ಕಾರವಾರ: ‘ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕ ಸುಧಾರಿತ ತಂತ್ರಜ್ಞಾನದಡಿ ಕಾರ್ಯನಿರ್ವಹಿಸಲಿದೆ. 2030ರ ವೇಳೆಗೆ ವಿದ್ಯುತ್ ಉತ್ಪಾದನೆ ಆರಂಭಿಸಲಿದೆ’ ಎಂದು ಎನ್‌ಪಿಸಿಐಎಲ್ ಕೈಗಾ ಘಟಕದ ನಿರ್ದೇಶಕ ಬಿ.ವಿನೋದಕುಮಾರ ಹೇಳಿದರು.
‘ಹೊಸ ಘಟಕ ಸ್ಥಾಪನೆಗೆ ಅಡಿಪಾಯ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, 100 ಅಡಿ ಆಳದವರೆಗಿನ ಮಣ್ಣು, ಕಲ್ಲಿನ ಪದರ ಪರೀಕ್ಷಿಸಲಾಗಿದೆ. ಸ್ಥಾವರ ನಿರ್ಮಾಣಕ್ಕೆ ಯೋಗ್ಯ ಪ್ರದೇಶವೆಂದು ಖಚಿತವಾಗಿದೆ. ಸ್ಥಾವರ ನಿರ್ಮಾಣಕ್ಕೆ ಕಾಂಕ್ರೀಟ್ ಹಾಕಲು ಅಣುಶಕ್ತಿ ನಿಯಂತ್ರಣ ಮಂಡಳಿಯ ಅನುಮತಿ ಪಡೆಯುತ್ತೇವೆ. ನವೆಂಬರ್ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಎರಡು ಘಟಕಗಳು ತಲಾ 700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಲಿವೆ. ₹21 ಸಾವಿರ ಕೋಟಿ ವೆಚ್ಚದಲ್ಲಿ ಘಟಕ ನಿರ್ಮಾಣಗೊಳ್ಳಲಿದೆ. ಹೈದರಾಬಾದ್‌ನ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ ನಿರ್ಮಿಸಲಿದೆ. ನಿರ್ಮಾಣ ಕಾರ್ಯಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಆದ್ಯತೆ ನೀಡಿದ್ದು, ಪರಿಸರ ಹಾನಿ ತಡೆಯಲು ಗರಿಷ್ಠಮಟ್ಟದ ಕ್ರಮ ಅನುಸರಿಸಲಾಗುತ್ತಿದೆ’ ಎಂದರು.
‘ಅಣು ವಿದ್ಯುತ್ ಸ್ಥಾವರದ ಮೊದಲ 4 ಘಟಕಗಳ ಮಾದರಿಗಿಂತ ಹೊಸ ಘಟಕಗಳು ವಿಭಿನ್ನವಾಗಿ ಕಾರ್ಯ ನಿರ್ವಹಿಸಲಿವೆ. ಸ್ಥಾವರ ತಂಪುಗೊಳಿಸುವ ಪ್ರಕ್ರಿಯೆಗೆ ಕಡಿಮೆ ಪ್ರಮಾಣದಲ್ಲಿ ನೀರು ಬಳಸಲಾಗುವುದು. ಬಳಸಿದ ನೀರನ್ನು ಕಾಳಿನದಿಗೆ ಹರಿಸದೆ, ಮರುಬಳಕೆಗೆ ಸಂಸ್ಕರಿಸುವ ವಿಧಾನ ಅನುಸರಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.