
ಕಾರವಾರ: ‘ಅಣು ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ದೇಶವು ಸ್ವಾವಲಂಬನೆ ಸಾಧಿಸಲು ಕೈಗಾ ಘಟಕದ ಕೊಡುಗೆಗಳು ಮುಖ್ಯ ಪಾತ್ರವಹಿಸಿವೆ. ಕೈಗಾದಲ್ಲಿನ 5, 6ನೇ ಘಟಕಗಳ ಕಾಂಕ್ರೀಟೀಕರಣ ಐತಿಹಾಸಿಕ ಕ್ಷಣವಾಗಿದೆ’ ಎಂದು ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತ್ ಕುಮಾರ ಮೊಹಂತಿ ಹೇಳಿದರು.
ತಾಲ್ಲೂಕಿನ ಕೈಗಾದ ಅಣು ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣದ ಮೊದಲ ಸುತ್ತಿನ ಕಾಂಕ್ರೀಟಿಕರಣಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಕೈಗಾದಲ್ಲಿನ 4 ಘಟಕಗಳಿಂದ ಸದ್ಯ 880 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹೊಸ ಘಟಕಗಳ ನಿರ್ಮಾಣ ಮುಗಿದ ಬಳಿಕ ಈ ಪ್ರಮಾಣ 2,280 ಮೆಗಾವ್ಯಾಟ್‌ಗೆ ಏರಿಕೆಯಾಗಲಿದೆ. 2047ರ ವೇಳೆಗೆ ದೇಶದಲ್ಲಿ 100 ಗಿಗಾ ವ್ಯಾಟ್ ಅಣು ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದ್ದು, 54 ಗಿಗಾ ವ್ಯಾಟ್‌ನ್ನು ಎನ್‌ಪಿಸಿಐಎಲ್ ಉತ್ಪಾದಿಸಲಿದೆ’ ಎಂದರು.
‘ಅಣು ವಿದ್ಯುತ್ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ ಸಾಕಾರವಾಗಿದೆ. ದೇಶದ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಶಕ್ತಿ ಉತ್ಪಾದನೆಯತ್ತ ದೃಢ ಹೆಜ್ಜೆ ಇರಿಸಿದ್ದೇವೆ. ನೀರು ಬಳಸದೆ ಸೋಡಿಯಂ ಮೆಟಾಲ್ ಬಳಸಿ ವಿದ್ಯುತ್ ಉತ್ಪಾದಿಸುವ ಫಾಸ್ಟ್ ಬ್ರೀಡಾರ್ ರಿಯಾಕ್ಟರ್ ಸ್ಥಾಪನೆ ದೇಶದಲ್ಲಿ ಶೀಘ್ರ ಸ್ಥಾಪನೆ ಆಗಲಿದೆ’ ಎಂದು ತಿಳಿಸಿದರು.
‘ಅಣು ವಿದ್ಯುತ್ ಉತ್ಪಾದನೆಯಲ್ಲಿ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೈಗಾದಲ್ಲಿ ಉದ್ದೇಶಿತ ಹೊಸ ಘಟಕಗಳು 2030ರ ವೇಳೆಗೆ ಕಾರ್ಯಾರಂಭಿಸಲಿವೆ’ ಎಂದರು.
ರಾಷ್ಟ್ರೀಯ ಅಣು ವಿದ್ಯುತ್ ನಿಗಮದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಭುವನಚಂದ್ರ ಪಾಠಕ್ ಮಾತನಾಡಿ, ‘ದೇಶದಲ್ಲಿ ಸತತ ಒಂದು ವರ್ಷಗಳಿಗೂ ಹೆಚ್ಚು ಕಾಲ 54 ಬಾರಿ ರಿಯಾಕ್ಟರ್‌ಗಳು ಕಾರ್ಯನಿರ್ವಹಿಸಿದ್ದು ಅಭೂತಪೂರ್ವ ಸಾಧನೆ. ಅವುಗಳಲ್ಲಿ ಕೈಗಾ ಸ್ಥಾವರಗಳ ಸಾಧನೆಯೂ ಇದೆ. ಅಣು ವಿದ್ಯುತ್ ನಿಗಮವು ಆದಾಯ, ಲಾಭ ಗಳಿಕೆಯಲ್ಲಿ ಮುಂಚೂಣಿಯಲ್ಲಿವೆ. 85 ಮಿಲಿಯನ್ ಯುನಿಟ್ ವಿದ್ಯುತ್‌ನ್ನು ಪ್ರತಿದಿನ ಉತ್ಪಾದಿಸಲಾಗುತ್ತಿದೆ’ ಎಂದು ತಿಳಿಸಿದರು.
ಕೈಗಾ ಸ್ಥಾನಿಕ ನಿರ್ದೇಶಕ ಬಿ.ವಿನೋದಕುಮಾರ, 5, 6ನೇ ಘಟಕದ ನಿರ್ದೇಶಕ ಎಸ್.ಬಿ.ಕುಲಕರ್ಣಿ ಇದ್ದರು.
‘ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ’
‘ಕೈಗಾದ ಅಣು ವಿದ್ಯುತ್ ಸ್ಥಾವರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ ನೌಕರರ ಪೈಕಿ ಶೇ 60ಕ್ಕಿಂತ ಹೆಚ್ಚಿನವರು ಕರ್ನಾಟಕದವರು. ಅದರಲ್ಲಿಯೂ ಅರ್ಧದಷ್ಟು ಮಂದಿ ಉತ್ತರ ಕನ್ನಡ ಜಿಲ್ಲೆಯವರೇ ಇದ್ದಾರೆ’ ಎಂದು ಕೈಗಾ ಸ್ಥಳ ನಿರ್ದೇಶಕ ಬಿ.ವಿನೋದ ಕುಮಾರ್ ಹೇಳಿದರು.
‘ಕೈಗಾದಲ್ಲಿರುವ 1358 ಕಾಯಂ ಉದ್ಯೋಗಿಗಳಲ್ಲಿ 805 ಕರ್ನಾಟಕದವರಿದ್ದಾರೆ. ಅವರಲ್ಲಿ ಉತ್ತರ ಕನ್ನಡ ಜಿಲ್ಲೆಯ 407 ಜನರು ಸೇರಿದ್ದಾರೆ. ಗುತ್ತಿಗೆ ಆಧಾರಿತ ಉದ್ಯೋಗಗಳಲ್ಲಿ ಹೆಚ್ಚಿನವರು ಸ್ಥಳೀಯರಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
‘ಅಣು ವಿದ್ಯುತ್ ನಿಗಮದಲ್ಲಿ ಕಾಯಂ ಹುದ್ದೆಗಳ ನೇಮಕಾತಿಗೆ ನೇಮಕಗೊಳ್ಳಲು ನಡೆಸುವ ಪರೀಕ್ಷೆಗೆ ಸ್ಥಳೀಯರಿಗೆ ತರಬೇತಿ ನೀಡಲಾಗುತ್ತಿದೆ. ಕಾರವಾರ ಅಂಕೋಲಾ ಮಲ್ಲಾಪುರದಲ್ಲಿ ಈಗಾಗಲೇ ತರಬೇತಿ ನೀಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.