ADVERTISEMENT

ಸ್ಥಳಾಂತರಗೊಳಿಸಲು 3 ಬಾರಿ ತಜ್ಞರ ವರದಿ: ಸುರಕ್ಷಿತ ನೆಲೆ ಕಾಣದ ಕಳಚೆ ಗ್ರಾಮ

ಗಣಪತಿ ಹೆಗಡೆ
Published 21 ಆಗಸ್ಟ್ 2025, 4:21 IST
Last Updated 21 ಆಗಸ್ಟ್ 2025, 4:21 IST
ಯಲ್ಲಾಪುರ ತಾಲ್ಲೂಕಿನ ಕಳಚೆ ಗ್ರಾಮದಲ್ಲಿ 2021ರಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಜನವಸತಿ ಸ್ಥಳಗಳಿಗೆ ಭಾರಿ ಪ್ರಮಾಣದಲ್ಲಿ ಮಣ್ಣಿನ ರಾಶಿ ನುಗ್ಗಿತ್ತು  (ಸಂಗ್ರಹ ಚಿತ್ರ)
ಯಲ್ಲಾಪುರ ತಾಲ್ಲೂಕಿನ ಕಳಚೆ ಗ್ರಾಮದಲ್ಲಿ 2021ರಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಜನವಸತಿ ಸ್ಥಳಗಳಿಗೆ ಭಾರಿ ಪ್ರಮಾಣದಲ್ಲಿ ಮಣ್ಣಿನ ರಾಶಿ ನುಗ್ಗಿತ್ತು  (ಸಂಗ್ರಹ ಚಿತ್ರ)   

ಕಾರವಾರ: ನಿರಂತರ ಭೂಕುಸಿತದ ಘಟನೆಗಳಿಂದ ಜರ್ಝರಿತವಾಗಿರುವ ಯಲ್ಲಾಪುರ ತಾಲ್ಲೂಕಿನ ಕಳಚೆ ಗ್ರಾಮವನ್ನು ಸ್ಥಳಾಂತರಿಸುವಂತೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ತಜ್ಞರು ಮೂರು ಬಾರಿ ವರದಿ ನೀಡಿದ್ದಾರೆ. ಆದರೂ, ಈವರೆಗೆ ಸ್ಥಳಾಂತರಕ್ಕೆ ಸರ್ಕಾರ ಮುಂದಾಗದೆ ಜನರ ಆತಂಕ ಜೀವಂತ ಇರಿಸಿದೆ.

ಕಾಳಿನದಿಗೆ ಹೊಂದಿಕೊಂಡ ಶಿಖರದ ಭಾಗವಾಗಿರುವ ಕಳಚೆ ಇಳಿಜಾರು ಪ್ರದೇಶದಲ್ಲಿರುವ ಗ್ರಾಮ. 2021ರಲ್ಲಿ ಉಂಟಾಗಿದ್ದ ಭಾರಿ ಪ್ರಮಾಣದ ಭೂಕುಸಿತದಿಂದ ಗ್ರಾಮದ ನೂರಾರು ಎಕರೆ ಭೂಮಿ ಭೂಮಿ ನಾಶವಾಗಿತ್ತು. ಕೆಲ ವರ್ಷಗಳಿಂದ 31 ಬಾರಿ ಗ್ರಾಮದಲ್ಲಿ ಭೂಕುಸಿತದ ಘಟನೆ ಸಂಭವಿಸಿದೆ ಎಂದು ಜಿಎಸ್‌ಐ ತಜ್ಞರೂ ವರದಿಗಳಲ್ಲಿ ಉಲ್ಲೇಖಿಸಿದ್ದಾರೆ.

‘2021 ರಿಂದ 2025ರ ಅವಧಿಯಲ್ಲಿ ಮೂರು ಬಾರಿ ಜಿಎಸ್‌ಐ ತಜ್ಞರು ಗ್ರಾಮಕ್ಕೆ ಭೇಟಿ ನೀಡಿ ಸಮೀಕ್ಷೆ ಕೈಗೊಂಡಿದ್ದಾರೆ. ಮೂರು ಬಾರಿಯೂ ಕಳಚೆ ಗ್ರಾಮ ಭೂಕುಸಿತ ವಲಯದಲ್ಲಿದೆ ಎಂದು ವರದಿ ಸಲ್ಲಿಸಿದ್ದಾರೆ. ಪ್ರತಿ ಮಳೆಗಾಲದಲ್ಲಿಯೂ ಗ್ರಾಮದ ಒಂದೆರಡು ಕಡೆಗಳಲ್ಲಿ ಕುಸಿತ ಉಂಟಾಗುತ್ತಲೇ ಇರುವುದು ತಜ್ಞರ ವರದಿಯನ್ನು ಪುಷ್ಟೀಕರಿಸುತ್ತಿದೆ’ ಎಂದು ಗ್ರಾಮದ ಪ್ರಮುಖರೊಬ್ಬರು ಹೇಳಿದರು.

ADVERTISEMENT

‘ಕಾಳಿ ಕಣಿವೆಯ ಮಧ್ಯಭಾಗದಲ್ಲಿರುವ ಕಳಚೆಯಲ್ಲಿ ಪುನಃ ಭೂಕುಸಿತ ಸಂಭವಿಸಬಹುದು. ಇದೇ ಕಣಿವೆಯ ತುದಿಯಲ್ಲಿ ಕೊಡಸಳ್ಳಿ ಅಣೆಕಟ್ಟೆ ಇದೆ. ಇಂತಹ ಸೂಕ್ಷ್ಮ ಸ್ಥಳದಲ್ಲಿ ಪುನಃ ಕುಸಿತ ಸಂಭವಿಸಿದರೆ ದೊಡ್ಡಮಟ್ಟದ ಅಪಾಯ ಎದುರಾಗಬಹುದು ಎಂದು ತಜ್ಞರು ವರದಿಗಳಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಗ್ರಾಮದ ಪ್ರಮುಖ ಆರ್.ಪಿ.ಹೆಗಡೆ ಹೇಳುತ್ತಾರೆ.

ಜೂನ್ 24 ಮತ್ತು 25 ರಂದು ಗ್ರಾಮಕ್ಕೆ ಭೇಟಿ ನೀಡಿದ್ದ ಜಿಎಸ್‌ಐನ ಹಿರಿಯ ಭೂವಿಜ್ಞಾನಿಗಳಾದ ರಾಹುಲ್ ವಡಕ್ಕೆದತ್ ಮತ್ತು ಸೆಂಥಿಲ ಕುಮಾರ್ ಅವರು 11 ಪುಟಗಳ ವರದಿಯನ್ನು ನೀಡಿದ್ದು ಅದರಲ್ಲಿ ಕಳಚೆ ಗ್ರಾಮದ ಶೇ 50ರಷ್ಟು ಭಾಗ ಭೂಕುಸಿತ ಸಂಭವಿಸಬಹುದಾದ ಪ್ರದೇಶ. ಇಲ್ಲಿನ 16 ಸ್ಥಳಗಳು ಅತಿ ಅಪಾಯಕಾರಿ ಸ್ಥಿತಿಯಲ್ಲಿವೆ ಎಂದು ವರದಿ ನೀಡಿದ್ದರು.

ಕಳಚೆ ಗ್ರಾಮದಲ್ಲಿನ ಅಪಾಯಕಾರಿ ಪ್ರದೇಶದಲ್ಲಿರುವ ಕುಟುಂಬಗಳ ಸ್ಥಳಾಂತರಕ್ಕೆ ಗ್ರಾಮದಿಂದ ಕೆಲ ಕಿ.ಮೀ ದೂರದಲ್ಲಿರುವ 12 ಎಕರೆ ಹಾಡಿ ಬೆಟ್ಟ ಪ್ರದೇಶ ಗುರುತಿಸಲಾಗಿದೆ. ಈ ಬಗ್ಗೆ ಅನುಮತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ
ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ
ಪರ್ಯಾಯ ವ್ಯವಸ್ಥೆಗೆ ಆದ್ಯತೆ ನೀಡಲಿ
‘ಗ್ರಾಮದಲ್ಲಿ 170ಕ್ಕೂ ಹೆಚ್ಚು ಕುಟುಂಬಗಳಿದ್ದು ಸುಮಾರು 350 ಎಕರೆಯಷ್ಟು ಅಡಿಕೆ ತೋಟಗಳಿವೆ. ಬಹುತೇಕ ರೈತರು ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿ ಜಮೀನು ಬಿಟ್ಟುಕೊಡಲು ಈ ಹಿಂದೆಯೇ ಅಫಿಡವಿಟ್ ಸಲ್ಲಿಸಿದ್ದರು. ಕೃಷಿ ಜಮೀನಿಗೆ ಸೂಕ್ತ ಪರಿಹಾರ ನೀಡುವ ಜತೆಗೆ ವಸತಿಗೆ ಸೂಕ್ತ ಕಾಲೊನಿ ನಿರ್ಮಿಸಿಕೊಡಬೇಕು ಎಂಬ ಬೇಡಿಕೆಗೆ ಸರ್ಕಾರದಿಂದ ಈವರೆಗೆ ಮನ್ನಣೆ ಸಿಕ್ಕಿಲ್ಲ. ಈಗ ಗುರುತಿಸಿದ 12 ಎಕರೆ ಜಾಗ ಕೆಲವೇ ಕುಟುಂಬಗಳ ಸ್ಥಳಾಂತರಕ್ಕೆ ಮಾತ್ರ ಗುರುತಿಸಲಾಗಿದೆ. ಗ್ರಾಮಸ್ಥರು ಸ್ವಯಂ ಸ್ಥಳಾಂತರಕ್ಕೆ ಒಪ್ಪಿರುವಾಗ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಿ’ ಎನ್ನುತ್ತಾರೆ ಕಳಚೆ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.