ADVERTISEMENT

ಕಾರವಾರ | ನಗರಸಭೆ ನಿಧಿ ಕೊರತೆ: 12 ಸಿಬ್ಬಂದಿಗೆ ಖೋಕ್

ಗಣಪತಿ ಹೆಗಡೆ
Published 23 ನವೆಂಬರ್ 2023, 4:28 IST
Last Updated 23 ನವೆಂಬರ್ 2023, 4:28 IST
ಕಾರವಾರದ ನಗರಸಭೆ ಕಚೇರಿ ಪಕ್ಕದಲ್ಲೇ ಇರುವ ಗಾಂದಿ ಉದ್ಯಾನ ನಿರ್ವಹಣೆ ಇಲ್ಲದೆ ಸೊರಗಿರುವುದು.
ಕಾರವಾರದ ನಗರಸಭೆ ಕಚೇರಿ ಪಕ್ಕದಲ್ಲೇ ಇರುವ ಗಾಂದಿ ಉದ್ಯಾನ ನಿರ್ವಹಣೆ ಇಲ್ಲದೆ ಸೊರಗಿರುವುದು.   

ಕಾರವಾರ: ವಾರ್ಷಿಕ ಆದಾಯ ಮೀರಿ ಅಭಿವೃದ್ಧಿ ಕಾಮಗಾರಿಗೆ ಅನುದಾನ ವೆಚ್ಚ ಭರಿಸಿದ ಆರೋಪಕ್ಕೆ ಗುರಿಯಾಗಿರುವ ಇಲ್ಲಿ ನಗರಸಭೆ ಈಗ ಆಡಳಿತ ವೆಚ್ಚ ಹೊಂದಾಣಿಕೆಗಾಗಿ ಹೊರಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ಕೈಬಿಡಲು ಮುಂದಾಗಿದೆ.

ಕೆಲವು ದಿನಗಳ ಹಿಂದಷ್ಟೇ 9 ಮಂದಿ ಉದ್ಯಾನ ನಿರ್ವಹಣೆಗಾರರು, ಇಬ್ಬರು ಚಾಲಕರು, ಓರ್ವ ಲಿಪಿಕಾರ ಸಿಬ್ಬಂದಿ ಸೇರಿ 12 ಮಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ‘ಈ ಸಿಬ್ಬಂದಿಯನ್ನು ಪೂರೈಸಿದ್ದ ಕಂಪನಿಯ ಹೊರಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದರಿಂದ ಕೆಲಸದಿಂದ ತೆಗೆಯಲಾಗಿದೆ’ ಎಂಬುದು ಅಧಿಕಾರಿಗಳ ಉತ್ತರ.

ಆದರೆ, ‘ನಗರಸಭೆ ಆರ್ಥಿಕವಾಗಿ ದುಃಸ್ಥಿತಿ ಎದುರಿಸುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ನಗರಸಭೆ ನಿಧಿಯನ್ನೂ ಮೀರಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೈಗೊಂಡ ಕಾಮಗಾರಿಗಳಿಗೆ ಬಿಲ್ ಪಾವತಿಸಲು ಸಾಧ್ಯವಾಗದ ಸ್ಥಿತಿ ಇದೆ. ಹೀಗಾಗಿ ಆರ್ಥಿಕ ವೆಚ್ಚ ಸರಿದೂಗಿಸಲು ಹೊರಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಗರಸಭೆಯ ಸದಸ್ಯರೊಬ್ಬರು ದೂರಿದ್ದಾರೆ.

ADVERTISEMENT
ಹೊರಗುತ್ತಿಗೆ ಸಿಬ್ಬಂದಿಯ ಟೆಂಡರ್ ಅವಧಿ ಮುಗಿದಿದ್ದರಿಂದ ಕೆಲಸದಿಂದ ತೆಗೆಯಲಾಗಿದೆ. ಸದ್ಯದಲ್ಲಿಯೇ ಸಾಮಾನ್ಯಸಭೆಯಲ್ಲಿ ಅನುಮೋದನೆ ಪಡೆದು ಪುನಃ ಟೆಂಡರ್ ಕರೆಯಲಾಗುತ್ತದೆ.
ಕೆ.ಚಂದ್ರಮೌಳಿ, ಪೌರಾಯುಕ್ತ

‘ಕೆಲಸ ಕಳೆದುಕೊಂಡವರ ಪೈಕಿ ಹೆಚ್ಚಿನವರು ಉದ್ಯಾನ ನಿರ್ವಹಣೆಗೆ ನೇಮಕಗೊಂಡಿದವರಾಗಿದ್ದರು. ಡಿ.ಸಿ ಕಚೇರಿ ಸಮೀಪ, ಪಂಚರಿಷಿವಾಡಾ, ಪೋರ್ಟ್ ಕಾಲೊನಿ, ನಗರಸಭೆ ಕಚೇರಿ ಪಕ್ಕ, ಟ್ಯಾಗೋರ್ ಕಡಲತೀರದ ಉದ್ಯಾನಗಳನ್ನು ಈ ಸಿಬ್ಬಂದಿ ನಿರ್ವಹಿಸುತ್ತಿದ್ದರು. ಸಿಬ್ಬಂದಿ ಇಲ್ಲದೆ ಉದ್ಯಾನ ನಿರ್ವಹಣೆಯೂ ಕಷ್ಟವಾಗಿದೆ. ಉದ್ಯಾನಗಳ ಸ್ಥಿತಿ ಹದಗೆಟ್ಟಿದೆ’ ಎಂದು ಬೇಸರಿಸಿದರು.

‘ನಗರಸಭೆಗೆ ಆಸ್ತಿ ತೆರಿಗೆ, ನೀರಿನ ಕರ, ವ್ಯಾಪಾರಿ ತೆರಿಗೆ ಸೇರಿದಂತೆ ವಿವಿಧ ಮೂಲಗಳಿಂದ ₹ 12.78 ಕೋಟಿ ಆದಾಯ ಸಂಗ್ರಹವಾಗುತ್ತದೆ. ಈ ಪೈಕಿ ಸದ್ಯ ಶೇ 80ರಷ್ಟು ಮಾತ್ರ ವಸೂಲಾತಿಯಾಗಿದೆ. ಈ ಮೊತ್ತದಲ್ಲೇ ದೈನಂದಿನ ಆಡಳಿತ ವೆಚ್ಚ ನಿಭಾಯಿಸಬೇಕಾಗುತ್ತದೆ. ಅಲ್ಲದೆ, ₹10 ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿ ಬಿಲ್ ಪಾವತಿಯೂ ಬಾಕಿ ಇದೆ. ಹೀಗಾಗಿ ನಿರ್ವಹಣೆ ವೆಚ್ಚ ಹೊಂದಾಣಿಕೆ ಮಾಡಲು ಆಡಳಿತಾತ್ಮಕವಾಗಿ ಕೆಲ ವೆಚ್ಚ ತಗ್ಗಿಸುವುದು ಅನಿವಾರ್ಯ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಾರವಾರದ ಗಾಂದಿ ಉದ್ಯಾನದಲ್ಲಿ ನಿರ್ವಹಣೆಗೆ ಸಿಬ್ಬಂದಿ ಇಲ್ಲದ ಪರಿಣಾಮ ದುಸ್ಥಿತಿಯಲ್ಲಿದ್ದು ಮಹಾತ್ಮ ಗಾಂಧಿ ಪ್ರತಿಮೆ ಆವರಣ ಬೀದಿನಾಯಿಗಳ ವಿಶ್ರಾಂತಿ ತಾಣವಾಗಿ ಮಾರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.