ADVERTISEMENT

ಕರಾವಳಿ ಉತ್ಸವ ಸಪ್ತಾಹ: ‘ನಕಲಿ ಪಾಸ್’ ಹಾವಳಿ

ಕರಾವಳಿ ಉತ್ಸವ ಸಪ್ತಾಹದಲ್ಲಿ ಗಮನಸೆಳೆದ ರಫ್ತಾರ್: ಹುಚ್ಚೆದ್ದು ಕುಣಿದ ಯುವಕರು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 7:24 IST
Last Updated 27 ಡಿಸೆಂಬರ್ 2025, 7:24 IST
ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಗಾಯಕ ರಫ್ತಾರ್ ಸಂಗೀತ ಕಾರ್ಯಕ್ರಮದ ವೇಳೆ ಮಯೂರ ವರ್ಮ ವೇದಿಕೆಯ ಎದುರು ನೂರಾರು ಯುವಕರು ಜಮಾಯಿಸಿದ್ದರು.
ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಗಾಯಕ ರಫ್ತಾರ್ ಸಂಗೀತ ಕಾರ್ಯಕ್ರಮದ ವೇಳೆ ಮಯೂರ ವರ್ಮ ವೇದಿಕೆಯ ಎದುರು ನೂರಾರು ಯುವಕರು ಜಮಾಯಿಸಿದ್ದರು.   

ಕಾರವಾರ: ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಇಲ್ಲಿನ ಮಯೂರ ವರ್ಮ ವೇದಿಕೆಯಲ್ಲಿ ನಿತ್ಯ ರಾತ್ರಿ ನಡೆಯುತ್ತಿರುವ ಖ್ಯಾತನಾಮ ಕಲಾವಿದರ ಕಾರ್ಯಕ್ರಮ ನೋಡಲು ಸಾಗರೋಪಾದಿಯಲ್ಲಿ ಪ್ರೇಕ್ಷಕರು ಬರುತ್ತಿದ್ದು, ಅತಿ ಗಣ್ಯರು, ಗಣ್ಯರ ಸಾಲಿನಲ್ಲಿ ಕುಳಿತುಕೊಳ್ಳಲು ಪೈಪೋಟಿ ಹೆಚ್ಚಿದೆ.

ಕಾರ್ಯಕ್ರಮ ವೀಕ್ಷಣೆಗೆ ವಿವಿಧ ವಿಭಾಗ ರಚಿಸಿ, 12 ಸಾವಿರದಷ್ಟು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ 9 ಗಂಟೆಯ ಹೊತ್ತಿಗೆ ಆಸನಗಳು ಭರ್ತಿಯಾಗುತ್ತಿದ್ದು, ಸಾವಿರಾರು ಜನರು ತಾಸುಗಟ್ಟಲೆ ನಿಂತು ಕಾರ್ಯಕ್ರಮ ವೀಕ್ಷಿಸುವ ಅನಿವಾರ್ಯತೆ ಎದುರಾಗಿದೆ.

‘ಅತಿ ಗಣ್ಯರು (ವಿವಿಐಪಿ), ಗಣ್ಯರಿಗೆ (ವಿಐಪಿ) ಪ್ರತ್ಯೇಕ ವಿಭಾಗಗಳಲ್ಲಿ ಆಸನದ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಆಯಾ ವಿಭಾಗದಲ್ಲಿ ಮಾಡಲಾದ ಆಸನದ ವ್ಯವಸ್ಥೆಗೆ ತಕ್ಕಷ್ಟು ಪಾಸ್‌ಗಳನ್ನು ಒದಗಿಸಲಾಗಿದೆ. ಆದರೆ, ಪೂರೈಸಿದ ಪಾಸ್‌ಗಿಂತಲೂ ಹೆಚ್ಚು ಪಾಸ್‌ಗಳನ್ನು ಜನರು ತರುತ್ತಿದ್ದಾರೆ. ಅವುಗಳಲ್ಲಿ ಕಲರ್ ಮುದ್ರಣ ಮಾಡಲಾದ ‘ನಕಲಿ ಪಾಸ್‌’ಗಳ ಸಂಖ್ಯೆ ಹೆಚ್ಚುತ್ತಿದೆ. ಜನರ ನೂಕುನುಗ್ಗಲು ಹೆಚ್ಚುತ್ತಿರುವುದರಿಂದ ನಕಲಿ ಪಾಸ್‌ಗಳ ಪತ್ತೆಯೂ ಕಷ್ಟವಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಆಸನಗಳು ಭರ್ತಿಯಾದ ಬಳಿಕವೂ ಪಾಸ್‌ಗಳನ್ನು ಹೊಂದಿರುವವರು ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಪಾಸ್ ಹೊಂದಿದ್ದವರನ್ನು ತಡೆದರೆ ಸಿಬ್ಬಂದಿ ಜೊತೆ ವಾಗ್ವಾದ ನಡೆಸುತ್ತಿದ್ದಾರೆ. ಜನರನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

‘ನಕಲಿ ಪಾಸ್‌ಗಳನ್ನು ಮುದ್ರಿಸಿ ತರುತ್ತಿರುವ ಬಗ್ಗೆ ಅಧಿಕೃತ ದೂರುಗಳು ಬಂದಿಲ್ಲ. ಆದರೆ, ಆಸನದ ಕೊರತೆ ಉಂಟಾಗುತ್ತಿರುವ ದೂರುಗಳಿವೆ. ಜನರನ್ನು ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಪ್ರತಿಕ್ರಿಯಿಸಿದರು.

ಉತ್ಸವದ ನಾಲ್ಕನೇ ದಿನ ಬಾಲಿವುಡ್ ರ‍್ಯಾಪ್ ಗಾಯಕ ರಫ್ತಾರ್ ಎರಡು ತಾಸುಗಳ ಕಾಲ ಹಾಡಿ ಜನರನ್ನು ರಂಜಿಸಿದರು. ವಿಭಿನ್ನ ಶೈಲಿಯ ಸಂಗೀತದ ಗಾಯಕನ ಹಾಡಿಗೆ ಯುವಜನತೆ ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಯವಕರ ಗುಂಪು ವೇದಿಕೆಯ ಎದುರು ನುಗ್ಗಿ ಬಂದಿದ್ದರಿಂದ ಮುಂದಿನ ಸಾಲಿನಲ್ಲಿ ಕುಳಿತಿದ್ದ ಪ್ರೇಕ್ಷಕರು ಗಲಿಬಿಲಿಗೊಳ್ಳುವಂತಾಯಿತು. ಕನ್ನಡ ರ‍್ಯಾಪ್ ಗಾಯಕ ಅಲೋಕ್ ಬಾಬು ಅವರ ಕಾರ್ಯಕ್ರಮವೂ ಜನಮೆಚ್ಚುಗೆ ಗಳಿಸಿತು.

ನೂರಾರು ಮಂದಿ ಓಟದಲ್ಲಿ

ಭಾಗಿ ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಟ್ಯಾಗೋರ್ಕಡಲತೀರದಲ್ಲಿ ಆಯೋಜಿಸಿದ್ದ ಮ್ಯಾರಥಾನ್‍ನಲ್ಲಿ ನೂರಾರು ಸ್ಪರ್ಧಿಗಳು ಪಾಲ್ಗೊಂಡಿದ್ದರು. 21 ಕಿ.ಮೀ 10 ಕಿ.ಮೀ ಮತ್ತು 5 ಕಿ.ಮೀ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಿತು. ಮಾಲಾದೇವಿ ಮೈದಾನದಲ್ಲಿ ಕಬಡ್ಡಿ ವಾಲಿಬಾಲ್ ಪಂದ್ಯಾವಳಿಗಳು ನಡೆದವು.

ಮ್ಯಾರಥಾನ್ ವಿಜೇತರು: 21 ಕಿ.ಮೀ ಓಟದ ಮಹಿಳೆಯರ ವಿಭಾಗ: ಎಚ್.ಎಂ. ಹರ್ಷಿತಾ (ಪ್ರಥಮ) ಬಿಂದು ಹಿರೇಮಠ (ದ್ವಿತೀಯ) ಈಶಾ ಬೊಲಾರ್ (ತೃತೀಯ). ಪುರುಷ ವಿಭಾಗ: ಶಿವಾನಂದ (ಪ್ರಥಮ) ಸಂತೋಷ್ ಆರ್.ಸಾವಂತ (ದ್ವಿತೀಯ) ಗಣಪತಿ ವೈ.ಮಳಿಕ್ (ತೃತೀಯ). 10 ಕಿ.ಮೀ ಪುರುಷ ವಿಭಾಗ: ನಾಗರಾಜ ವಿ. ದಿವಟೆ (ಪ್ರಥಮ) ಪ್ರವೀಣ ಜೋಗಳೇಕರ (ದ್ವಿತೀಯ) ಪ್ರದೀಪ ಟಿ.ಮರಾಠೆ (ತೃತೀಯ). ಮಹಿಳೆಯರ ವಿಭಾಗ: ಪೂರ್ವಿ ಹರಿಕಂತ್ರ (ಪ್ರಥಮ) ವಿಜಯಲಕ್ಷ್ಮಿ ಎಸ್.ಕೆ (ದ್ವಿತೀಯ) ಸುಮತಿ ಗೌಡ (ತೃತೀಯ). 5 ಕಿ.ಮೀ ಪುರುಷ ವಿಭಾಗ: ಬಾಲು ಹೆಗ್ರಿ (ಪ್ರಥಮ) ಹರಿ ವಿಷ್ಣುಗಾಥಿ (ದ್ವಿತೀಯ) ಪ್ರತೀಕ ಸುರೇಶ ವಾಲೇಕರ (ತೃತೀಯ). ಮಹಿಳೆಯರ ವಿಭಾಗ: ಸುಪ್ರಿತಾ ಚೆನ್ನಯ್ಯ (ಪ್ರಥಮ) ವೈಷ್ಣವಿ ಗಾಡೇಕರ (ದ್ವಿತೀಯ) ಚಾಮುಂಡೇಶ್ವರಿ ಮಿರಾಶಿ (ತೃತೀಯ).

ಇಂದಿನ ಕಾರ್ಯಕ್ರಮಗಳು

* ಶ್ವಾನ ಪ್ರದರ್ಶನ ಸಮಯ: ಬೆಳಿಗ್ಗೆ 9 ಗಂಟೆಗೆ ಸ್ಥಳ: ಮಾಲಾದೇವಿ ಮೈದಾನ

* ಓಶಿಯನ್ ಹಾರ್ಟ ಬ್ರೇಕರ್ಸ್ ಡಾನ್ಸ್ ಗ್ರೂಪ್‍ನ ಜಗದೀಶ ಗೌಡ ಅವರಿಂದ ನೃತ್ಯ ಪ್ರದರ್ಶನ ದಿಶಾ ಹರಿಕಂತ್ರ ಮತ್ತು ಶಿಲ್ಪಾ ನಾಯ್ಕ ಅವರಿಂದ ನೃತ್ಯ ಪ್ರದರ್ಶನ ಚಿತ್ರಲೇಖಾ ಮಂಜುನಾಥ ನಾಯ್ಕ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಕೊಳಲು ವಾದನ ದೀಪ್ತಿ ಅರ್ಗೇಕರ ಅವರಿಂದ ಸುಗಮ ಸಂಗೀತ ಶ್ರೇಯಾ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಯಕ್ಷಗಾನ ನೃತ್ಯ ದರ್ಶಿನಿ ಪ್ರಶಾಂತ ಶೆಟ್ಟಿ ಮತ್ತು ವರ್ಷಿಣಿ ಪ್ರಶಾಂತ ಶೆಟ್ಟಿ ಅವರಿಂದ ಸುಗಮ ಸಂಗೀತ ಸಮಯ: ಸಂಜೆ 5.30ರಿಂದ ಸ್ಥಳ: ಮಯೂರ ವರ್ಮ ವೇದಿಕೆ

* ಬಾಲಿವುಡ್ ಗಾಯಕ ಮಹಮದ್ ದಾನಿಶ್ ಅವರಿಂದ ಸಂಗೀತ ಸಮಯ: ರಾತ್ರಿ 9.30ರಿಂದ ಸ್ಥಳ: ಮಯೂರ ವರ್ಮ ವೇದಿಕೆ

ಕರಾವಳಿ ಉತ್ಸವ ಸಪ್ತಾಹದ ನಿಮಿತ್ತ ಆಯೋಜಿಸಿದ್ದ ಕರಾವಳಿ ಮ್ಯಾರಥಾನ್‌ನಲ್ಲಿ ಯುವಕ ಯುವತಿಯರು ಓಡಿದರು.
ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ರೈಡರ್ ಒಬ್ಬರನ್ನು ಹಿಡಿಯಲು ಎದುರಾಳಿ ತಂಡದವರು ಹವಣಿಸುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.