಿಸಿದರು.

‘ಸೀಮಿತ ಸಂಖ್ಯೆಯಲ್ಲಿದ್ದರೂ ಜೈನ ಸಮುದಾಯದ ಒಗ್ಗಟ್ಟಿನ ಫಲವಾಗಿ ಅವನತಿಯ ಅಂಚಿನಲ್ಲಿದ್ದ ಬಸದಿ ಉಳಿದುಕೊಂಡಿದೆ. ಇತರ ಧರ್ಮೀಯರು ಕೂಡ ಬಸದಿಗೆ ಭೇಟಿ ನೀಡಲು ಆಸಕ್ತಿ ತೋರುತ್ತಿದ್ದಾರೆ. ಆಸಕ್ತರಿಗೆ ಬೆಳಿಗ್ಗೆ ಮತ್ತು ಸಂಜೆಯ ನಿಗದಿ ಅವಧಿಯಲ್ಲಿ ಬಸದಿ ವೀಕ್ಷಣೆಗೆ ಅವಕಾಶ ಮಾಡಿಕೊಡಾಗುವುದು’ ಎಂದು ಮಹಾವೀರ ಆಲೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.