ADVERTISEMENT

ಅಂಕೋಲಾ: ನೀರಿಗಾಗಿ ಪರದಾಡುವ ‘ಹಡವ’ ಗ್ರಾಮಸ್ಥರು

ಕಚ್ಚಾ ರಸ್ತೆ ಅವಲಂಬಿಸಿರುವ ಗ್ರಾಮದಲ್ಲಿ ಮಳೆಗಾಲದಲ್ಲಿ ವಿಪರೀತ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 4:41 IST
Last Updated 27 ಮಾರ್ಚ್ 2024, 4:41 IST
ಅಂಕೋಲಾ ತಾಲ್ಲೂಕಿನ ಹಡವ ಗ್ರಾಮದಲ್ಲಿರುವ ಕಚ್ಚಾ ರಸ್ತೆ
ಅಂಕೋಲಾ ತಾಲ್ಲೂಕಿನ ಹಡವ ಗ್ರಾಮದಲ್ಲಿರುವ ಕಚ್ಚಾ ರಸ್ತೆ   

ಅಂಕೋಲಾ: ತಾಲ್ಲೂಕಿನ ಶೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡವ ವಿಸ್ತಾರವಾಗಿದೆ. ಇಲ್ಲಿ ಸಮಸ್ಯೆಗಳ ಆಗರವೂ ಇದೆ. ಬೇಸಿಗೆ ಆರಂಭದ ದಿನಗಳಲ್ಲೇ ಕುಡಿಯುವ ನೀರಿಗೆ ಜನರು ಪರಿತಪಿಸಲಾರಂಭಿಸಿದ್ದಾರೆ.

ಬೇಸಿಗೆ ಬಂತೆಂದರೆ ಈ ಭಾಗದ ಜನರಿಗೆ ನೀರಿನ ಕೊರತೆ ತೀವ್ರವಾಗಿ ಕಾಡುತ್ತದೆ. ಬಾವಿ ಮತ್ತು ಕೊಳವೆಬಾವಿಗಳಲ್ಲಿ ಉಪ್ಪು ಮಿಶ್ರಿತ ನೀರು ಬರುವುದರಿಂದ ನೀರು ಕುಡಿಯಲು ಸಾಧ್ಯವಿಲ್ಲದಂತಾಗುತ್ತಿದೆ. ಗ್ರಾಮ ಪಂಚಾಯಿತಿಯಿಂದ ನೀರು ಬಿಡಲಾಗುತ್ತಿದ್ದರೂ ನೀರು ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯ ಉಂಟಾಗುತ್ತಿದೆ. ಗ್ರಾಮದ ಹಲವೆಡೆ ಶುದ್ಧ ನೀರು ತಲುಪುತ್ತಿಲ್ಲ ಎಂಬ ದೂರುಗಳಿವೆ.

ಗ್ರಾಮದಲ್ಲಿ ಸುಮಾರು 200 ಮನೆಗಳಿದ್ದು 700ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸಲು ಸೂಕ್ತ ರಸ್ತೆಯೇ ಇಲ್ಲ ಎಂಬುದು ಇಲ್ಲಿಯ ನಿವಾಸಿಗಳ ಪ್ರಮುಖ ದೂರು.

ADVERTISEMENT

‘ಮಳೆಗಾಲ ಶುರುವಾದರೆ ರಸ್ತೆಗಳಲ್ಲಿ ನೀರು ತುಂಬಿ ನಡೆದಾಡಲು ರಸ್ತೆಯೇ ಇಲ್ಲದಂತಾಗುತ್ತದೆ. ಕಚ್ಚಾ ರಸ್ತೆಯೇ ಹೆಚ್ಚಿರುವುದರಿಂದ ಮಳೆ ಬಿದ್ದರೆ ಕೆಸರುಗದ್ದೆಯಂತಾಗುತ್ತದೆ. ಬೇಸಿಗೆಯಲ್ಲಿ ದೂಳಿನ ಸಮಸ್ಯೆ ಉಂಟಾಗುತ್ತದೆ. ಶಾಲೆಗೆ ತೆರಳುವ ಮಕ್ಕಳಿಗೆ ಕಲ್ಲು ಮುಳ್ಳಿನ ರಸ್ತೆಯಲ್ಲೇ ನಡೆದಾಡುವ ಸ್ಥಿತಿ ಇದೆ’ ಎನ್ನುತ್ತಾರೆ ಸ್ಥಳೀಯರಾದ ರಾಕು ಗೌಡ.

‘ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಜಲಮೂಲಗಳಲ್ಲಿ ಉಪ್ಪು ಮಿಶ್ರಿತ ನೀರು ಸೇರಿಕೊಳ್ಳುತ್ತದೆ. ಗ್ರಾಮ ಪಂಚಾಯಿತಿಯಿಂದ ಪೂರೈಸುವ ನೀರು ನಂಬಿ ದಿನ ಕಳೆಯುತ್ತಿದ್ದೇವೆ. ಕೆಲವೊಮ್ಮೆ ಪ್ರತಿ ಹತ್ತು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದ್ದು ವಿಪರೀತ ತೊಂದರೆ ಎದುರಿಸುತ್ತಿದ್ದೇವೆ. ಗ್ರಾಮದಲ್ಲಿನ ನೀರಿನ ಟ್ಯಾಂಕ್ ಕೆಟ್ಟು ಹೋಗಿದ್ರೂ ದುರಸ್ತಿ ಮಾಡಲಾಗುತ್ತಿಲ್ಲ’ ಎಂದರು.

‘ಗ್ರಾಮದ ಕಚ್ಚಾ ರಸ್ತೆಯನ್ನೇ ಈ ಹಿಂದೆ ಅಭಿವೃದ್ಧಿಪಡಿಸಿ ದುರಸ್ತಿಪಡಿಸಲಾಗಿತ್ತು. ಮಳೆಗಾಲದಲ್ಲಿ ಕೆಸರಿನ ಸಮಸ್ಯೆ ಹೆಚ್ಚುತ್ತದೆ. ಗ್ರಾಮ ಪಂಚಾಯಿತಿಯಿಂದ ತಾತ್ಕಾಲಿಕ ಪರಿಹಾರ ಕಾರ್ಯ ನಡೆದರೂ ಕೆಲವರು ಸೌಕರ್ಯ ಹಾಳುಗೆಡವುತ್ತಿದ್ದಾರೆ’ ಎಂಬುದು ಗ್ರಾಮಸ್ಥರೊಬ್ಬರ ದೂರು.

ಹಡವ ಗ್ರಾಮದ ಜನರಿಗೆ ಸುಸಜ್ಜಿತ ರಸ್ತೆಯನ್ನು ನಿರ್ಮಿಸಿ ಕೊಡಲಾಗಿದೆ. ಮಳೆಗಾಲದಲ್ಲಿ ನೀರು ರಸ್ತೆಗೆ ಹರಿಯದಂತೆ ಪೈಪ್ ಅಳವಡಿಕೆ ಮಾಡಿದ್ದರೂ ಕಿಡಿಗೇಡಿಗಳು ಪದೇ ಪದೇ ಪೈಪ್ ಒಡೆಯುವ ಕೃತ್ಯ ಎಸಗುತ್ತಿದ್ದಾರೆ.

-ಗಿರೀಶ ನಾಯಕ ಶೆಟಗೇರಿ ಗ್ರಾ.ಪಂ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.