ADVERTISEMENT

ಜನತಾ ಕರ್ಫ್ಯೂಗೆ ಶಿರಸಿ ಸ್ತಬ್ಧ: ಪ್ರವಹಿಸಿದ ನೀರವತೆ

ಸಂಜೆ ಐದು ಗಂಟೆಗೆ ಮೊಳಗಿದ ಗಂಟೆ, ಜಾಗಟೆ ನಾದ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 13:11 IST
Last Updated 22 ಮಾರ್ಚ್ 2020, 13:11 IST
ಶಿರಸಿ ತಾಲ್ಲೂಕಿನ ಪ್ರವಾಸಿಕ್ಷೇತ್ರ ಬನವಾಸಿಯ ರಥಬೀದಿ ನಿಶ್ಶಬ್ದವಾಗಿತ್ತು
ಶಿರಸಿ ತಾಲ್ಲೂಕಿನ ಪ್ರವಾಸಿಕ್ಷೇತ್ರ ಬನವಾಸಿಯ ರಥಬೀದಿ ನಿಶ್ಶಬ್ದವಾಗಿತ್ತು   

ಶಿರಸಿ: ಪ್ರಧಾನಿ ನರೇಂದ್ರ ಮೋದಿ ಅವರು ಕರೆನೀಡಿದ್ದ ಜನತಾ ಕರ್ಫ್ಯೂ, ಜನರಿಗೆ ವಿಭಿನ್ನ ಅನುಭವ ನೀಡಿತು. ಒಂದಿಲ್ಲೊಂದು ಕೆಲಸಕ್ಕಾಗಿ ಮನೆಯಿಂದ ಹೊರ ಹೋಗುತ್ತಿದ್ದ ಜನರು, ಭಾನುವಾರದ ಇಡೀ ದಿನವನ್ನು ಕುಟುಂಬದ ಸದಸ್ಯರೊಂದಿಗೆ ಕಳೆದರು.

ಸರ್ಕಾರಿ ಕಚೇರಿಗಳು, ಶಾಲೆ–ಕಾಲೇಜು, ಖಾಸಗಿ ಸಂಸ್ಥೆಗಳಿಗೆ ಭಾನುವಾರ ರಜೆಯಿದ್ದರೂ, ಅಂಗಡಿಕಾರರು, ವ್ಯಾಪಾರಸ್ಥರು, ಕಾರ್ಮಿಕರಿಗೆ ವಾರದ ಎಲ್ಲ ದಿನಗಳೂ ಸಮಾನ. ಆದರೆ, ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಇವರೆಲ್ಲರೂ ಮನೆಯಲ್ಲೇ ಇದ್ದು, ಒಟ್ಟಾಗಿ ಊಟ–ತಿಂಡಿ ಮಾಡಿದರು. ದೇಶವ್ಯಾಪಿ ಕೊರೊನಾ ವೈರಸ್ ಹರಡುತ್ತಿರುವ ಬಗ್ಗೆ ಟಿ.ವಿ.ಯಲ್ಲಿ ನಡೆದ ಚರ್ಚೆಗಳನ್ನು ವೀಕ್ಷಿಸಿದರು.

ಇಡೀ ನಗರ ಸ್ತಬ್ಧವಾಗಿತ್ತು. ಬಸ್‌ ಸಂಚಾರ, ಆಟೊರಿಕ್ಷಾ ಓಡಾಟ ಸಂಪೂರ್ಣ ಸ್ಥಗಿತಗೊಂಡಿತ್ತು. ಎಲ್ಲ ಅಂಗಡಿಗಳು ಬಂದಾಗಿದ್ದವು. ಅಲ್ಲೋ ಇಲ್ಲೋ ಬೈಕ್ ಹಿಡಿದು ರಸ್ತೆಗೆ ಬಂದಿದ್ದ ಯುವಕರನ್ನು ಪೊಲೀಸರು ಮನೆಗೆ ಕಳುಹಿಸಿದರು. ಸುಖಾಸುಮ್ಮನೆ ಪೇಟೆಗೆ ಬಂದಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ನಗರದ ಮುಖ್ಯ ವೃತ್ತಗಳಲ್ಲಿ ಪೊಲೀಸರನ್ನು ಹೊರತುಪಡಿಸಿದರೆ, ಇನ್ನಾರೂ ಕಾಣುತ್ತಿರಲಿಲ್ಲ. ಕೆಲವು ಔಷಧ ಅಂಗಡಿಗಳು ಮಾತ್ರ ಅರ್ಧ ಬಾಗಿಲು ತೆರೆದು, ತುರ್ತು ಅಗತ್ಯ ಔಷಧಗಳನ್ನು ನೀಡಿದವು.

ADVERTISEMENT

ಪ್ರಧಾನಿ ನೀಡಿದ್ದ ಸಂದೇಶದಂತೆ ಸಂಜೆ 5 ಗಂಟೆಗೆ ಜನರು ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿದರು, ಜಾಗಟೆ ಬಾರಿಸಿದರು. ಶಂಖ ನಾದ ಮೊಳಗಿಸಿದರು. ಇಡೀ ನಗರದಲ್ಲಿ ಜಾಗಟೆ, ಗಂಟೆಯ ಸದ್ದು ಮಾರ್ದನಿಸಿತು.

ಪ್ರಯಾಣಿಕರ ಪರದಾಟ:ಬೆಳಿಗ್ಗೆ 8.15ರ ಸುಮಾರಿಗೆ ಬೆಂಗಳೂರಿನಿಂದ ಬಂದ ಬಸ್ಸನ್ನು ಪೊಲೀಸರು ಚಿಪಗಿ ಸರ್ಕಲ್‌ನಲ್ಲಿ ತಡೆದರು.ಬಸ್ ಚಾಲಕ ಪ್ರಯಾಣಿಕರನ್ನು ಅಲ್ಲಿಯೇ ಬಿಟ್ಟು, ಹುಬ್ಬಳ್ಳಿ ರಸ್ತೆಯಲ್ಲಿ ಬಸ್ಸನ್ನು ವಾಪಸ್ ತಿರುಗಿಸಿಕೊಂಡು ಹೋದರು. ವಿಷಯ ತಿಳಿದ ಡಿವೈಎಸ್ಪಿ ಜಿ.ಟಿ.ನಾಯಕ ಅವರು, ಬಸ್ ಅನ್ನು ವಾಪಸ್ ಕರೆಯಿಸಿದರು. ಅಷ್ಟರಲ್ಲಿ ಕೆಲವು ಪ್ರಯಾಣಿಕರು ಸಂಬಂಧಿಗಳ ವಾಹನದಲ್ಲಿ ಮನೆಗೆ ಹೋದರು. ಪ್ರಯಾಣಿಕರು ಬೆಂಗಳೂರಿನಿಂದ ಬಂದಿರುವ ಕಾರಣ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮನೆಗೆ ಹೋಗಬೇಕು ಎಂದು ಜಿ.ಟಿ. ನಾಯಕ ಸೂಚಿಸಿದರು. ಅದೇ ಬಸ್‌ನಲ್ಲಿ ಆಸ್ಪತ್ರೆಗೆ ಹೋಗಿ ಪ್ರಯಾಣಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.