ADVERTISEMENT

ವಿದ್ಯುತ್ ಉಪಕೇಂದ್ರಕ್ಕೆ ಕಾಗೇರಿ ಕೊಡುಗೆ ಅಪಾರ: ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 14:11 IST
Last Updated 7 ಮಾರ್ಚ್ 2025, 14:11 IST

ಸಿದ್ದಾಪುರ: ‘ತಾಲ್ಲೂಕಿನ ಕಾನಸೂರಿನಲ್ಲಿ ಕೆಪಿಟಿಸಿಎಲ್‌ನ 111 ಕಿಲೊ ವಾಟ್ ವಿದ್ಯುತ್ ಉಪ ಕೇಂದ್ರವನ್ನು ಆರಂಭಿಸಲು ಕಾಂಗ್ರೆಸ್ ಸರ್ಕಾರದಿಂದ ₹26 ಕೋಟಿ ಮಂಜೂರಾಗಿರುವುದು ಕೇವಲ ಕಾಂಗ್ರೆಸ್ ಶಾಸಕರಾದ ಭೀಮಣ್ಣ ನಾಯ್ಕ ಅವರ ಪರಿಶ್ರಮದಿಂದ ಮಾತ್ರವಲ್ಲ’ ಎಂದು ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ ಹೇಳಿದರು.

ಪಟ್ಟಣದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘2009 ರಿಂದ ಕಾನಸೂರಿನಲ್ಲಿ ಉಪಕೇಂದ್ರ ಸ್ಥಾಪಿಸಲು ಪ್ರಯತ್ನ ನಡೆದಿದೆ. ಕಾನಸೂರಿನಲ್ಲಿ ಸರ್ಕಾರಿ ಜಾಗ ಲಭ್ಯವಿಲ್ಲದೆ ಇರುವುದರಿಂದ ಅರಣ್ಯ ಇಲಾಖೆಗೆ ಸೇರಿದ ಸರ್ವೆ ನಂಬರ್ 54 ರಲ್ಲಿ 1.33 ಹೆಕ್ಟೇರ್ ಜಾಗವನ್ನು ಗುರುತಿಸಿ ಅಂದಿನ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸತತ ಪ್ರಯತ್ನದಿಂದ ಆ ಜಾಗ ಕೆಪಿಟಿಸಿಎಲ್‌ಗೆ ವರ್ಗಾವಣೆಗೊಂಡಿದೆ. ಅಂತಯೇ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಸುನಿಲ್ ಕುಮಾರ್ ಮತ್ತು ಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರಿಶ್ರಮದಿಂದ ಕೆಪಿಟಿಸಿಎಲ್‌ಇಂದ ಅರಣ್ಯ ಇಲಾಖೆಗೆ ನೀಡಬೇಕಾದ ಮೊತ್ತವನ್ನು ಸಹ ಸರ್ಕಾರದಿಂದ ಮಂಜೂರು ಮಾಡಿ ನೀಡಲಾಗಿತ್ತು’ ಎಂದರು.

‘ಅಂತೆಯೇ ₹1.6 ಲಕ್ಷ ರೂಗಳ ಟೆಂಡರ್ ಮೂಲಕ ಜಾಗದ ಸುತ್ತ ಬೇಲಿಯನ್ನೂ ನಿರ್ಮಿಸಲಾಗಿದೆ. ಉಪಕೇಂದ್ರ ಸ್ಥಾಪಿಸಲು ಬೇಕಾದ ಎಲ್ಲಾ ಪ್ರಕ್ರಿಯೆಗಳು ಬಿಜೆಪಿ ಅವಧಿಯಲ್ಲಿಯೇ ಪೂರ್ಣಗೊಂಡಿದ್ದು, ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು. ಪ್ರಸ್ತಾವನೆಯನ್ನು ಈಗಿನ ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಕಾನಸೂರಿನಲ್ಲಿ ಸ್ಥಾಪನೆಯಾಗಲಿರುವ ಉಪಕೇಂದ್ರ ಕೇವಲ ಶಾಸಕ ಭೀಮಣ್ಣ ನಾಯಕ ಅವರ ಪರಿಶ್ರಮದಿಂದ ಮಾತ್ರ ಸಾಧ್ಯವಾಗಿದೆ ಎಂಬಂತೆ ಬಿಂಬಿಸುತ್ತಿದ್ದಾರೆ’ ಎಂದರು.

ADVERTISEMENT

‘2009 ರಿಂದ ಗ್ರಿಡ್ ಸ್ಥಾಪಿಸಲು ವಿಶ್ವೇಶ್ವರ ಹೆಗಡೆ ಅವರು ಪರಿಶ್ರಮ ಪಟ್ಟು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಜನತೆಯ ಮುಂದೆ ಸತ್ಯವನ್ನು ತೆರೆದಿಡಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯಕ್ ಮಾತನಾಡಿ, ‘ಕಾಂಗ್ರೆಸ್ ನ ಕೆಲ ಮುಖಂಡರು ಶಾಸಕ ಭೀಮಣ್ಣ ಅವರು ಹೆಸ್ಕಾಂ ಉಪ ಕೇಂದ್ರಕ್ಕೆ ಅನುದಾನ ಮಂಜೂರು ಮಾಡಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಗ್ರಿಡ್ ಸ್ಥಾಪಿಸುವುದು ಕೆಪಿಟಿಸಿಎಲ್‌ನ ಕಾರ್ಯವೇ ಹೊರತು ಹೆಸ್ಕಾಂನದ್ದಲ್ಲ ಎಂಬ ಕನಿಷ್ಠ ಜ್ಞಾನವನ್ನು ಹೊಂದಿಲ್ಲ ಎಂಬುದು ಸ್ಪಷ್ಟ’ ಎಂದರು.

ರಾಜ್ಯ ಕಾರ್ಯಕಾರಣಿ ಸದಸ್ಯ ಕೆ ಜಿ ನಾಯ್ಕ ಹಣಜೀಬೈಲ್, ಜಿಲ್ಲಾ ವಿಶೇಷ ಆಹ್ವಾನಿತ ಗುರುರಾಜ್ ಶಾನಭಾಗ್, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ನಂದನ ಬೊರ್ಕರ್, ಪ್ರಮುಖರಾದ ವಿನಯ್ ಹೊನ್ನೇಗುಂಡಿ, ಎಸ್ ಕೆ ಮೇಸ್ತ, ಮಂಜುನಾಥ್ ಭಟ್, ವೆಂಕಟೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.