ADVERTISEMENT

ಕಳಪೆ ಆಹಾರ ನೀಡುವ ಗುತ್ತಿಗೆ ಬದಲಾಯಿಸಿ: ಆಹಾರ ಆಯೋಗದ ಅಧ್ಯಕ್ಷರ ಎಚ್ಚರಿಕೆ

ಕ್ರಿಮ್ಸ್ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಆಹಾರ ಆಯೋಗದ ಅಧ್ಯಕ್ಷರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 4:56 IST
Last Updated 4 ಮಾರ್ಚ್ 2026, 4:56 IST
ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಅವರು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಕಳಪೆ ಗುಣಮಟ್ಟದ ಆಹಾರ ವಿತರಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಅವರು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಕಳಪೆ ಗುಣಮಟ್ಟದ ಆಹಾರ ವಿತರಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.   

ಕಾರವಾರ: ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಕಳಪೆ ಗುಣಮಟ್ಟದ ಆಹಾರ ವಿತರಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್. ಕೃಷ್ಣ ಅವರು, ಮೆನು ಪ್ರಕಾರ ಆಹಾರ ನೀಡದ ಹಾಗೂ ಗುಣಮಟ್ಟ ಕಾಯ್ದುಕೊಳ್ಳದ ಗುತ್ತಿಗೆದಾರರನ್ನು ತಕ್ಷಣವೇ ಬದಲಾಯಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಂಗಳವಾರ ಕ್ರಿಮ್ಸ್‌ಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸಿದ ಅವರು, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆಹಾರ ತಯಾರಿಕಾ ಕೊಠಡಿಯನ್ನು ವೀಕ್ಷಿಸಿದ ಅವರು, ಮೆನು ಪ್ರಕಾರ ರೋಗಿಗಳಿಗೆ ವಿತರಿಸಬೇಕಿದ್ದ ಮೊಟ್ಟೆಯನ್ನು ನೀಡದ ಕುರಿತು ಗರಂ ಆದರು. ಅತ್ಯಂತ ಕಿರಿದಾದ ಜಾಗದಲ್ಲಿ, ಅಶುಚಿಯಾದ ಪರಿಸರದಲ್ಲಿ ಆಹಾರ ಸಿದ್ಧಪಡಿಸುತ್ತಿರುವುದನ್ನು ಗಮನಿಸಿದ ಅವರು, ಆಹಾರ ತಯಾರಿಕಾ ಸ್ಥಳವನ್ನು ಕೂಡಲೇ ಸ್ಥಳಾಂತರಿಸಲು ಹಾಗೂ ಸಿಬ್ಬಂದಿಗೆ ಅಗತ್ಯ ಶೌಚಾಲಯ ವ್ಯವಸ್ಥೆ ಒದಗಿಸಲು ತಿಳಿಸಿದರು.

ನಂತರ ಒಳರೋಗಿಗಳ ವಿಭಾಗಕ್ಕೆ ಭೇಟಿ ನೀಡಿದಾಗ ಮಧ್ಯಾಹ್ನದ ಊಟಕ್ಕೆ ಸರಬರಾಜಾಗಿದ್ದ ಕಳಪೆ ಗುಣಮಟ್ಟದ ಚಪಾತಿಯನ್ನು ಕಂಡು ಕೆಂಡಾಮಂಡಲವಾದರು. ‘ಹೊರಗಿನಿಂದ ತಂದಿರುವ ಈ ಚಪಾತಿ ಆರೋಗ್ಯವಂತರೇ ಸೇವಿಸಲು ಯೋಗ್ಯವಿಲ್ಲ. ಆಗಾಗ್ಗೆ ಆಹಾರದ ಮಾದರಿಯನ್ನು ತೆಗೆದು ಪರಿಶೀಲನೆ ನಡೆಸಬೇಕು’ ಎಂದು ತಾಕೀತು ಮಾಡಿದರು.

ADVERTISEMENT

ಪೌಷ್ಠಿಕ ಪುನಃಶ್ಚೇತನ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡುವ ಚಿಕಿತ್ಸೆ ಮತ್ತು ಆಹಾರದ ವಿವರಗಳನ್ನು ಸರಿಯಾಗಿ ದಾಖಲಿಸದ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದರು. ಕೇಂದ್ರದಲ್ಲಿ ದಾಖಲಾಗುವ ಮಗು ಮತ್ತು ಪೋಷಕರಿಗೆ ದೊರೆಯುವ ದಿನಗೂಲಿ ನಷ್ಟ ಪರಿಹಾರ ಹಾಗೂ ಸರ್ಕಾರದ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಬಳಿಕ ಗಾಂಧಿನಗರದ ಅಂಗನವಾಡಿಗೆ ಭೇಟಿ ನೀಡಿ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಸ್ವತಃ ದೂರವಾಣಿ ಮೂಲಕ ಫಲಾನುಭವಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಆಹಾರ ಆಯೋಗದ ಸದಸ್ಯ ಮಾರುತಿ ಎಂ. ದೊಡ್ಡಲಿಂಗಣ್ಣನವರ, ಕ್ರಿಮ್ಸ್ ಡೀನ್ ಡಾ. ಪೂರ್ಣಿಮಾ, ಡಿಎಚ್‌ಒ ಡಾ. ಶಂಕರರಾವ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನೋಟಿಸ್ ನೀಡಿ ತನಿಖೆ’

ಕೇಂದ್ರ ಉಗ್ರಾಣದಿಂದ ಅನ್ನಭಾಗ್ಯ ಯೋಜನೆಯಡಿ ನೀಡಲಾಗಿರುವ ದಾಸ್ತಾನು ಪಟ್ಟಿಗೂ ಸ್ಥಳೀಯ ಉಗ್ರಾಣದ ದಾಸ್ತಾನು ಪಟ್ಟಿಯಲ್ಲೂ ವ್ಯತ್ಯಾಸ ಕಂಡುಬರುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿ ತನಿಖೆ ನಡೆಸಲಾಗುವುದು. ಫುಡ್ ಕಾರ್ಪೊರೇಶನ್‌ನಿಂದ ಪೂರೈಕೆಯಾದ ಅಕ್ಕಿಯಲ್ಲಿ ಹಳಿಯಾಳ ಗೋಡೌನ್‌ನಲ್ಲಿ 290 ಕ್ವಿಂಟಾಲ್ ಹಾಗೂ ಕಾರವಾರ ಗೋಡೌನ್‌ನಲ್ಲಿ 32 ಕ್ವಿಂಟಾಲ್ ಅಕ್ಕಿ ಹೆಚ್ಚುವರಿ ಇದೆ. ಈ ರೀತಿ ಏಕೆ ವ್ಯತ್ಯಾಸ ಬಂದಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ ಎಂದು ಡಾ. ಎಚ್. ಕೃಷ್ಣ ಅಧಿಕಾರಿಗಳನ್ನು ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.