ಕಾರವಾರ: ಸಾಹಿತ್ಯ, ಯಕ್ಷಗಾನ, ಜನಪದ ಕಲೆಗಳು, ಸಂಗೀತ ಕಾರ್ಯಕ್ರಮ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವ ಜಿಲ್ಲೆಯಲ್ಲಿ ಜಿಲ್ಲಾ ರಂಗಮಂದಿರವೇ ಇಲ್ಲದ ಸ್ಥಿತಿ ಎದುರಾಗಿದೆ. ಇದ್ದ ಕಟ್ಟಡ ಬಳಕೆಗೆ ಬಾರದೆ ವರ್ಷ ಕಳೆದಿದೆ.
ಇಲ್ಲಿನ ಮಾಲಾದೇವಿ ಮೈದಾನದ ಒಂದು ಬದಿಯಲ್ಲಿ ಜಿಲ್ಲಾ ರಂಗಮಂದಿರ ಇದ್ದು, ಶಿಥಿಲಾವಸ್ಥೆಯ ಕಾರಣದಿಂದ ಕಳೆದ ಒಂದು ವರ್ಷದಿಂದ ಇಲ್ಲಿ ಯಾವುದೇ ಕಾರ್ಯಕ್ರಮ ನಡೆದಿಲ್ಲ. ಬೀಳುವ ಹಂತದಲ್ಲಿರುವ ಕಟ್ಟಡದಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ನಡೆಯುತ್ತಿದ್ದು, ಇಲ್ಲಿನ ಸಿಬ್ಬಂದಿ ಜೀವಭಯದಲ್ಲೇ ಕೆಲಸ ನಿರ್ವಹಿಸಬೇಕಾಗಿದೆ.
ರಾಜ್ಯದ ಗಡಿಭಾಗದಲ್ಲಿರುವ ಕಾರವಾರದಲ್ಲಿ ಸಾಂಸ್ಕೃತಿಕ ಸಂಘಟನೆಗಳು ಕಾರ್ಯಕ್ರಮ ನಡೆಸಲು ದುಬಾರಿ ದರ ತೆತ್ತು ಖಾಸಗಿ ಸಭಾಂಗಣಗಳನ್ನು ಬಾಡಿಗೆಗೆ ಪಡೆಯುವ ಸ್ಥಿತಿ ಉಂಟಾಗಿದೆ. ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಲು ದೊಡ್ಡ ಸಭಾಂಗಣವೂ ಇಲ್ಲದ ಸ್ಥಿತಿ ಇದೆ. ಪೊಲೀಸ್ ಕಲ್ಯಾಣ ಮಂಟಪ ಇದ್ದರೂ ಅಲ್ಲಿ ಏಕಕಾಲಕ್ಕೆ ಅಷ್ಟೊಂದು ಜನ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಧ್ವನಿವರ್ಧಕ ಬಳಕೆಗೂ ಅಡ್ಡಿಯಾಗುತ್ತಿದೆ ಎಂಬ ದೂರುಗಳಿವೆ.
‘ರಂಗಮಂದಿರದಲ್ಲಿ ದಿನವೊಂದಕ್ಕೆ ₹8 ಸಾವಿರ ಶುಲ್ಕ ಪಾವತಿಸಿ ಕಾರ್ಯಕ್ರಮ ನಡೆಸಲು ಅವಕಾಶ ಸಿಗುತ್ತಿತ್ತು. ಸರ್ಕಾರಿ ಸಹಯೋಗದ ಕಾರ್ಯಕ್ರಮಕ್ಕೆ ಶುಲ್ಕದಿಂದ ವಿನಾಯಿತಿ ಅಥವಾ ರಿಯಾಯಿತಿಯೂ ಸಿಗುತ್ತಿತ್ತು. ಈಗ ಕಾರ್ಯಕ್ರಮಗಳನ್ನು ನಡೆಸಲು ಖಾಸಗಿ ಸಭಾಂಗಣ ಪಡೆಯಬೇಕು. ಅಲ್ಲಿ ದಿನವೊಂದಕ್ಕೆ ಕನಿಷ್ಠ ₹25 ರಿಂದ ₹30 ಸಾವಿರ ಪಾವತಿಸಬೇಕಾಗುತ್ತಿದೆ. ಇದು ಆರ್ಥಿಕವಾಗಿ ಸಬಲವಲ್ಲದ ಸಂಘ ಸಂಸ್ಥೆಗಳಿಗೆ ಸಾಧ್ಯವಾಗದು’ ಎಂದು ಕಲಾವಿದ ಕೃಷ್ಣಾನಂದ ನಾಯ್ಕ ಹೇಳಿದರು.
ಏಕಕಾಲಕ್ಕೆ 600 ಮಂದಿ ಪ್ರೇಕ್ಷಕರು ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾದ ಸಾಮರ್ಥ್ಯ ಹೊಂದಿದ್ದ ಜಿಲ್ಲಾ ರಂಗಮಂದಿರವು 1986ರಲ್ಲಿ ಸ್ಥಾಪನೆಯಾಗಿತ್ತು. 39 ವರ್ಷಗಳಲ್ಲೇ ಸಂಪೂರ್ಣ ಶಿಥಿಲಗೊಂಡಿದೆ. 2011–12ರಲ್ಲಿ ನವೀಕರಣಗೊಂಡಿದ್ದರೂ ಬಹುಕಾಲದ ಅವಧಿಗೆ ಕಟ್ಟಡ ಬಳಕೆಗೆ ಬಂದಿಲ್ಲ.
‘ಕಟ್ಟಡದ ಚಾವಣಿ ಸೋರಿಕೆಯಾಗುತ್ತಿದ್ದ ಕಾರಣಕ್ಕೆ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡುವುದು ಸ್ಥಗಿತಗೊಂಡಿತ್ತು. ಕಟ್ಟಡವೂ ಶಿಥಿಲಗೊಂಡಿದ್ದ ಕಾರಣದಿಂದ 2023–24ರ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಕಟ್ಟಡ ಬಳಕೆಗೆ ಯೋಗ್ಯವಲ್ಲ ಎಂದು ವರದಿ ನೀಡಿದ್ದವು. ಕಳೆದ ಒಂದು ವರ್ಷದಿಂದ ಈಚೆಗೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ನೀಡಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ತಿಳಿಸಿದರು.
ಹೊಸದಾಗಿ ರಂಗಮಂದಿರ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕ ಬಳಿಕ ಈಗಿನ ಕಟ್ಟಡ ತೆರವುಗೊಳಿಸುವ ಪ್ರಕ್ರಿಯೆ ನಡೆಯಲಿದೆ.– ಮಂಗಲಾ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.