ಕಾರವಾರ: ಇಲ್ಲಿನ ಕಾಳಿ ನದಿ ತಟದಲ್ಲಿ ಮತ್ತೆ ಯಂತ್ರಗಳ ಮೊರೆತ ಆರಂಭಗೊಂಡಿದೆ. ಕೆಲವೇ ತಿಂಗಳ ಹಿಂದೆ ನದಿಗೆ ಬಿದ್ದಿದ್ದ ಸೇತುವೆಯ ಅವಶೇಷ ತೆರವುಗೊಳಿಸುವ ಕಾರ್ಯಾಚರಣೆ ನಡೆದಿತ್ತು. ಈಗ ಹೊಸ ಸೇತುವೆ ನಿರ್ಮಾಣಕ್ಕೆ ಯಂತ್ರೋಪಕರಣಗಳ ಕೆಲಸ ಶುರುವಾಗಿದೆ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಕಾಳಿನದಿಗೆ ಎರಡು ಸೇತುವೆ ಇತ್ತಾದರೂ 41 ವರ್ಷಗಳಷ್ಟು ಹಳೆಯ ಸೇತುವೆ ಕಳೆದ ವರ್ಷ ಕುಸಿದು ಬಿದ್ದಿತ್ತು. 2017ರಲ್ಲಿ ನಿರ್ಮಾಣಗೊಂಡ ಹೊಸ ಸೇತುವೆ ಸದ್ಯ ಸಂಚಾರಕ್ಕೆ ಬಳಕೆ ಆಗುತ್ತಿದೆ. ಇದರ ಪಕ್ಕದಲ್ಲಿ, ಹಳೆಯ ಸೇತುವೆ ಇದ್ದ ಜಾಗದಲ್ಲಿ ಹೊಸ ಸೇತುವೆ ನಿರ್ಮಿಸಲು ಕಾಮಗಾರಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಭೂಮಿಪೂಜೆ ನೆರವೇರಿಸಲಿದ್ದಾರೆ.
ಸೇತುವೆ ಕಾಮಗಾರಿಗೆ ತಿಂಗಳ ಹಿಂದೆಯೇ ಅಗತ್ಯ ಸಾಮಗ್ರಿಗಳನ್ನು ದಾಸ್ತಾನು ಮಾಡಲಾಗಿದ್ದು, ಕಾಮಗಾರಿಗೆ ಪೂರಕ ಕೆಲಸಗಳನ್ನು ಸೇತುವೆ ನಿರ್ಮಿಸುವ ಉಪಗುತ್ತಿಗೆ ಪಡೆದಿರುವ ಪೊದ್ದಾರ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯ ಕಾರ್ಮಿಕರು ಆರಂಭಿಸಿದ್ದರು.
‘ಸೇತುವೆಗೆ ಕಂಬಗಳನ್ನು ನಿರ್ಮಿಸುವ ಮುನ್ನ ಭದ್ರ ಅಡಿಪಾಯಕ್ಕೆ ಪೈಲಿಂಗ್ ಕೆಲಸಗಳು ನಡೆಯಬೇಕಿದೆ. ಈ ಪ್ರಕ್ರಿಯೆಗೆ ಅಗತ್ಯವಿರುವ ಉಕ್ಕಿನ ಪೈಪ್‌ಗಳು, ಇನ್ನಿತರ ಸಾಮಗ್ರಿಗಳು ಪೂರೈಕೆ ಆಗಿವೆ. ಕಾಮಗಾರಿಗೆ ಚಾಲನೆ ನೀಡಿದ ತಕ್ಷಣವೇ ಕೆಲಸ ಆರಂಭಗೊಳ್ಳಲಿದೆ. ದೀಪಾವಳಿ ಬಳಿಕ ಇನ್ನಷ್ಟು ಕಾರ್ಮಿಕರು ಬರಲಿದ್ದು, ಕಾಮಗಾರಿ ವೇಗ ಪಡೆದುಕೊಳ್ಳಲಿದೆ’ ಎಂದು ಸೇತುವೆ ನಿರ್ಮಾಣದ ಜವಾಬ್ದಾರಿ ಹೊತ್ತ ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಕಾಳಿನದಿ ತಟದಲ್ಲಿ ಯಂತ್ರಗಳ ಮೊರೆತ ನಿರಂತರವಾಗಿದೆ. ಸಾಧ್ಯವಾದಷ್ಟು ಬೇಗನೆ ಕೆಲಸ ಪೂರ್ಣಗೊಳಿಸಬೇಕು’ ಎಂದು ಸ್ಥಳೀಯ ನಾಗೇಶ ಮೇಥಾ ಹೇಳಿದರು.
ಮೀನುಗಾರಿಕೆ ನಿಷೇಧ ?
ಕಾಳಿನದಿಯಲ್ಲಿ ಅಳ್ವೆವಾಡಾ ನದಿವಾಡಾ ಭಾಗದ ಹತ್ತಾರು ಸಾಂಪ್ರದಾಯಿಕ ಮೀನುಗಾರರು ಪಾತಿದೋಣಿ ಬಳಸಿ ಮೀನುಗಾರಿಕೆ ನಡೆಸುತ್ತಾರೆ. ಇದೇ ವೃತ್ತಿ ನಂಬಿ ಹಲವು ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ ಹೊಸ ಸೇತುವೆ ಕಾಮಗಾರಿ ನಡೆಯುವ ವೇಳೆ ಸೇತುವೆ ಸಮೀಪ ಮೀನುಗಾರಿಕೆ ಚಟುವಟಿಕೆಗೆ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
‘ಸೇತುವೆ ಕುಸಿದು ಬಿದ್ದಾಗ ಅವಶೇಷ ತೆರವುಗೊಳಿಸುವಾಗ ಮೀನುಗಾರಿಕೆಗೆ ನಿಷೇಧ ಹೇರಿದ್ದರಿಂದ ಸಮಸ್ಯೆಯಾಯಿತು. ಅಳ್ವೆವಾಡಾ ಭಾಗದ ಮೀನುಗಾರರು ಮೀನುಗಾರಿಕೆಗೆ ಸೇತುವೆ ತಳದಿಂದ ಸಾಗಲಾಗದೆ ತೊಂದರೆ ಎದುರಿಸಿದೆವು. ಹೊಸ ಸೇತುವೆ ನಿರ್ಮಾಣಕ್ಕೆ ಎರಡು ವರ್ಷಗಳಿಗೂ ಹೆಚ್ಚು ಕಾಲ ತಗುಲಬಹುದು. ಇಷ್ಟು ಅವಧಿಯವೆಗೆ ಮೀನುಗಾರಿಕೆ ನಿಷೇಧಿಸಿದರೆ ಜೀವನ ನಿರ್ವಹಣೆಗೆ ಸಮಸ್ಯೆಯಾಗಲಿದೆ’ ಎಂದು ಮೀನುಗಾರ ಸುಧೀರ ಮೇಥಾ ಇತರರು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.