ADVERTISEMENT

ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಲಾಭ: ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 5 ಮೇ 2023, 12:35 IST
Last Updated 5 ಮೇ 2023, 12:35 IST
ಮುಂಡಗೋಡದಲ್ಲಿ ಗುರುವಾರ ರಾತ್ರಿ ನಡೆದ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಆರ್‌.ವಿ. ದೇಶಪಾಂಡೆ ಮಾತನಾಡಿದರು
ಮುಂಡಗೋಡದಲ್ಲಿ ಗುರುವಾರ ರಾತ್ರಿ ನಡೆದ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಆರ್‌.ವಿ. ದೇಶಪಾಂಡೆ ಮಾತನಾಡಿದರು   

ಮುಂಡಗೋಡ: ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಲಾಭವಾಗುತ್ತದೆ. ಬಡವರ ಪರವಾಗಿರುವ ಕಾಂಗ್ರೆಸ್‌ ಪಕ್ಷ ಈ ಭಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಎಂದು ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ವಿ.ಎಸ್‌. ಪಾಟೀಲ ಪರ ಗುರುವಾರ ಪಟ್ಟಣದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ, ಪಡಿತರ ಅಂಗಡಿಯಲ್ಲಿ ಅಕ್ಕಿ, ಗೋಧಿ, ಸಕ್ಕರೆ ಸಹಿತ ಹಲವು ಸಾಮಗ್ರಿಗಳನ್ನು ಪಡಿತರದಾರರಿಗೆ ನೀಡಲಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇವಲ 6ಕೆಜಿ ಅಕ್ಕಿಯನ್ನು ಮಾತ್ರ ನೀಡುತ್ತಿದೆ ಎಂದರು.

ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ. ಬಡ್ಡಿರಹಿತ ಸಾಲ ಹಾಗೂ ಶೇ 3ರ ದರದಲ್ಲಿ ಸಾಲ ನೀಡಿ ರೈತರ ಆರ್ಥಿಕ ಮಟ್ಟ ಹೆಚ್ಚಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ವರ್ಗಗಳಿಗೂ ಅನ್ಯಾಯ ಮಾಡಿದೆ. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕುವುದರಿಂದ, ರಾಜ್ಯಕ್ಕೆ ಹಾಗೂ ನಾಡಿನ ಜನತೆಗೆ ಒಳ್ಳೆಯದಾಗುತ್ತದೆ. ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಯಿಂದ ಎಲ್ಲ ಕುಟುಂಬಗಳಿಗೂ ಲಾಭವಾಗಲಿದೆ ಎಂದರು.

ADVERTISEMENT

ಅಭ್ಯರ್ಥಿ ವಿ.ಎಸ್‌. ಪಾಟೀಲ ಮಾತನಾಡಿ, ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದರೆ ಬಡಕುಟುಂಬಗಳಿಗೆ ಸಹಾಯ ದೊರಕುತ್ತದೆ. ಗುಣಮಟ್ಟದ ಕಾಮಗಾರಿಗಳನ್ನು ಮಾಡಿ, ಈ ಕ್ಷೇತ್ರವನ್ನು ಮಾದರಿ ಮಾಡಲಾಗುವುದು ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ, ಕೃಷ್ಣ ಹಿರೇಹಳ್ಳಿ, ಎಚ್.ಎಮ್.ನಾಯ್ಕ, ರಾಮಕೃಷ್ಣ ಮೂಲಿಮನಿ, ಮರಿಯೋಜಿರಾವ್‌, ಧರ್ಮರಾಜ ನಡಗೇರ, ಮಹ್ಮದರಫೀಕ್ ಇನಾಮದಾರ, ಮಹ್ಮದಗೌಸ ಮಕಾನದಾರ, ರಜಾ ಪಠಾಣ, ಮಹ್ಮದಸಲಿಂ ನಂದಿಗಟ್ಟಿ, ಬಸವರಾಜ ನಡುವಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.