ADVERTISEMENT

ಆಡಳಿತದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ಕುಗ್ಗದಿರಲಿ: ಪುರುಷೋತ್ತಮ ಬಿಳಿಮಲೆ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 4:16 IST
Last Updated 25 ಜುಲೈ 2025, 4:16 IST
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ಅಧ್ಯಕ್ಷತೆಯಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಪಾಲ್ಗೊಂಡಿದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ಅಧ್ಯಕ್ಷತೆಯಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಪಾಲ್ಗೊಂಡಿದ್ದರು.   

ಕಾರವಾರ: ‘ಕನ್ನಡದ ಉಳಿವಿಗಾಗಿ ಅಧಿಕಾರಿಗಳು ಹೆಚ್ಚಿನ ಸಂವೇದನಾಶೀಲತೆಯಿಂದ ಕಾರ್ಯನಿರ್ವಹಿಸಬೇಕು. ಆಡಳಿತದಲ್ಲಿ ಕನ್ನಡ ಭಾಷೆ ಬಳಕೆಗೆ ಪ್ರಾಶಸ್ತ್ಯ ಕಡಿಮೆ ಆಗಬಾರದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

‘ಇಲಾಖೆಗಳ ಪತ್ರ ವ್ಯವಹಾರ, ಆದೇಶಗಳಲ್ಲಿ ಶೇ 100ರಷ್ಟು ಕನ್ನಡ ಬಳಕೆ ಆಗಲಿ. ಸರ್ಕಾರಿ ಆದೇಶ ಪಾಲನೆಯ ಉದ್ದೇಶದ ದೃಷ್ಟಿಯಿಂದ ಮಾತ್ರವಲ್ಲದೆ ಕನ್ನಡದ ಉಳಿವಿಗೆ ಅಧಿಕಾರಿಗಳು ಅಂತರಾಳ ಭಾವದಿಂದ ಶ್ರಮಿಸಿ’ ಎಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

‘ಜಿಲ್ಲೆಯ ವಾಣಿಜ್ಯ ಕೇಂದ್ರಗಳು ಹಾಗೂ ಕೈಗಾರಿಕಾ ಕೇಂದ್ರಗಳ ಮುಂಭಾಗದ ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಭಾಷೆಯಲ್ಲಿರುವಂತೆ ನೋಡಿಕೊಳ್ಳಬೇಕು. ಶೇ 40 ರಷ್ಟು ಇತರೆ ಭಾಷೆಯಲ್ಲಿ ಅಳವಡಿಸಲು ಅವಕಾಶ ನೀಡಬಹುದು. ಪರವಾನಗಿ ನೀಡುವ ಸಂದರ್ಭದಲ್ಲಿಯೇ ನಾಮಫಲಕಗಳ ಛಾಯಾಚಿತ್ರಗಳನ್ನು ಪಡೆದುಕೊಂಡು ಪರಿಶೀಲಿಸಿದ ಬಳಿಕವಷ್ಟೆ ಪರವಾನಗಿ ನೀಡಿ’ ಎಂದರು.

ADVERTISEMENT

ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ಲ ಮಾತನಾಡಿ, ‘ಕನ್ನಡ ಭವನ ಕಟ್ಟಡದ ಬಳಕೆ ಕುರಿತು ಗೊಂದಲಗಳಿದ್ದು, ಇದನ್ನು ಬಗೆಹರಿಸಬೇಕು. ಕನ್ನಡ ಭಾಷೆಯ ಪರ ಕಾನೂನಾತ್ಮಕವಾಗಿ ಹೋರಾಟ ನಡೆಸಿದ ಕನ್ನಡ ಪರ ಹೋರಾಟ ಸಂಘಟನೆಗಳ ಸದಸ್ಯರುಗಳ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದರು.

‘ರಂಗ ಮಂದಿರ ನಿರ್ಮಾಣ ಕುರಿತಂತೆ ಉಸ್ತುವಾರಿ ಸಚಿವರ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಮೇಲೆ ಒತ್ತಡ ತರಬೇಕು. ಆಸ್ಪತ್ರೆಯಲ್ಲಿ ಔಷಧ ಚೀಟಿ ನೀಡುವಾಗ ರೋಗಿಗಳ ಹೆಸರನ್ನು ಕನ್ನಡದಲ್ಲಿಯೇ ನಮೂದು ಮಾಡುವ ಮೂಲಕ ವೈದ್ಯರು ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು’ ಎಂದರು.

ಪ್ರಾಧಿಕಾರದ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಪ್ರೋಬೇಷನರಿ ಐಎಎಸ್ ಅಧಿಕಾರಿ ಝುಪಿಶಾನ ಹಕ್, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್ ವಾಸರೆ, ಫಣಿ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಪಾಲ್ಗೊಂಡಿದ್ದರು.

ಕನ್ನಡ ಕಲಿಕಾ ಕೇಂದ್ರ ಆರಂಭಿಸಲು ಸೂಚನೆ:

‘ರಾಷ್ಟ್ರೀಯ ಯೋಜನೆಗಳಿರುವ ಜಿಲ್ಲೆಯಲ್ಲಿ ಅನ್ಯಭಾಷಿಕರ ಸಂಖ್ಯೆ ಹೆಚ್ಚಿದ್ದು ಅವರಿಗೆ ಸರಳವಾಗಿ ಕನ್ನಡ ಕಲಿಸಲು 36 ತಾಸು ಅವಧಿಯ ವಿಶೇಷ ಪಠ್ಯ ಸಿದ್ಧಪಡಿಸಲಾಗಿದೆ. ಕನ್ನಡ ಕಲಿಕಾ ಕೇಂದ್ರ ಆರಂಭಿಸಿ ತರಬೇತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು. ‘ರಾಜ್ಯದಲ್ಲಿರುವ 5 ಸಾವಿರಕ್ಕೂ ಅಧಿಕ ಐತಿಹಾಸಿಕ ಸ್ಥಳಗಳಲ್ಲಿ ಆ ಸ್ಥಳಗಳ ಪ್ರಾಮುಖ್ಯತೆ ಕುರಿತು ಕನ್ನಡದಲ್ಲಿ ಫಲಕ ಅಳವಡಿಸುವ ಕುರಿತಂತೆ ಕೇಂದ್ರ ಸಂಸ್ಕೃತಿ ಸಚಿವರು ಮತ್ತು ಪ್ರಾಚ್ಯ ವಸ್ತು ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ರಾಜ್ಯದಲ್ಲಿನ 17 ಸಾವಿರ ಶಾಲೆಗಳ ಜಾಗಕ್ಕೆ ಖಾತಾಪತ್ರ ಇಲ್ಲವಾಗಿದ್ದು ಈ ಶಾಲೆಗಳ ಹೆಸರಿಗೆ ಶಿಕ್ಷಣ ಇಲಾಖೆ ಖಾತೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ಆಂಗ್ಲಭಾಷೆಯಿಂದ ಕನ್ನಡಕ್ಕೆ ಕರಾರುವಕ್ಕಾಗಿ ತರ್ಜುಮೆ ಮಾಡುವ ‘ಕನ್ನಡ ಕಸ್ತೂರಿ’ ತಂತ್ರಾಂಶವನ್ನು ಶೀಘ್ರದಲ್ಲಿಯೇ ಸಾರ್ವಜನಿಕ ಉಪಯೋಗಕ್ಕೆ ಬಿಡುಗಡೆಗೊಳಿಸಲು ತಯಾರಿ ನಡೆದಿದೆ’ ಎಂದರು. ‘ಜಿಲ್ಲೆಯಲ್ಲಿ ಗಡಿ ಉತ್ಸವ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಈ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.