
ಕಾರವಾರ: ‘ಕೈಗಾದ ಅಣು ಸ್ಥಾವರದಲ್ಲಿ ನಡೆಯಲಿರುವ ಅಣಕು ಕಾರ್ಯಾಚರಣೆಯು ನೈಜ ವಿಪತ್ತು ಸಂಭವಿಸಿದ ಸನ್ನಿವೇಶ ಸೃಷ್ಟಿಸಿ, ಗರಿಷ್ಠಮಟ್ಟದ ಮುನ್ನೆಚ್ಚರಿಕೆ ಕೈಗೊಳ್ಳುವ ಕಾರ್ಯಾಚರಣೆ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಣು ಸ್ಥಾವರದಲ್ಲಿ ಡಿ. 11 ರಂದು ನಡೆಯಲಿರುವ ಅಣಕು ಕಾರ್ಯಚರಣೆ ಕುರಿತು ಅವರು ಪೂರ್ವಭಾವಿ ಸಭೆ ನಡೆಸಿದರು.
‘ಅಣು ಕಾರ್ಯಾಚರಣೆ ವೇಳೆ ಕೈಗಾ ಸುತ್ತಮುತ್ತಲಿನ ಜನರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಿ. ಕಾರ್ಯಾಚರಣೆ ಬಗ್ಗೆ ಅವರಿಗೆ ವಿವರ ಮಾಹಿತಿ ಒದಗಿಸಿ. ಕಾರ್ಯಾಚರಣೆಯಿಂದ ಜನರು ಭಯಭೀತರಾಗದಂತೆ ಎಚ್ಚರವಹಿಸಿ’ ಎಂದರು.
‘ಅಣಕು ಕಾರ್ಯಾಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳು ಮುಂದಾಗಬೇಕು. ಸಮನ್ವಯದ ಕೊರತೆ ಉಂಟಾಗಬಾರದು. ಕಾರ್ಯಚರಣೆ ಸಂದರ್ಭದಲ್ಲಿ ದೈನಂದಿನ ಸಾರ್ವಜನಿಕ ವ್ಯವಸ್ಥೆಗೆ ಯಾವುದೇ ಅಡಚಣೆಯಾಗದಂತೆ ಎಚ್ಚರವಹಿಸಬೇಕು’ ಎಂದರು.
ಕಾರ್ಯಾಚರಣೆಗೆ ಅಗತ್ಯವಿರುವ ವಾಹನಗಳ ವ್ಯವಸ್ಥೆ ಮಾಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ, ಕಾರ್ಯಾಚರಣೆ ನಡೆಯುವ ವ್ಯಾಪ್ತಿಯ ಪ್ರದೇಶಗಳಲ್ಲಿ ಸುರಕ್ಷತೆ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಡಿಸಿಎಫ್ ಸಿ.ರವಿಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ, ಎನ್‌ಪಿಸಿಐಎಲ್ ಹಿರಿಯ ಅಧಿಕಾರಿಗಳಾದ ಅಮೋಲ್ ಶುಕ್ಲಾ, ಚಿತ್ತರಂಜನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.