ADVERTISEMENT

ರಾಹುಲ್ ಗಾಂಧಿ ಹೊರ ದೇಶಕ್ಕೆ ಯಾಕೆ ಹೋಗಿ ಬರ್ತಾರೆ ಅರ್ಥಾಗ್ತಿಲ್ಲ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 9:34 IST
Last Updated 18 ನವೆಂಬರ್ 2021, 9:34 IST
 ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಕಾರವಾರ: ‘ರಾಹುಲ್ ಗಾಂಧಿಗೆ ಜನಮನ್ನಣೆ ಸಿಗ್ತಿಲ್ಲ. ಹೊರ ದೇಶಕ್ಕೆ ಯಾಕೆ ಹೋಗಿ ಬರ್ತಾರೆ ಎನ್ನೋದು ಅರ್ಥಾಗ್ತಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.

ಯಲ್ಲಾಪುರದಲ್ಲಿ ಬಿ.ಜೆ.ಪಿ.ಯು ಗುರುವಾರ ಹಮ್ಮಿಕೊಂಡ 'ಜನ ಸ್ವರಾಜ್ ಸಮಾವೇಶವನ್ನು ಉದ‌್ಘಾಟಿಸಿ ಅವರು ಮಾತನಾಡಿದರು.

'ಈಗ ಲೋಕಸಭೆಯಲ್ಲಿ ಕಾಂಗ್ರೆಸ್ ಬೆರಳೆಣಿಕೆಯಷ್ಟು ಸದಸ್ಯರನ್ನು ಹೊಂದಿದೆ. ಇನ್ನು 25 ವರ್ಷಗಳು ಕಳೆದರೂ ಕೇಂದ್ರದಲ್ಲಿ ಕಾಂಗ್ರೆಸ್ ಅ‌ಧಿಕಾರಕ್ಕೆ ಬರುವ ಕನಸು ಬೇಡ. ಮುಳುಗುತ್ತಿರುವ ಹಡಗದು. ಅದರಲ್ಲಿ ಕೂರಲು ಯಾರೂ ಇಚ್ಛಿಸುವುದಿಲ್ಲ' ಎಂದು ಹೇಳಿದರು.

ADVERTISEMENT

'ವಿಧಾನ ಪರಿಷತ್‌ನಲ್ಲಿ ಯಾವ ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲವೋ ಅಲ್ಲಿ ಈ ಬಾರಿ ಜಯಿಸಲೇಬೇಕು ಎಂದು ಉತ್ತರ ಕನ್ನಡ ಕ್ಷೇತ್ರದಿಂದ ಪ್ರವಾಸ ಆರಂಭಿಸಿದ್ದೇವೆ. ಪಕ್ಷದ ಕಾರ್ಯಕರ್ತರು ಮನಸ್ಸು ಮಾಡಿದರೆ ಇದು ಕಷ್ಟವಲ್ಲ. ಪ್ರತಿಯೊಬ್ಬರೂ ತಾವೇ ಅಭ್ಯರ್ಥಿ ಎಂದುಕೊಂಡು ಕೆಲಸ ಮಾಡಿದರೆ ಪಕ್ಷಕ್ಕೆ ಜಯ ಸಿಗುತ್ತದೆ' ಎಂದು ಹೇಳಿದರು.

'ವಿಧಾನಸಭೆ ಚುನಾವಣೆ ಮುಗಿದ ಬಳಿಕ ಮತ್ತೆ ರಾಜ್ಯ ಪ್ರವಾಸ ಹಮ್ಮಿಕೊಳ್ಳುತ್ತೇನೆ. ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದೇ ಗುರಿಯಾಗಿದೆ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಜನರ ಪ್ರೀತಿಯನ್ನು ನೋಡಿ ಕಣ್ಣೀರು ಹಾಕಿದ್ದೆ. ಅದನ್ನು ಕೆಲವರು ಟೀಕಿಸಿದರು. ನಾನು ಮಾಜಿ ಮುಖ್ಯಮಂತ್ರಿಯಾದರೂ ಜನರ ಪ್ರೀತಿ ಗುಲಗಂಜಿಯಷ್ಟೂ ಕಡಿಮೆಯಾಗಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.