ADVERTISEMENT

ಗಣಪತಿ ಭಟ್ಟರ ಗಾನಕ್ಕೆ ಪ್ರೇಕ್ಷಕರು ಮಂತ್ರಮುಗ್ಧ

ಜನನಿ ಸಂಗೀತೋತ್ಸವ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 13:41 IST
Last Updated 24 ಫೆಬ್ರುವರಿ 2020, 13:41 IST
ಶಿರಸಿಯ ಜನನಿ ಸಂಗೀತೋತ್ಸವದಲ್ಲಿ ಪಂಡಿತ್ ಗಣಪತಿ ಭಟ್ ಗಾಯನ ಪ್ರಸ್ತುತಪಡಿಸಿದರು
ಶಿರಸಿಯ ಜನನಿ ಸಂಗೀತೋತ್ಸವದಲ್ಲಿ ಪಂಡಿತ್ ಗಣಪತಿ ಭಟ್ ಗಾಯನ ಪ್ರಸ್ತುತಪಡಿಸಿದರು   

ಶಿರಸಿ: ಶಾಸ್ತ್ರೀಯ ಬದ್ಧವಾಗಿ ಸಂಗೀತದ ಮೂಲಕ ಭಗವಂತನ ಆರಾಧನೆ ಹೆಚ್ಚು ಶ್ರೇಷ್ಠ. ಋಷಿಮುನಿಗಳು ಕೂಡ ಇದನ್ನೇ ಹೇಳಿದ್ದರು ಎಂದು ಹಿಂದೂಸ್ತಾನಿ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಹೇಳಿದರು.

ಭಾನುವಾರ ಮುಕ್ತಾಯಗೊಂಡ ಇಲ್ಲಿನ ಜನನಿ ಮ್ಯೂಸಿಕ್ ಸಂಸ್ಥೆಯ ‘ಸುರ ಸಾಧೆ’ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಂಗೀತದಿಂದ ಸಂಸ್ಕಾರಯುತ ವ್ಯಕ್ತಿತ್ವ ಬೆಳೆಯುತ್ತದೆ. ಮನಸ್ಸಿನ ಏಕಾಗ್ರತೆ, ಆ ಮೂಲಕ ಸಾಧನೆ ಸಾಧ್ಯವಾಗುತ್ತದೆ. ಸಂಗೀತಕ್ಕೆ ರೋಗ ಗುಣಪಡಿಸುವ ಶಕ್ತಿಯಿದೆ. ನಮ್ಮ ನೆಲದ ಕಲೆಯನ್ನು ಮಕ್ಕಳಿಗೆ ಕಲಿಸಿ, ಅವರ ಜೀವನದ ಸಾಧನೆಗೆ ದಾರಿ ತೋರಬೇಕಾಗಿದೆ’ ಎಂದರು.

ಟಿಎಸ್‌ಎಸ್ ನಿರ್ದೇಶಕ ಶಶಾಂಕ ಹೆಗಡೆ, ಉದ್ಯಮಿ ಲೋಕೇಶ ಹೆಗಡೆ, ದಿಶಾಗ್ರೂಪ್ ಮುಖ್ಯಸ್ಥ ದೀಪಕ ದೊಡ್ಡೂರು ಇದ್ದರು. ಗಣಪತಿ ಭಟ್ ಅವರಿಗೆ ಜನನಿ ಮ್ಯೂಸಿಕ್ ಸಂಸ್ಥೆಯ ನಿರ್ದೇಶಕಿ ರೇಖಾ ದಿನೇಶ ಗುರು ಗೌರವ ಸಲ್ಲಿಸಿದರು. ಇದಕ್ಕೂ ಪೂರ್ವ ಸಂಗೀತ ಶಾಲೆಯ ವಿದ್ಯಾರ್ಥಿಗಳ ಗಾಯನ ನಡೆಯಿತು. ಜನನಿ ಮ್ಯೂಸಿಕ್ ಸಂಸ್ಥೆಯ ಮುಖ್ಯಸ್ಥ ದಿನೇಶ ಹೆಗಡೆ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು.

ADVERTISEMENT

ನಂತರ ಗಣಪತಿ ಭಟ್ ಅವರು ಸಂಗೀತ ಕಚೇರಿ ನಡೆಸಿಕೊಟ್ಟರು. ರಾಗ್ ಜೋಗ ಹಾಡಿದ ನಂತರ ಅವರು ಭಜನ್, ಭಕ್ತಿಗೀತೆ ಹಾಡಿ, ರಾಗ್ ಭೈರವಿಯೊಂದಿಗೆ ಸಂಗೀತ ಕಚೇರಿ ಪೂರ್ಣಗೊಳಿಸಿದರು. ಗೋಪಾಲಕೃಷ್ಣ ಹೆಗಡೆ ಕಲಭಾಗ್ ತಬಲಾದಲ್ಲಿ, ಸತೀಶ ಭಟ್ಟ ಹೆಬ್ಬಾರ್ ಸಂವಾದಿನಿಯಲ್ಲಿ, ವಿನಾಯಕ ಹಿರೇಹದ್ದ ಮತ್ತು ಸಂಪದಾ ಸತೀಶ ತಂಬೂರಾದಲ್ಲಿ ಸಾಥ್ ನೀಡಿದರು. ಭಟ್ಟರ ಕಂಚಿನ ಕಂಠದ ಗಾಯನವು ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಕೊಂಡೊಯ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.