ADVERTISEMENT

ಕಾರವಾರ: ಮೀನು ಮಾರುಕಟ್ಟೆ ಮಳಿಗೆಗಳ ಮರು ಹರಾಜು; ವಾಕ್ಸಮರ

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು, ಅಧ್ಯಕ್ಷರು, ಆಯುಕ್ತರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 12:16 IST
Last Updated 9 ಮಾರ್ಚ್ 2021, 12:16 IST
ಕಾರವಾರದಲ್ಲಿ ಸೋಮವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶದಿಂದ ಮಾತನಾಡಿದರು
ಕಾರವಾರದಲ್ಲಿ ಸೋಮವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶದಿಂದ ಮಾತನಾಡಿದರು   

ಕಾರವಾರ: ಮೀನು ಮಾರುಕಟ್ಟೆ ಕಟ್ಟಡದಲ್ಲಿರುವ ಮಳಿಗೆಗಳನ್ನು ಮರು ಹರಾಜು ಹಾಕಿದ ವಿಚಾರ, ಮಂಗಳವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು.

ಸಭೆಯ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಸದಸ್ಯ ಸಂದೀಪ ತಳೇಕರ, ‘ಮಳಿಗೆಗಳನ್ನು ಮರು ಹರಾಜು ಹಾಕುವ ಬಗ್ಗೆ ಕಳೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಅದರ ಪ್ರಗತಿಯೇನಾಯಿತು’ ಎಂದು ಪ್ರಶ್ನಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಡಾ. ನಿತಿನ್ ಪಿಕಳೆ, ‘ಕಳೆದ ಸಭೆಯಲ್ಲಿ ತಿಳಿಸಿದಂತೆ ಮರು ಹರಾಜು ಹಾಕಲಾಗಿದೆ’ ಎಂದರು. ಇದಕ್ಕೆ ಹಲವು ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ‘ಎರಡನೇ ಹೆಚ್ಚು ಮೊತ್ತವನ್ನು ಕೂಗಿದವರಿಗೆ ನೀಡುವಂತೆ ತಿಳಿಸಲಾಗಿತ್ತು. ಸದಸ್ಯರಿಗೆ ತಿಳಿಸದೇ ಹರಾಜು ಹಾಕುವ ಹೊಸ ಪದ್ಧತಿ ತರಬೇಡಿ. ಈಗ ಪುನಃ ಹರಾಜು ಹಾಕಲೇಬೇಕು’ ಎಂದು ಆಗ್ರಹಿಸಿದರು.

ADVERTISEMENT

ಇದಕ್ಕೆ ಡಾ. ಪಿಕಳೆ, ‘ಯಾರೂ ಮಳಿಗೆ ಆರಂಭಿಸದಿದ್ದರೆ ನಗರಸಭೆಗೆ ನಷ್ಟವಾಗುತ್ತದೆ. ಹಾಗಾಗಿ ಮರು ಹರಾಜು ಹಾಕುವಂತೆ ನೀವೇ ಹೇಳಿದ್ದಿರಿ. ನಾವು ಯಾರಿಂದಲೂ ಏನನ್ನೂ ಮುಚ್ಚಿಟ್ಟಿಲ್ಲ’ ಎಂದರು.

ಈ ಹಂತದಲ್ಲಿ ವಿರೋಧ ಪಕ್ಷದ ಸದಸ್ಯರಾದ ಗಣಪತಿ ನಾಯ್ಕ, ಮಕ್ಬೂಲ್ ಶೇಖ್, ಮೋಹನ ನಾಯ್ಕ ಮುಂತಾದವರು, ಅಧ್ಯಕ್ಷರು ಮತ್ತು ನಗರಸಭೆ ಪ್ರಭಾರ ಆಯುಕ್ತ ಆರ್.ಪಿ. ನಾಯ್ಕ ವಿರುದ್ಧ ಮುಗಿಬಿದ್ದರು. ‘ನಗರಸಭೆ ಅಧ್ಯಕ್ಷರು ಮೋಸ ಮಾಡುತ್ತಿದ್ದಾರೆ’ ಎಂದು ಸದಸ್ಯರೊಬ್ಬರು ಆರೋಪಿಸಿದರು. ಇದಕ್ಕೆ ಆಡಳಿತಾರೂಢ ಬಿಜೆಪಿ ಸದಸ್ಯರು ಗಟ್ಟಿ ಧ್ವನಿಯಲ್ಲೇ ಆಕ್ಷೇಪಿಸಿ ಮಾತನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಡಾ. ಪಿಕಳೆ ಮಾತನಾಡಿ, ‘ನಾನು ಒಂದು ಪೈಸೆ ಲಾಭ ಪಡೆದುಕೊಂಡಿದ್ದರೂ ಸಾಬೀತು ಪಡಿಸಿ. ಈ ಕ್ಷಣವೇ ರಾಜೀನಾಮೆ ನೀಡುತ್ತೇನೆ’ ಎಂದು ಸವಾಲೆಸೆದರು.‌

ಸಂದೀಪ ತಳೇಕರ ಮಾತನಾಡಿ, ‘ಟೆಂಡರ್ ಕರೆಯದೇ ಹಲವು ಕೆಲಸಗಳನ್ನು ಮಾಡಿದ್ದು, ಮಳಿಗೆಗಳನ್ನು ಮರು ಹರಾಜು ಹಾಕದಿರುವುದು, ಅರ್ಧಂಬರ್ಧ ಆಗಿರುವ ಕಾಮಗಾರಿಗೆ ಈಗ ಟೆಂಡರ್ ಕರೆಯುವುದು ಮೋಸ’ ಎಂದರು.

ಇದಕ್ಕೆ ಉತ್ತರಿಸಿದ ಆರ್.ಪಿ. ನಾಯ್ಕ, ‘ಕಾಮಗಾರಿಗೆ ಕಳೆದ ವರ್ಷ ಜನವರಿ, ಫೆಬ್ರುವರಿಯಲ್ಲಿ ಟೆಂಡರ್ ಕರೆಯಲಾಗಿತ್ತು. ನಂತರ ಕೊರೊನಾ ಬಂತು. ಆಗ ಆರಂಭಿಸಿದ ಕಾಮಗಾರಿಗಳಿಗೆ ಹೊಸ ಆಡಳಿತ ಬಂದ ಮೇಲೆ ಅನುಮತಿ ಪಡೆದು ಹಣ ಪಾವತಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು. ಗದ್ದಲದ ನಡುವೆಯೇ ಕಾಂಗ್ರೆಸ್‌ನ ಕೆಲವು ಸದಸ್ಯರು ಸಭೆಯಿಂದ ಹೊರ ನಡೆದರು.

ಸದಸ್ಯೆಯರ ಆಕ್ರೋಶ:

ಬಿಜೆಪಿಯ ಸದಸ್ಯೆಯರು, ತಮಗೂ ಮಾತನಾಡಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಆಗ ಕಾಂಗ್ರೆಸ್‌ನ ಗಣಪತಿ ನಾಯ್ಕ, ‘ನೀವೂ ಮಾತನಾಡಿ, ಚಹಾ ಸೇವಿಸಿಕೊಂಡು ಹೋಗಿ’ ಎಂದರು.

ಮಾಲಾ ಹುಲಸ್ವಾರ, ರೇಷ್ಮಾ ಮಾಳ್ಸೇಕರ ಮುಂತಾದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ‘ಅವರು ನಮಗೆ ಅವಮಾನ ಮಾಡಿದ್ದಾರೆ. ನಾವು ಚಹಾ ಸೇವಿಸಲು ಬಂದಿಲ್ಲ, ನಮ್ಮ ವಾರ್ಡ್‌ಗಳ ಸಮಸ್ಯೆಯನ್ನು ಹೇಳಬೇಕಿದೆ‌’ ಎಂದರು. ಗಣಪತಿ ನಾಯ್ಕ ಮಾತನಾಡಿ, ‘ನಾನು ಯಾರಿಗೂ ವೈಯಕ್ತಿಕವಾಗಿ ಹೇಳಿದ್ದಲ್ಲ. ತಮಗೂ ಮಾತನಾಡಲು ಅವಕಾಶವಿದೆ ಎಂಬರ್ಥದಲ್ಲಿ ಹೇಳಿದ್ದೇನೆ’ ಎಂದು ಸಮಜಾಯಿಷಿ ಕೊಟ್ಟರು.

ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡ್ಕರ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.