ADVERTISEMENT

28 ವರ್ಷಗಳಿಂದ ರುಚಿ ಕಾಯ್ದುಕೊಂಡ ‘ಕಾಮತ್ ಮಸಾಲೆ’

ತಂದೆಯ ನೆರವಿನಿಂದ ಉದ್ಯಮ ಆರಂಭಿಸಿದ ಪ್ರಸಾದ್ ಕಾಮತ್

ದೇವರಾಜ ನಾಯ್ಕ
Published 24 ಏಪ್ರಿಲ್ 2019, 19:47 IST
Last Updated 24 ಏಪ್ರಿಲ್ 2019, 19:47 IST
ಪ್ರಸಾದ್ ಕಾಮತ್
ಪ್ರಸಾದ್ ಕಾಮತ್   

ಕಾರವಾರ: ಮನೆಯಲ್ಲೇ ತಯಾರು ಮಾಡುತ್ತಿದ್ದ ಖಾರ, ಮಸಾಲೆ ಪದಾರ್ಥಗಳಿಗೆ ಹೊಸ ‘ಬ್ರಾಂಡ್‌’ ನೀಡಿ, ಪಟ್ಟಣದ ಪ್ರಸಾದ್ ಕಾಮತ್ ಅವರು ಪ್ರಾರಂಭಿಸಿದ ಕಿರು ಉದ್ಯಮಕ್ಕೆ ಈಗ 28 ವರ್ಷ.

ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಿಂಭಾಗದಲ್ಲಿದ್ದ ತಮ್ಮ ಮನೆಯಲ್ಲಿ ತಂದೆಯ ಸಹಕಾರದೊಂದಿಗೆ 1991ರಲ್ಲಿ ಅವರ ಉದ್ಯಮ ಪ್ರಾರಂಭಗೊಂಡಿತು. ಕಾಲಕ್ರಮೇಣ ಮಾರುಕಟ್ಟೆ ವಿಸ್ತರಿಸಿಕೊಂಡು 2005ರಲ್ಲಿ ತಾಲ್ಲೂಕಿನ ಶಿರವಾಡದ ಕೈಗಾರಿಕಾ ವಲಯಕ್ಕೆ ಉದ್ಯಮವನ್ನು ವರ್ಗಾಯಿಸಿದರು. ಸದ್ಯ ಇಲ್ಲೇ ಅವರ ಕೆಲಸ ಕಾರ್ಯಗಳು ನಡೆಯುತ್ತಿವೆ.

ಉದ್ಯೋಗಾವಕಾಶ ಇರಲಿಲ್ಲ: ‘ವಾಣಿಜ್ಯ ಪದವಿ ಪಡೆಯುತ್ತಿದ್ದಂತೆ ಈ ಮಸಾಲ ಉತ್ಪನ್ನಗಳ ಉದ್ಯಮ ಪ್ರಾರಂಭಿಸಿದ್ದೆ. ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಕಡಿಮೆ. ಅಂದು ಕೂಡ ಇರಲಿಲ್ಲ, ಈಗಲೂ ಸುಧಾರಿಸಿಲ್ಲ. ಹೀಗಾಗಿ ಜೀವನಾಧಾರಕ್ಕಾಗಿ ಯಾವುದಾದರೊಂದು ಉದ್ಯಮ ಮಾಡುವುದು ಅಂದು ಅನಿವಾರ್ಯವಾಗಿತ್ತು’ ಎಂದು ಪ್ರಸಾದ್ ಕಾಮತ್ ವಿವರಿಸಿದರು.

ADVERTISEMENT

‘ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ (ಕೆಎಸ್‌ಎಫ್‌ಸಿ) ₹ 20 ಸಾವಿರ ಸಾಲ ಪಡೆದಿದ್ದೆ. ₹ 5 ಸಾವಿರ ಸ್ವಂತ ಹಣವಿತ್ತು. ತಂದೆ ಕೂಡ ಅಂಚೆ ಮಾಸ್ತರ ಕರ್ತವ್ಯದಿಂದ ಅದೇ ಸಂದರ್ಭದಲ್ಲಿ ನಿವೃತ್ತರಾಗಿದ್ದರು. ಹೀಗಾಗಿ ಇಬ್ಬರೂ ಒಟ್ಟಿಗೆ ಉದ್ದಿಮೆ ಶುರು ಮಾಡಿದೆವು. ಕಷ್ಟ– ಸುಖಗಳ ನಡುವೆ ಈಗಲೂ ಮುಂದುವರಿಸಿದ್ದೇನೆ’ ಎನ್ನುತ್ತಾರೆ.

ಏನೇನಿದೆ?: ಪ್ರಸಾದ್, ತಮ್ಮ ಮಸಾಲೆ ಉತ್ಪನ್ನಗಳಿಗೆ ‘ಕಾಮತ್ ಮಸಾಲ ಪ್ರಾಡಕ್ಟ್ಸ್’ ಎಂದು ಹೆಸರಿಟ್ಟಿದ್ದಾರೆ. ಈ ‘ಬ್ರಾಂಡ್’ನ ಅಡಿ ಖಾರ, ಅರಿಶಿನ, ಗರಂ ಮಸಾಲ, ಚಿಕನ್ ಮಸಾಲ, ಕಷಾಯದ ಪುಡಿಗಳನ್ನು ಉತ್ಪಾದಿಸಿ, ಪ್ಯಾಕೆಟ್‌ಗಳಲ್ಲಿ ಮಾರುಕಟ್ಟೆಗೆ ಪೂರೈಕೆ ಮಾಡುತ್ತಾರೆ. ಅಂಕೋಲಾ, ಕಾರವಾರ, ಶಿರಸಿ, ಕುಮಟಾದ ಮಾರುಕಟ್ಟೆಗಳಿಗೆ ಉತ್ಪನ್ನ ಪೂರೈಸಲಾಗುತ್ತದೆ.

ಕೆಲಸಗಾರರೇ ಸಿಗುತ್ತಿಲ್ಲ:‘ಇತ್ತೀಚಿನ ದಿನಗಳಲ್ಲಿ ಉದ್ಯಮ ಸ್ಥಾಪಿಸುವುದಕ್ಕಿಂತಲೂ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಮೊದಲು ಏಳು ಮಂದಿ ನನ್ನೊಂದಿಗೆ ಕೆಲಸಕ್ಕಿದ್ದರು. ಆದರೆ, ಎರಡು ವರ್ಷಗಳಿಂದಪತ್ನಿ ಪೂಜಾ ಜತೆಗೂಡಿ ನಾವಿಬ್ಬರೇನಿಭಾಯಿಸುತ್ತಿದ್ದೇವೆ. ಕೆಲಸಕ್ಕೆ ಯಾರೂಸಿಗುತ್ತಿಲ್ಲ’ಎಂದು ಸಮಸ್ಯೆಯನ್ನುಪ್ರಸಾದ ಕಾಮತ್ ವಿವರಿಸುತ್ತಾರೆ.

‘ತಿಂಗಳಿಗೆ ಒಂದು ಸಾವಿರಕೆ.ಜಿ.ಯಷ್ಟು ಮಸಾಲೆಗಳನ್ನು ನಮ್ಮಲ್ಲಿ ಉತ್ಪಾದಿಸುತ್ತೇವೆ. ಇತ್ತೀಚಿಗೆ ಲಾಭ ಹೆಚ್ಚೇನು ಬರುತ್ತಿಲ್ಲ. ಖರ್ಚು– ವೆಚ್ಚವೆಲ್ಲ ಕಳೆದರೆ ಹಾಕಿದ ಬಂಡವಾಳಕ್ಕೆ ಸರಿಯಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.