ADVERTISEMENT

ಎಸ್.ಟಿ.ಪಿ ನಿರ್ವಹಣೆ ತನಿಖೆಗೆ ನಿರ್ಧಾರ

ಬಿಲ್ ಪಾವತಿಸುವಂತೆ ಗುತ್ತಿಗೆದಾರ ಸಂಸ್ಥೆಯಿಂದ ನಗರಸಭೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 14:20 IST
Last Updated 1 ಅಕ್ಟೋಬರ್ 2022, 14:20 IST
ಕಾರವಾರದಲ್ಲಿ ಶನಿವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯ ಗಣಪತಿ ನಾಯ್ಕ ಮತ್ತು ಉಪಾಧ್ಯಕ್ಷ ಪ್ರಕಾಶ ನಾಯ್ಕ ನಡುವೆ ವಾಗ್ವಾದ ನಡೆಯಿತು. ಅಧ್ಯಕ್ಷ ಡಾ.ನಿತಿನ್ ಪಿಕಳೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಥಾಮ್ಸೆ, ಆಯುಕ್ತ ಆರ್.ಪಿ.ನಾಯ್ಕ ಇದ್ದಾರೆ.
ಕಾರವಾರದಲ್ಲಿ ಶನಿವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯ ಗಣಪತಿ ನಾಯ್ಕ ಮತ್ತು ಉಪಾಧ್ಯಕ್ಷ ಪ್ರಕಾಶ ನಾಯ್ಕ ನಡುವೆ ವಾಗ್ವಾದ ನಡೆಯಿತು. ಅಧ್ಯಕ್ಷ ಡಾ.ನಿತಿನ್ ಪಿಕಳೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಥಾಮ್ಸೆ, ಆಯುಕ್ತ ಆರ್.ಪಿ.ನಾಯ್ಕ ಇದ್ದಾರೆ.   

ಕಾರವಾರ: ನಗರಸಭೆಯ ಮಲಿನ ನೀರು ಸಂಸ್ಕರಣಾ ಘಟಕದ (ಎಸ್.ಟಿ.ಪಿ) ನಿರ್ವಹಣೆಯ ಗುತ್ತಿಗೆ ಪಡೆದ ಸಂಸ್ಥೆಯ ಕಾರ್ಯಗಳನ್ನು ತನಿಖೆಗೆ ಒಳಪಡಿಸಲು, ಶನಿವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಧ್ಯಕ್ಷರ ಸೂಚನೆಯ ಮೇರೆಗೆ ಸಭೆಗೆ ಹಾಜರಾದ ಸಂಸ್ಥೆಯ ಪ್ರತಿನಿಧಿಗಳು, ‘ಎಸ್.ಟಿ.ಪಿ ನಿರ್ವಹಣೆಗೆ ಸಂಬಂಧಿಸಿದಂತೆ ನಮಗೆ ನಗರಸಭೆಯಿಂದ ಈವರೆಗೆ ಕೇವಲ ಎರಡು ಸಲ ಹಣ ಪಾವತಿಯಾಗಿದೆ. ಉಳಿದ ಹಣವನ್ನೂ ‍ನೀಡಬೇಕು. ಸಿಬ್ಬಂದಿಯ ವೇತನ ಪಾವತಿಗೆ ಸಮಸ್ಯೆಯಾಗುತ್ತಿದೆ’ ಎಂದು ತಿಳಿಸಿದರು.

ಸದಸ್ಯ ಸಂದೀಪ ತಳೇಕರ್ ಮಾತನಾಡಿ, ‘ನೀವು 20 ತಿಂಗಳು ಬಿಲ್ ಸಲ್ಲಿಕೆ ಮಾಡಲೇ ಇಲ್ಲ. ಬಳಿಕ ಒಂದೇ ಸಲ ₹ 63 ಲಕ್ಷದ ಬಿಲ್ ಸಲ್ಲಿಸಿದಿರಿ. ಅಲ್ಲಿ ಕೈಗೊಂಡ ಕಾಮಗಾರಿಯ ಬಗ್ಗೆ ಪರಿಶೀಲಿಸಿದಾಗ ರಾಸಾಯನಿಕ ಬಳಸದಿರುವುದು, ಸಿಬ್ಬಂದಿ ಅನುಪಸ್ಥಿತಿ ಕಂಡುಬಂದವು’ ಎಂದರು.

ADVERTISEMENT

‘ಈ ಮೊತ್ತದ ಪಾವತಿಗೆ ಆಡಳಿತಾತ್ಮಕ ಮಂಜೂರಾತಿ ಆಗಿಲ್ಲ ಎಂಬುದೂ ತಿಳಿಯಿತು. ಅಲ್ಲದೇ ಸರ್ಕಾರದ ನಿಯಮಾವಳಿಗಿಂತ ಹೆಚ್ಚಿನ ಸಿಬ್ಬಂದಿ ನೇಮಿಸಿದ್ದೂ ಗೊತ್ತಾಯಿತು. ಈ ಎಲ್ಲ ಕಾರಣಗಳಿಂದ ನಾನೇ ಆಕ್ಷೇಪಿಸಿದ್ದೆ’ ಎಂದು ವಿವರಿಸಿದರು.

ಸಂಸ್ಥೆಯ ಪ್ರತಿನಿಧಿ ಪ್ರತಿಕ್ರಿಯಿಸಿ, ‘ನಾವು ಎಲ್ಲ ಬಿಲ್‌ಗಳನ್ನೂ ಸಲ್ಲಿಸಿದ್ದೇವೆ. ಕೋವಿಡ್ ಕಾರಣದಿಂದ ಮಾರ್ಚ್‌ನಿಂದ ಜೂನ್‌ ತನಕ ಸ್ವಲ್ಪ ತಡವಾಗಿದೆ. 2021ರ ಏಪ್ರಿಲ್ ತನಕ ರಾಸಾಯನಿಕವನ್ನು ಪೂರೈಕೆ ಮಾಡಿದ್ದೇವೆ. ನಂತರ ನಿರ್ವಹಣೆ ಸಾಧ್ಯವಾಗಲಿಲ್ಲ’ ಎಂದರು.

ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ‘ಸಂಸ್ಥೆಯವರು ನೀಡಿದ ಬಿಲ್ ಹಾಗೂ ನಗರಸಭೆಯ ಲೆಕ್ಕಾಚಾರಗಳು ಹೊಂದಾಣಿಕೆ ಆಗುತ್ತಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದರು.

ಉದ್ಯಾನ ನಿರ್ಮಾಣ; ಗದ್ದಲ:

ಬಿಣಗಾದಲ್ಲಿ ಉದ್ಯಾನ ನಿರ್ಮಾಣ ವಿಷಯವು ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಸದಸ್ಯ ಗಣಪತಿ ನಾಯ್ಕ ಮಾತನಾಡಿ, ‘ನಗರೋತ್ಥಾನ ಯೋಜನೆಯಡಿ ಹೊಸದಾಗಿ ಉದ್ಯಾನ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಕಾಮಗಾರಿಗೆ ಐ.ಆರ್.ಬಿ. ಕಂಪನಿಯವರು ಹಾಕಿದ ಮಣ್ಣನ್ನು ಸಮತಟ್ಟು ಮಾಡಿದ್ದಾಗಿ ಗುತ್ತಿಗೆದಾರ ಹೇಳುತ್ತಿದ್ದಾರೆ. ಈ ರೀತಿ ಹಣ ಪೋಲು ಮಾಡದೇ ಬೇರೆ ಕಾರ್ಯಕ್ಕೆ ಬಳಸಬೇಕು’ ಎಂದು ಒತ್ತಾಯಿಸಿದರು.

ಆಯುಕ್ತ ಆರ್.ಪಿ.ನಾಯ್ಕ ಮಾತನಾಡಿ, ‘ಎರಡೂ ಕಾಮಗಾರಿಗಳು ಬೇರೆ ಬೇರೆಯಾಗಿವೆ. ಗೊಂದಲ ಮಾಡಿಕೊಳ್ಳಬಾರದು’ ಎಂದರು.

ಉಪಾಧ್ಯಕ್ಷ ಪ್ರಕಾಶ ನಾಯ್ಕ ಮಾತನಾಡಿ, ‘ನಮ್ಮ ಭಾಗದ ಕಾಮಗಾರಿಗೆ ನೀವ್ಯಾಕೆ ಆಕ್ಷೇಪ ಮಾಡುತ್ತೀರಿ’ ಎಂದರು. ಇದರಿಂದ ಇಬ್ಬರ ನಡುವೆ ವಾಗ್ವಾದವಾಗಿ ಗದ್ದಲ ಉಂಟಾಯಿತು. ಕೊನೆಗೆ ವಾರ್ಡ್ ಸದಸ್ಯೆ ರುಕ್ಮಿಣಿ ಗೌಡ ಅವರೂ ತಮ್ಮ ವಾರ್ಡ್‌ನಲ್ಲಿ ಉದ್ಯಾನ ಬೇಕು ಎಂದು ಹೇಳಿದರು. ಈ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.

‘ಭಾರತೀಯ ಸ್ವಚ್ಛತಾ ಲೀಗ್’ನಲ್ಲಿ ಪುರಸ್ಕಾರಕ್ಕೆ ಕಾರವಾರ ನಗರಸಭೆ ಭಾಜನವಾದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯನ್ನು ಸದಸ್ಯರು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.