
ಕಾರವಾರ: ರಾಜ್ಯದ ಅತ್ಯುತ್ತಮ ಘನ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಒಂದೆನಿಸಿದ್ದ ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯಿತಿಯ ಸ್ವಚ್ಛತಾ ಸಂಕೀರ್ಣ ಬಾಗಿಲು ಮುಚ್ಚಿದೆ. ಒಂದೂವರೆ ತಿಂಗಳಿನಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಣೆಯೂ ಸ್ಥಗಿತಗೊಂಡಿದೆ.
ಇದರಿಂದಾಗಿ ಸದಾಶಿವಗಡ ವ್ಯಾಪ್ತಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ–66ರ ಪಕ್ಕ, ಕಾಕರತಳೆ ಕೆರೆ ಸೇರಿದಂತೆ ಹಲವೆಡೆ ಎಲ್ಲೆಂದರಲ್ಲಿ ಕಸದ ರಾಶಿ ಕಾಣಸಿಗುತ್ತಿದೆ.
ರಾಜ್ಯದಲ್ಲೇ ಅತಿ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದೆನಿಸಿರುವ ಚಿತ್ತಾಕುಲ ಗ್ರಾಮ ಪಂಚಾಯಿತಿಯಲ್ಲಿ 20ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. 25ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು, 3 ಸಾವಿರಕ್ಕಿಂತಲೂ ಹೆಚ್ಚು ಮನೆಗಳು, ವಾಣಿಜ್ಯ ಕೇಂದ್ರಗಳಿರುವ ಇಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆ ಸ್ಥಗಿತಗೊಂಡಿರುವುದರಿಂದ ಸ್ವಚ್ಛತೆ ಕಾಯ್ದುಕೊಳ್ಳುವುದೇ ಸವಾಲಾಗಿದೆ.
‘ಮನೆ ಮನೆಯಿಂದ ಕಸ ಸಂಗ್ರಹಿಸುವ ಕೆಲಸ ಈ ಹಿಂದಿನಿಂದ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಒಂದೂವರೆ ತಿಂಗಳಿನಿಂದ ಸಂಗ್ರಹಣೆ ಸ್ಥಗಿತಗೊಂಡಿದೆ. ಕಸವನ್ನು ಮನೆಯಲ್ಲಿ ಇಟ್ಟುಕೊಳ್ಳಲಾಗದೆ ಕಾರವಾರ ನಗರದಲ್ಲಿ ಇರಿಸಿದ ಕಸದ ತೊಟ್ಟಿಗೆ ಎಸೆದು ಬರುವ ಸ್ಥಿತಿ ಎದುರಾಗಿದೆ. ಕೆಲವರು ರಾತ್ರಿ ವೇಳೆ ಹೆದ್ದಾರಿ ಬದಿಯಲ್ಲಿ ಖಾಲಿ ನಿವೇಶನಗಳಲ್ಲಿ ಎಸೆಯುತ್ತಿದ್ದಾರೆ. ಕಾಳಿನದಿಗೂ ಕಸ ಎಸೆಯುವವರಿದ್ದಾರೆ’ ಎಂದು ಸತೀಶ ನಾಯ್ಕ ದೂರಿದರು.
ಗೋಕರ್ಣ ಹೊರತುಪಡಿಸಿದರೆ, ಜಿಲ್ಲೆಯಲ್ಲೇ ಎರಡನೇ ಸ್ವಚ್ಛತಾ ಸಂಕೀರ್ಣ ಇಲ್ಲಿ ನಿರ್ಮಾಣಗೊಂಡಿತ್ತು. ಗ್ರಾಮ ಪಂಚಾಯಿತಿ ಕಚೇರಿ ಪಕ್ಕದಲ್ಲೇ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಆರು ವರ್ಷಗಳ ಹಿಂದೆ ಘಟಕ ನಿರ್ಮಿಸಲಾಗಿತ್ತು. ಸುಧಾರಿತ ತಂತ್ರಜ್ಞಾನದ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಣೆ ಯಂತ್ರ (ಪಿಡಬ್ಲ್ಯೂಎಂ) ಸೇರಿದಂತೆ ಹಲವು ಉಪಕರಣಗಳೂ ಘಟಕದಲ್ಲಿವೆ. ಆದರೆ, ಕಸ ಸಂಗ್ರಹಣೆಯನ್ನೇ ಸ್ಥಗಿತಗೊಳಿಸಲಾಗಿದೆ.
‘ಗ್ರಾಮ ಪಂಚಾಯಿತಿ ಕಚೇರಿ ಪಕ್ಕದಲ್ಲಿದ್ದ ಸ್ವಚ್ಛತಾ ಸಂಕೀರ್ಣ ಸ್ಥಳಾಂತರಿಸುವಂತೆ ಸ್ಥಳೀಯರಿಂದ ಪ್ರತಿಭಟನೆ ನಡೆಯಿತು. ಸ್ಥಳಾಂತರಕ್ಕೆ ಒತ್ತಡ ಹೆಚ್ಚಿದ್ದರಿಂದ ಸಂಕೀರ್ಣವನ್ನು ಸ್ಥಗಿತಗೊಳಿಸಲಾಗಿದೆ. ಈ ಕಾರಣಕ್ಕೆ ಮನೆ ಮನೆಯಿಂದ ಕಸ ಸಂಗ್ರಹಣೆ ನಡೆಯುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಪಿಡಿಒ ರಾಮದಾಸ್ ಪ್ರತಿಕ್ರಿಯಿಸಿದರು.
ಸ್ವಚ್ಛತಾ ಸಂಕೀರ್ಣಕ್ಕೆ ಎರಡು ಜಾಗ ಗುರುತಿಸಲಾಗಿದ್ದು ಜಿಲ್ಲಾಧಿಕಾರಿ ಅಂತಿಮ ಆದೇಶಕ್ಕೆ ಕಾಯಲಾಗುತ್ತಿದೆ. ಜಾಗ ಸಿಕ್ಕ ಬಳಿಕ ತಾತ್ಕಾಲಿಕ ವಿಲೇವಾರಿ ಘಟಕ ನಿರ್ಮಿಸಿ ಕಸ ಸಂಗ್ರಹ ಪ್ರಕ್ರಿಯೆ ಆರಂಭಿಸಲಾಗುತ್ತದೆವೀರನಗೌಡರ ಏಗನಗೌಡರ ತಾಲ್ಲೂಕು ಪಂಚಾಯಿತಿ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.