
ಕಾರವಾರ: ಸದಾ ಕ್ರೀಡಾ ಚಟುವಟಿಕೆಯಿಂದ ಗಿಜಿಗುಡುವ ಇಲ್ಲಿನ ಮಾಲಾದೇವಿ ಮೈದಾನದಿಂದ ಬುಧವಾರ ಬಗೆಬಗೆಯ ಖಾದ್ಯಗಳ ಘಮ ಹೊಮ್ಮುತ್ತಿತ್ತು. ದೂರದಲ್ಲಿನ ರಸ್ತೆಯಿಂದ ಖಾದ್ಯ ಮೇಳದತ್ತ ಜನರನ್ನು ಖಾದ್ಯ ವೈವಿಧ್ಯ ಸೆಳೆಯಿತು.
ಪನ್ನೀರ್, ಮಶ್ರೂಮ್, ಬದನೆಕಾಯಿ ಸೇರಿದಂತೆ ಬಗೆಬಗೆಯ ತರಕಾರಿಗಳಿಂದ ಸಿದ್ಧಪಡಿಸಿದ್ದ ತಿನಿಸುಗಳು ಸಸ್ಯಾಹಾರಿಗಳ ಬಾಯಲ್ಲಿ ನೀರೂರಿಸಿದವು. ಬಂಗುಡೆಯ ಫ್ರೈ, ಏಡಿ, ಇನ್ನಿತರ ಸಾಗರೋತ್ಪನ್ನಗಳಿಂದ ಸಿದ್ಧಪಡಿಸಿದ ಖಾದ್ಯಗಳು ಮಾಂಸಾಹಾರಿಗಳು ಬಾಯಿ ಚಪ್ಪರಿಸುವಂತೆ ಮಾಡಿದವು.
ಕರಾವಳಿ ಉತ್ಸವ ಸಪ್ತಾಹದ ನಿಮಿತ್ತ ಹಮ್ಮಿಕೊಂಡಿದ್ದ ಖಾದ್ಯ ಮೇಳ ಮತ್ತು ಖಾದ್ಯ ತಯಾರಿಕೆ ಸ್ಪರ್ಧೆಯಲ್ಲಿ ಹತ್ತಾರು ಮಹಿಳೆಯರು ಹಲವು ಬಗೆಯ ಖಾದ್ಯಗಳನ್ನು ತಯಾರಿಸಿ ಗಮನಸೆಳೆದರು. ಖಾರದ ತಿನಿಸುಗಳ ಜೊತೆಗೆ ಸಿಹಿ ತಿನಿಸುಗಳನ್ನೂ ಸಿದ್ಧಪಡಿಸಲಾಗಿತ್ತು. ತಿನಿಸುಗಳ ವೀಕ್ಷಣೆಗೆ ಬಂದವರು ಅಪರೂಪದ ಖಾದ್ಯಗಳ ರುಚಿ ಸವಿದರು.
ಮನಸೆಳೆದ ರಂಗೋಲಿ:
ಪ್ರಜಾಸೌಧ ಕಟ್ಟಡದ ಒಳ ಆವರಣದಲ್ಲಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ 85ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಹೂವಿನಿಂದ ರಚಿಸಿದ ರಂಗೋಲಿ, ತ್ರಿಡಿ ರಂಗೋಲಿ, ಚುಕ್ಕೆ ರಂಗೋಲಿಗಳು ಗಮನಸೆಳೆದವು. 19 ಬಗೆಯ ಹೂವಿನ ರಂಗೋಲಿ, 48ಕ್ಕೂ ಹೆಚ್ಚು ಬಗೆಯ ಚುಕ್ಕಿ ರಂಗೋಲಿ, 18 ಬಗೆಯ ಚಿತ್ರ ರಂಗೋಲಿಗಳನ್ನು ರಚಿಸಲಾಗಿತ್ತು.
ಹೆಲಿಕಾಪ್ಟರ್‌ನಲ್ಲಿ ಹಾರಾಡಿದ ಚಿಣ್ಣರು
ಪ್ರವಾಸೋದ್ಯಮ ಇಲಾಖೆಯು ತಂಬಿ ಏವಿಯೇಶನ್ ಸಂಸ್ಥೆಯೊಂದಿಗೆ ಆರಂಭಿಸಿರುವ ಹೆಲಿಕಾಪ್ಟರ್ ರೈಡ್‌ಗೆ ಬುಧವಾರ ಚಾಲನೆ ದೊರೆಯಿತು. ಲಂಡನ್ ಸೇತುವೆ ಸಮೀಪದ ಮೈದಾನದಲ್ಲಿನ ಹೆಲಿಪ್ಯಾಡ್‌ನಿಂದ ಹಾರಾಟ ನಡೆಸಿದ ಹೆಲಿಕಾಪ್ಟರ್‌ನಲ್ಲಿ ಮೊದಲ ಕೆಲ ಸುತ್ತುಗಳನ್ನು ಆಶಾನಿಕೇತನ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಹಾರಾಟ ನಡೆಸಿದರು. ಶಾಸಕ ಸತೀಶ ಸೈಲ್ ಪುತ್ರಿ ಪ್ರಾಚಿ ಸೈಲ್ ಈ ಮಕ್ಕಳಿಗೆ ಜೊತೆಯಾದರು. ಪ್ರತಿ ರೈಡ್‌ನಲ್ಲಿ ಹೆಲಿಕಾಪ್ಟರ್ ಏಳು ನಿಮಿಷ ಹಾರಾಡಲಿದ್ದು, ಕಾರವಾರ ನಗರದ ಸುತ್ತ ಹಾರಾಟ ನಡೆಸಲಿದೆ. ಚಾಲನೆ ನೀಡುವ ವೇಳೆ ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಪಾಲ್ಗೊಂಡಿದ್ದರು.
ರಂಜಿಸಿದ ಗುರುಕಿರಣ್
ಕರಾವಳಿ ಉತ್ಸವ ಸಪ್ತಾಹದ ಎರಡನೇ ದಿನವಾಗಿದ್ದ ಮಂಗಳವಾರ ರಾತ್ರಿ ಸ್ಯಾಂಡಲ್‌ವುಡ್ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡದವರು ವಿಭಿನ್ನ ಗಾಯನಗಳ ಮೂಲಕ ಜನಮನ ರಂಜಿಸಿದರು. ಸುಮಾರು ಎರಡೂವರೆ ತಾಸುಗಳ ಕಾಲ ಕನ್ನಡ ಹಿಂದಿ ಹಾಡುಗಳಿಗೆ ಧ್ವನಿಯಾದ ಗುರುಕಿರಣ್‌ಗೆ ಗಾಯಕಿ ಅನುರಾಧಾ ಭಟ್ ಜತೆಯಾದರು. ‘ನಮ್ಮಮ್ಮ ಕಣೊ ಕನ್ನಡ..’ ಹಾಡಿನೊಂದಿಗೆ ಕಾರ್ಯಕ್ರಮ ಆರಂಭಿಸಿದ ಗುರುಕಿರಣ್ 10ಕ್ಕೂ ಹೆಚ್ಚು ಹಾಡುಗಳನ್ನು ತಮ್ಮದೇ ಶೈಲಿಯಲ್ಲಿ ಹಾಡಿದರು. ನಡು ನಡುವೆ ಅವರ ತಂಡದ ಸಹ ಗಾಯಕರು ಸಂಗೀತ ಪ್ರಸ್ತುತಪಡಿಸಿದರು. ಶಾಸಕ ಸತೀಶ ಸೈಲ್ ತಂಡದೊಂದಿಗೆ ಸೇರಿ ‘ಎಂದೆಂದೂ ನಿನ್ನನು ಮರೆತು..’ ಹಾಡುವ ಮೂಲಕ ಪ್ರೇಕ್ಷಕರ ಕರತಾಡನ ಗಿಟ್ಟಿಸಿಕೊಂಡರು.
ಇಂದಿನ ಕಾರ್ಯಕ್ರಮಗಳು
* ಗಾಳಿಪಟ ಉತ್ಸವ ಮರಳು ಶಿಲ್ಪ ಕಲೆ ಪ್ರದರ್ಶನ ಸಮಯ: ಸಂಜೆ 4.30ರಿಂದ ಸ್ಥಳ ಟ್ಯಾಗೋರ್ ಕಡಲತೀರ
* ನೃತ್ಯಾಮೃತ ಕಲಾಕೇಂದ್ರ ತಂಡದಿಂದ ನೃತ್ಯ ಮೇಧಾ ಭಟ್ಟ ಅವರಿಂದ ಶಾಸ್ತ್ರೀಯ ಸಂಗೀತ ನಾಗವೇಣಿ ಎಂ.ಹೆಗಡೆ ನೇತೃತ್ವದಲ್ಲಿ ನಾಟ್ಯರಾಣಿ ಭರತನಾಟ್ಯ ನೃತ್ಯ ಕಲಾ ಕೇಂದ್ರದವರಿಂದ ಭರತನಾಟ್ಯ ಪ್ರದರ್ಶನ ವೈಶಾಲಿ ಮಾಂಜ್ರೇಕರ ಅವರಿಂದ ಸಂಗೀತ ಸ್ಟಾರ್ ಚಾಯ್ಸ್ ನೃತ್ಯ ಮತ್ತು ಕಲಾತಂಡದಿಂದ ನೃತ್ಯ ರೂಪಕ.
ಸಮಯ: ಸಂಜೆ 5.30ರಿಂದ ಸ್ಥಳ: ಮಯೂರ ವರ್ಮ ವೇದಿಕೆ
* ಗಾಯಕ ರಫ್ತಾರ್ ಅವರಿಂದ ಸಂಗೀತ ಸಂಜೆ ಸಮಯ: ರಾತ್ರಿ 9.30ರಿಂದ ಸ್ಥಳ ಮಯೂರ ವರ್ಮ ವೇದಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.