
ಅಂಕೋಲಾ: ಗ್ರಾಮೀಣ ಭಾಗದಲ್ಲಿರುವ ಅಂಗನವಾಡಿಗಳು ಹಾಗೂ ಸರ್ಕಾರಿ ಕನ್ನಡ ಶಾಲೆಗಳೇ ಕನ್ನಡ ಭಾಷೆಯ ಬೆಳವಣಿಗೆಗೆ ಭದ್ರ ಬುನಾದಿಯನ್ನು ಹಾಕಿಕೊಡುತ್ತಿವೆ. ಪಟ್ಟಣಕ್ಕಿಂತ ಗ್ರಾಮೀಣ ಭಾಗದ ಶಾಲೆಗಳಲ್ಲಿ ಉತ್ತಮ ಪ್ರತಿಭಾವಂತ ಮಕ್ಕಳು ಇದ್ದು ಅವರನ್ನು ಗುರುತಿಸುವ ಕಾರ್ಯ ಆಗಬೇಕು ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಹೇಳಿದರು.
ಕಸಾಪ ಅಂಕೋಲಾ ಘಟಕದ ವತಿಯಿಂದ ನಮ್ಮ ನಡೆ ಶಾಲೆಯ ಕಡೆ ಅಭಿಯಾನದಲ್ಲಿ ಹಟ್ಟಿಕೇರಿಯ ಸಕಲಬೇಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಟ್ಟಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಶಾ ನಾಯ್ಕ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಬರಲು ಪ್ರೇರೇಪಿಸುತ್ತದೆ. ಇಲ್ಲಿನ ಪಾಲಕರು ಸಹ ಉತ್ತಮ ಶಿಕ್ಷಣ ಮತ್ತು ಸೌಕರ್ಯ ಇರುವ ಸಕಲಬೇಣ ಸರ್ಕಾರಿ ಶಾಲೆಯತ್ತ ಹೆಚ್ಚಿನ ಒಲವು ತೋರಿಸುತ್ತಿರುವುದು ಸಂತಸ ತರುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ವಿನೋದ ನಾಯ್ಕ ಮಾತನಾಡಿದರು. ಸುರೇಶ ಗೌಡ, ಮುಖ್ಯ ಶಿಕ್ಷಕಿ ವೀಣಾ ಲಕ್ಷ್ಮೇಶ್ವರ, ವಸಂತಿ ಗೌಡ, ಥಾಕು ಗೌಡ, ದುಮ್ಮಾ ಗೌಡ, ಕಸಾಪ ಸಹ ಕಾರ್ಯದರ್ಶಿ ಸುಜೀತ ನಾಯ್ಕ, ದೇವರಾಜ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.