ಕಾರವಾರ: ‘ರಾಮಚಂದ್ರಾಪುರ ಮಠದ ವ್ಯಾಪ್ತಿಯಲ್ಲಿನ ಎಲ್ಲ ಸಂಘಟನೆಗಳ ಸಂವಾದಗಳು, ಸಭೆಗಳನ್ನು ಶುದ್ಧ ಕನ್ನಡದಲ್ಲಿಯೇ ನಿರ್ವಹಿಸಬೇಕು’ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಸೂಚಿಸಿದರು.
ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಅವರು ಮಂಗಳವಾರ ಹುಬ್ಬಳ್ಳಿ-ಧಾರವಾಡ ವಲಯದ ಭಕ್ತರಿಂದ ಸರ್ವ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ‘ಭಾಷಾಭಿಮಾನವನ್ನು ಉತ್ತೇಜಿಸುವ ಪ್ರಯತ್ನವಾಗಿ ಹವ್ಯಕ ಮಹಾಮಂಡಲದಿಂದ ಹಿಡಿದು ಘಟಕಗಳವರೆಗೆ ಎಲ್ಲಾ ಸಭೆಗಳನ್ನು ಶುದ್ಧ ಕನ್ನಡದಲ್ಲೇ ನಡೆಸಬೇಕು. ಸ್ವಭಾಷಾ ತತ್ವವನ್ನು ಎಲ್ಲಾ ಹಂತಗಳಲ್ಲಿ ಅನುಷ್ಠಾನಗೊಳಿಸಬೇಕು. ಸ್ವಭಾಷಾ ಅಭಿಯಾನವು ಕೇವಲ ಔಪಚಾರಿಕವಾಗಿರದೆ ನಮ್ಮ ದೈನಂದಿನ ವ್ಯವಹಾರಗಳಲ್ಲಿ ಸ್ವಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು’ ಎಂದರು.
‘ಹಿರಿಯರು ಬಳಸುತ್ತಿದ್ದ ಬಹಳಷ್ಟು ಪದಗಳು ಈಗಾಗಲೇ ಅನ್ಯಭಾಷೆಯ ಪ್ರಭಾವದಿಂದ ಮರೆಯಾಗಿದ್ದು, ಅವುಗಳನ್ನು ಹುಡುಕಿ ತೆಗೆದು ಮರು ಚಾಲ್ತಿಗೆ ತರಬೇಕು’ ಎಂದು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ವಲಯದ ನೂತನ ಅಧ್ಯಕ್ಷರಾಗಿ ಆರ್.ಜಿ.ಹೆಗಡೆ ಮತ್ತು ಕಾರ್ಯದರ್ಶಿಯಾಗಿ ಗಜಾನನ ಭಾಗ್ವತ್ ಅವರನ್ನು ನಿಯುಕ್ತಿಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.