
ಕಾರವಾರ: ದಿನೇ ದಿನೇ ಹೆಚ್ಚುತ್ತಿರುವ ಬೀದಿನಾಯಿ ಕಾಟದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಲು ಸುಪ್ರಿಂ ಕೋರ್ಟ್ ನಿರ್ದೇಶನ ಆಧರಿಸಿ ಜಿಲ್ಲಾ ನಗರಾಭಿವೃದ್ಧಿಕೋಶ ಮುಂದಾಗಿದೆ. ಅಪಾಯಕಾರಿ ಬೀದಿನಾಯಿಗಳನ್ನು ಸ್ಥಳಾಂತರಿಸಿ, ಸಾಕಲು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ಬೀದಿನಾಯಿ ಆರೈಕೆ ಕೇಂದ್ರ ತೆರೆಯಲು ಸಿದ್ಧತೆ ಕೈಗೊಳ್ಳಲಾಗಿದೆ.
ಶಾಲೆ, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿ ಉಪಟಳ ತಡೆಯಲು ಕ್ರಮಕ್ಕೆ ಸುಪ್ರಿಂ ಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಜಿಲ್ಲೆಯ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಮೀಕ್ಷೆ ನಡೆಸಲು ಸೂಚಿಸಿದ್ದರು.
ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳ ಆವರಣದಲ್ಲಿರುವ ಬೀದಿನಾಯಿಗಳ ನಿಖರ ಲೆಕ್ಕ ಕೊಡಲು ಆಯಾ ಇಲಾಖೆಗಳಿಗೆ ಜವಾಬ್ದಾರಿ ನೀಡಲಾಗಿತ್ತು. ಬೀದಿನಾಯಿ ಸಮೀಕ್ಷೆ ನಡೆಸಿದ ಅಧಿಕಾರಿ, ಸಿಬ್ಬಂದಿ ತಂಡವು ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲಲಿ 10,744 ಬೀದಿನಾಯಿಗಳಿರುವ ವರದಿ ಸಲ್ಲಿಸಿವೆ. ಅವುಗಳ ಪೈಕಿ ಶಾಲೆ, ಆಸ್ಪತ್ರೆ, ಸರ್ಕಾರಿ ಕಚೇರಿ ಆವರಣಗಳಲ್ಲೇ 1,247 ನಾಯಿಗಳಿರುವುದಾಗಿ ಉಲ್ಲೇಖಿಸಲಾಗಿದೆ.
‘ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಹಿಂದಿನಿಂದಲೂ ಸಾಕಷ್ಟು ಕ್ರಮವಾಗುತ್ತಿದ್ದರೂ ನಾಯಿಗಳ ಸಂಖ್ಯೆ ಕಡಿಮೆ ಆಗಿರಲಿಲ್ಲ. ನೌಕರರು ಈಚೆಗೆ ಕೈಗೊಂಡ ಸಮೀಕ್ಷೆಯಲ್ಲಿ ಸ್ಪಷ್ಟ ಸಂಖ್ಯೆಗಳ ಮಾಹಿತಿ ಸಿಕ್ಕಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಗುವುದು. ಅವರ ನಿರ್ದೇಶನ ಆಧರಿಸಿ ಕ್ರಮಗಳಾಗಲಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೀದಿನಾಯಿಗಳ ನಿಯಂತ್ರಣಕ್ಕೆ 15ನೇ ಹಣಕಾಸು ಯೋಜನೆಯಲ್ಲಿ ಉಳಿಕೆಯಾದ ₹78.99 ಲಕ್ಷ ಅನುದಾನವನ್ನು ಬಳಕೆ ಮಾಡಲಾಗುವುದು. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೊಡಿಸಲು ಆದ್ಯತೆ ನೀಡಲಾಗುವುದು. ಶಾಲೆ, ಆಸ್ಪತ್ರೆ, ಸರ್ಕಾರಿ ಕಚೇರಿ ಆವರಣಗಳಲ್ಲಿರುವ ನಾಯಿಗಳನ್ನು ಸಂಪೂರ್ಣ ಸ್ಥಳಾಂತರಿಸುತ್ತೇವೆ. ಉಳಿದೆಡೆ ಇರುವ ಪೈಕಿ ಕ್ರೂರವಾಗಿ ವರ್ತಿಸುವ ನಾಯಿಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಿದ್ಧಪಡಿಸಿದ ಆರೈಕೆ ಕೇಂದ್ರಗಳಲ್ಲಿ ಇರಿಸಿ ಪೋಷಿಸಲಾಗುತ್ತದೆ’ ಎಂದು ವಿವರಿಸಿದರು.
5 ವರ್ಷದಲ್ಲಿ ನಿಯಂತ್ರಣ
‘ಬೀದಿನಾಯಿಗಳ ಸಮಸ್ಯೆ ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ತರಲು ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ 8494 ಬೀದಿನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಈಗಾಗಲೆ ನಡೆಸಲಾಗಿದೆ. ಆದರೂ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಸಾರ್ವಜನಿಕರಿಗೆ ಅಪಾಯ ತಂದೊಡ್ಡುವ ರೋಗಗ್ರಸ್ತ ಬೀದಿನಾಯಿಗಳನ್ನು ಜನವಸತಿ ಸ್ಥಳದಿಂದ ದೂರದ ಪ್ರದೇಶದಲ್ಲಿ ಸಲಹಲು ಯೋಚಿಸಲಾಗಿದೆ. ಇದಕ್ಕಾಗಿ ಪ್ರಾಥಮಿಕ ಹಂತದ ಸಿದ್ಧತೆ ಕೈಗೊಂಡಿದ್ದೇವೆ’ ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.