ADVERTISEMENT

ಕಾರವಾರ: ಅನಧಿಕೃತ ಕೇಂದ್ರ ತಲೆ ಎತ್ತದಂತೆ ನಿಗಾ ಇರಿಸಿ

ಆಧಾರ್ ಕಾರ್ಡ್ ಪ್ರಗತಿ ಪರಿಶೀಲನೆ ಸಭೆ: ಪೊಲೀಸರಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:29 IST
Last Updated 20 ನವೆಂಬರ್ 2025, 2:29 IST
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧ್ಯಕ್ಷತೆಯಲ್ಲಿ ಆಧಾರ್ ಕಾರ್ಡ್ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು 
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅಧ್ಯಕ್ಷತೆಯಲ್ಲಿ ಆಧಾರ್ ಕಾರ್ಡ್ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು    

ಕಾರವಾರ: ‘ಜಿಲ್ಲೆಯಲ್ಲಿ ಅನಧಿಕೃತ ಆಧಾರ್ ಕೇಂದ್ರ ಮತ್ತು ಆಧಾರ್ ತಿದ್ದುಪಡಿ ಕೇಂದ್ರಗಳು ಕಾರ್ಯನಿರ್ವಹಿಸದಂತೆ ಪೊಲೀಸ್ ಇಲಾಖೆ ನಿಗಾ ಇಡಬೇಕು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಧಾರ್ ಕಾರ್ಡ್‌ಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ‘ಅಕ್ರಮ ವಲಸಿಗರು ನಕಲಿ ದಾಖಲೆ ಸಲ್ಲಿಸಿ ಆಧಾರ್ ಕಾರ್ಡ್ ಮಾಡಿಸಬಹುದಾದ ಸಾಧ್ಯತೆ ಹೆಚ್ಚು. ಹೀಗಾಗಿ, ಅನಧಿಕೃತ ಕೇಂದ್ರಗಳು ತಲೆಎತ್ತದಂತೆ ಕ್ರಮವಾಗಬೇಕು’ ಎಂದರು.

‘10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದಿರುವ ಸಾರ್ವಜನಿಕರು ತಮ್ಮ ವಾಸಸ್ಥಳದ ಬದಲಾವಣೆಯಾಗಿದ್ದಲ್ಲಿ, ಪ್ರಸಕ್ತ ವಿಳಾಸದ ಬದಲಾವಣೆಯನ್ನು ಆನ್‌ಲೈನ್‍ನಲ್ಲಿ ಉಚಿತವಾಗಿ ಮಾಡಿಕೊಳ್ಳಲು ಅವಕಾಶವಿದೆ. 2026ರ ಜೂ.14ರ ಒಳಗೆ ಪ್ರತಿ ಕಾರ್ಡ್‌ಗಳು ಅಪ್ಡೇಟ್ ಆಗಿರಬೇಕು’ ಎಂದರು.

ADVERTISEMENT

‘5 ವರ್ಷ ಮತ್ತು ೧೫ ವರ್ಷ ಪೂರ್ಣಗೊಂಡಿರುವ ಮಕ್ಕಳ ಆಧಾರ್ ಅಪ್ಡೇಟ್‍ನ್ನು ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಉಚಿತವಾಗಿ ಮಾಡಬೇಕು. ಜಿಲ್ಲೆಯ ಎಲ್ಲಾ ಅಂಚೆ ಕಚೇರಿಗಳಲ್ಲಿ ಮತ್ತು ಬ್ಯಾಂಕ್‍ಗಳಲ್ಲಿರುವ ಆಧಾರ್ ಸೇವಾ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಶಾಲಾ ಮಕ್ಕಳ ಆಧಾರ್ ಅಪ್‍ಡೇಟ್ ಮಾಡುವ ಕುರಿತಂತೆ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಶಿಬಿರ ಆಯೋಜಿಸಬೇಕು’ ಎಂದರು.

‘ಜಿಲ್ಲೆಯಲ್ಲಿ 16,65,285 ಆಧಾರ್ ಕಾರ್ಡ್‌ಗಳಿದ್ದು, ಅವುಗಳಲ್ಲಿ 15,68,157 ಕಾರ್ಡ್‌ಗಳೊಂದಿಗೆ ಮೊಬೈಲ್ ಸಂಖ್ಯೆ ನೋಂದಣಿಯಾಗಿದೆ. 97 ಸಾವಿರದಷ್ಟು ಕಾರ್ಡ್‌ಗಳಿಗೆ ಇನ್ನಷ್ಟೇ ನೋಂದಣಿ ಆಗಬೇಕಿದೆ’ ಎಂದು ಜಿಲ್ಲಾ ಆಧಾರ್ ಸಮಾಲೋಚಕ ಮಹಾಬಲೇಶ್ವರ ದೇಸಾಯಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ್, ಬೆಂಗಳೂರಿನ ಆಧಾರ್ ಪ್ರಾದೇಶಿಕ ಕೇಂದ್ರದ ವ್ಯವಸ್ಥಾಪಕ ಮೊಹಮದ್ ಮುಸಾಬ್,  ಇತರರು ಪಾಲ್ಗೊಂಡಿದ್ದರು.

ಉಚಿತ ಬದಲಾವಣೆಗೆ ಅವಕಾಶ

‘2014–15ರಲ್ಲಿ ಮತ್ತು ಆ ಬಳಿಕ ಆಧಾರ ಕಾರ್ಡ್ ಮಾಡಿಸಿಕೊಂಡಿರುವವರು ವಿಳಾಸ ಬದಲಾವಣೆ ಮಾಡಿಕೊಳ್ಳದಿದ್ದರೆ myAadhaar.uidai.gov.in ಮೂಲಕ ವಾಸಸ್ಥಳದ ದಾಖಲೆ ಸಲ್ಲಿಸಿ ಉಚಿತವಾಗಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ಜಿಲ್ಲಾ ಆಧಾರ್ ಸಮಾಲೋಚಕ ಮಹಾಬಲೇಶ್ವರ ದೇಸಾಯಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.