ADVERTISEMENT

ಜೆಡಿಎಸ್ ಸಂಘಟನೆಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ: ಸೂರಜ ನಾಯ್ಕ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:34 IST
Last Updated 12 ಫೆಬ್ರುವರಿ 2026, 6:34 IST
   

ಕುಮಟಾ: ‘ಜೆಡಿಎಸ್ ಪಕ್ಷ ಸಂಘಟಿಸುವ ಉದ್ದೇಶದಿಂದ ಮುಂದಿನ ತಿಂಗಳು ಜಿಲ್ಲೆಯಾದ್ಯಂತ ಪ್ರವಾಸ ಕೈಕೊಂಡು ಕೆಳ ಹಂತದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲಾಗುವುದು’ ಎಂದು ಪಕ್ಷದ ನೂತನ ಜಿಲ್ಲಾ ಘಟಕದ ಅಧ್ಯಕ್ಷ ಸೂರಜ ನಾಯ್ಕ ಸೋನಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪಕ್ಷ ರಜತ ಸಂಭ್ರವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಖುಷಿ ತಂದಿದೆ. ಸಂಘಟನೆಯ ಪ್ರವಾಸದ ಬಳಿಕ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗುವುದು. ಜೆಡಿಎಸ್ ಹಾಗೂ ಎನ್.ಡಿ.ಎ ಮೈತ್ರಿ ಕೂಟ ಜಿಲ್ಲೆಯಲ್ಲಿ ಬಲಪಡಿಸುವ ಬಗ್ಗೆ ವರಿಷ್ಠರು ಸೂಚನೆ ನೀಡಿದ್ದಾರೆ. ಆದ್ದರಿಂದ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪಕ್ಷ ಕಾರ್ಯಕರ್ತರಲ್ಲಿ ಹೆಚ್ಚಿನ ಶಕ್ತಿ ತುಂಬಬೇಕಿದೆ’ ಎಂದರು.

‘ಜಿಲ್ಲೆಯ ಶರವಾತಿ ಪಂಪ್ಡ್ ಸ್ಟೋರೇಜ್, ಅಘನಾಶಿನಿ– ಬೇಡ್ತಿ ತಿರುವು ಯೋಜನೆ ಅನುಷ್ಠಾನ ವಿರುದ್ಧ ಪ್ರತಿಭಟನೆ, ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಬಗ್ಗೆ ಪಕ್ಷದ ಹೋರಾಟ ಮುಂದುವರಿಯಲಿದೆ. ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಉದ್ಯಮ, ರೈತರು, ಮೀನುಗಾರರು ಹಾಗೂ ಯುವಜನತೆಯ ಸಬಲೀಕರಣಕ್ಕೆ ಹೋರಾಟ ಮುಂದುವರಿಸುವ ಮೂಲಕ ಎನ್.ಡಿ.ಎ ಕೂಟ ಅಧಿಕಾರಕ್ಕೆ ತರಲು ಪಕ್ಷ ಹೋರಾಟ ಮಾಡುತ್ತದೆ’ ಎಂದರು.

ADVERTISEMENT

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಜಿ. ಹೆಗಡೆ, ಹೊನ್ನಾವರ ಘಟಕ ಅಧ್ಯಕ್ಷ ಟಿ.ಟಿ. ನಾಯ್ಕ, ರಾಜೇಶ್ವರಿ ಹೆಗಡೆ, ಸತೀಶ ಹೆಗಡೆ, ಅಜಿತ್ ಜೊಯಡಾ, ಹರೀಶ ಗೌಡ, ಕುಸುಮಾ ಗೌಡ, ಮಂಜುನಾಥ ಗೌಡ, ದತ್ತ ಪಟಗಾರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.