
ಕಾರವಾರ: ಇಲ್ಲಿನ ಕೋಡಿಬಾಗ ಸಮೀಪ, ಕಾಳಿನದಿಯ ನಡುವೆ ಇರುವ ಕಾಳಿ ದ್ವೀಪದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಗುರುವಾರ ಜನಸಾಗರ ಸೇರಿತ್ತು. ದೋಣಿಗಳಲ್ಲಿ ಸಾಗಿ ನಡುಗಡ್ಡೆಯಲ್ಲಿ ನೆಲೆನಿಂತ ದೇವಿ ದರ್ಶನ ಪಡೆದು ಭಕ್ತರು ಕೃತಾರ್ಥರಾದರು.
ಇಲ್ಲಿ ನಡೆಯುವ ಜಾತ್ರೆಯಲ್ಲಿ ಎರಡನೇ ದಿನ ಹೆಚ್ಚು ಜನರು ಸೇರುವುದು ಸಾಮಾನ್ಯ. ವರ್ಷದ ಮೊದಲ ದಿನವೇ ಜಾತ್ರೆ ಇದ್ದ ಕಾರಣ ಈ ಬಾರಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಭಕ್ತರನ್ನು ದ್ವೀಪಕ್ಕೆ ಕರೆದೊಯ್ಯಲು ಕೆಲವೇ ಸಂಖ್ಯೆಯ ದೋಣಿಗಳಿದ್ದವು. ಹೀಗಾಗಿ, ಜಾತ್ರೆಗೆ ತೆರಳಲು ಹಲವರು ತಾಸುಗಟ್ಟಲೆ ಕಾಯಬೇಕಾಯಿತು.
ಹೂವು, ನಿಂಬೆಹಣ್ಣಿನ ಹಾರಗಳಿಂದ ಅಲಂಕೃತಗೊಂಡಿದ್ದ ಕಾಳಿದೇವಿ ದರ್ಶನ ಪಡೆದರು. ಜಾತ್ರೆ ವೇಳೆ ನಡೆಸಲಾಗುವ ಆಚರಣೆಯಲ್ಲಿ ಹರಕೆ ಅರ್ಪಿಸಿದರು. ಹೋಮ ಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅನ್ನಸಂತರ್ಪಣೆ ನೆರವೇರಿಸಲಾಯಿತು.
ಮುಂಜಾನೆಯಿಂದಲೇ ನಂದನಗದ್ದಾದ ಸಂತೋಷಿಮಾತಾ ದೇವಸ್ಥಾನದ ಬಳಿ ಇರುವ ಜಟ್ಟಿಯಿಂದ ದೋಣಿಗಳಲ್ಲಿ ಭಕ್ತರು ಸಾಗಿದ್ದರು. ಸಂಜೆಯವರೆಗೂ ದೇವಿ ದರ್ಶನಕ್ಕೆ ಸರತಿ ಸಾಲು ಇತ್ತು. ಸುರಕ್ಷತೆ ದೃಷ್ಟಿಯಿಂದ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ದೋಣಿಯಲ್ಲಿ ಸಾಗಲು ತಾಲ್ಲೂಕು ಆಡಳಿತ ನಿರ್ಬಂಧ ಹೇರಿತ್ತು. ಸ್ಥಳದಲ್ಲಿ ಪೊಲೀಸರು ಕಾವಲು ಇದ್ದರು.
ಕಾಂಡ್ಲಾಗಿಡಗಳಿಂದ ಸುತ್ತುವರಿದಿದ್ದ ಕಾಳಿ ದ್ವೀಪದಲ್ಲಿ ಕಾಳಿಮಾತೆಯ ಉದ್ಭವಮೂರ್ತಿಯೊಂದು ನಂದನಗದ್ದಾದ ಸಂತೋಷಿಮಾತಾ ದೇವಾಲಯದ ವಿಷ್ಣು ಸಾವಂತ ಭೋಸಲೆ ಅವರ ಪೂರ್ವಜರಿಗೆ ದೊರೆತಿತ್ತು. ಅದನ್ನು ಪ್ರತಿಷ್ಠಾಪಿಸಿ, ದೇವಾಲಯ ನಿರ್ಮಿಸಲು ಕನಸಿನಲ್ಲಿ ಆದೇಶವಾಗಿತ್ತು. ಹೀಗಾಗಿ ಅಲ್ಲಿ ದೇವಾಲಯ ನಿರ್ಮಾಣಗೊಂಡು ಪ್ರತಿ ವರ್ಷ ಜಾತ್ರೆ ನಡೆಸಲಾಗುತ್ತದೆ ಎಂಬ ಪ್ರತೀತಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.