
ಕಾರವಾರ: ಜನರ ಬಹುಬೇಡಿಕೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಧಿಕೃತವಾಗಿ ಇಲ್ಲಿ ಕಾರ್ಯಾರಂಭಿಸಿದೆ. ಅದರ ಬೆನ್ನಲ್ಲೇ ಹಲವು ದಶಕಗಳಿಂದ ಕಾರವಾರದಲ್ಲಿದ್ದ ಜಿಲ್ಲಾಸ್ಪತ್ರೆಯನ್ನು ಶಿರಸಿಗೆ ಸ್ಥಳಾಂತರಿಸಲು ಪ್ರಯತ್ನ ಸಾಗಿದೆ.
ಆರೋಗ್ಯ ಇಲಾಖೆ ಅಧೀನದ ಜಿಲ್ಲಾ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯವಾಗುತ್ತದೆ. ಆದರೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳಿಗೆ ಕನಿಷ್ಠ ಶುಲ್ಕ ಪಾವತಿಸಬೇಕಾಗುತ್ತದೆ. ಸದ್ಯ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯೇ ಇಲ್ಲದಂತಾಗಿದೆ. ಹೀಗಾಗಿ, 250 ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿರುವ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯನ್ನೇ ಜಿಲ್ಲಾಸ್ಪತ್ರೆಯಾಗಿ ಪರಿವರ್ತಿಸಲು ಸರ್ಕಾರದ ಮಟ್ಟದಲ್ಲಿ ಯತ್ನ ನಡೆದಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಇಲ್ಲಿನ ಎಂ.ಜಿ.ರಸ್ತೆಯಲ್ಲಿದ್ದ ಜಿಲ್ಲಾಸ್ಪತ್ರೆ ಕಟ್ಟಡದ ಆವರಣದಲ್ಲಿ 2014ರಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಸ್ಥಾಪನೆಯಾಗಿದೆ. 2016ರಲ್ಲಿ ಜಿಲ್ಲಾಸ್ಪತ್ರೆ ಕ್ರಿಮ್ಸ್ ಅಧೀನಕ್ಕೆ ಒಳಪಟ್ಟಿದೆ. ತೀರಾ ಈಚಿನವರೆಗೂ ಆರೋಗ್ಯ ಇಲಾಖೆ ಅಧೀನದಲ್ಲಿದ್ದ ಜಿಲ್ಲಾಸ್ಪತ್ರೆಯ ವೈದ್ಯರು, ಹಲವು ಸಿಬ್ಬಂದಿ ಕ್ರಿಮ್ಸ್ ಅಧೀನದ ಆಸ್ಪತ್ರೆಯಲ್ಲಿಯೇ ಕಾರ್ಯನಿರ್ವಹಿಸಿದ್ದರು. ಸದ್ಯ ಮೂವರು ತಜ್ಞ ವೈದ್ಯರ ಹೊರತಾಗಿ ಉಳಿದೆಲ್ಲ ಸಿಬ್ಬಂದಿ ವರ್ಗಾವಣೆಗೊಂಡಿದ್ದಾರೆ.
ಅಲ್ಲದೇ, ಕ್ರಿಮ್ಸ್‌ನಲ್ಲಿ 450 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಅಧೀಕೃತವಾಗಿ ಮೂರು ದಿನಗಳ ಹಿಂದೆ ಉದ್ಘಾಟನೆಗೊಂಡಿದೆ. ಹೊಸ ಕಟ್ಟಡಕ್ಕೆ ಹಳೆಯ ಜಿಲ್ಲಾಸ್ಪತ್ರೆಯ ಕಟ್ಟಡದಲ್ಲಿದ್ದ ಎಲ್ಲ ವಿಭಾಗಗಳನ್ನೂ ಸ್ಥಳಾಂತರಿಸಲಾಗುತ್ತಿದೆ. 47 ವರ್ಷದಷ್ಟು ಹಳೆಯದಾಗಿರುವ ಜಿಲ್ಲಾಸ್ಪತ್ರೆಯ ಕಟ್ಟಡ ಕೆಲವೇ ದಿನಗಳಲ್ಲಿ ತೆರವುಗೊಳ್ಳಲಿದೆ ಎಂಬುದಾಗಿ ಕ್ರಿಮ್ಸ್ ಅಧಿಕಾರಿಗಳು ಹೇಳಿದ್ದಾರೆ.
‘ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಮಾರ್ಗಸೂಚಿ ಪ್ರಕಾರ ಆರೋಗ್ಯ ಸೇವೆಗಳಿಗೆ ಕನಿಷ್ಠ ಶುಲ್ಕ ವಿಧಿಸಬೇಕಾಗುತ್ತದೆ. ಬಡತನ ರೇಖೆಗಿಂತ ಕೆಳಗಿನವರು, ಪರಿಶಿಷ್ಟ ಸಮುದಾಯದವರು, ಮೆಡಿಕೊ ಲೀಗಲ್ ಪ್ರಕರಣಗಳಲ್ಲಿ ಮಾತ್ರ ಉಚಿತ ಸೇವೆಗೆ ಅವಕಾಶವಿದೆ’ ಎಂದು ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ ತಿಳಿಸಿದರು.
ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಘೋಷಿಸುವ ಬಗ್ಗೆ ಈ ಹಿಂದೆ ಆರೋಗ್ಯ ಸಚಿವರು ನಡೆಸಿದ ಸಭೆಯಲ್ಲಿ ಚರ್ಚಿಸಿದ್ದರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲೇ ನಿರ್ಣಯವಾಗಲಿದೆಡಾ.ಶಂಕರ ರಾವ್ ಜಿಲ್ಲಾ ಆರೋಗ್ಯಾಧಿಕಾರಿ
ಕ್ರಿಮ್ಸ್‌ನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭಿಸಿದೆ. 2016ರಿಂದಲೇ ಜಿಲ್ಲಾಸ್ಪತ್ರೆ ಕ್ರಿಮ್ಸ್ ಅಧೀನದಲ್ಲಿ ವಿಲೀನಗೊಂಡಿದೆಡಾ.ಪೂರ್ಣಿಮಾ ಆರ್.ಟಿ ಕ್ರಿಮ್ಸ್ ನಿರ್ದೇಶಕಿ
ರಾಜಕೀಯ ಒತ್ತಡ
ಜಿಲ್ಲೆಗೆ ಜಿಲ್ಲಾಸ್ಪತ್ರೆ ಇಲ್ಲದೆ ದಶಕ ಕಳೆದಿದೆ. ಕಾರವಾರದಲ್ಲಿರುವ ಆಸ್ಪತ್ರೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಒಳಪಟ್ಟಿದೆ. ಹೀಗಾಗಿ ಶಿರಸಿಯಲ್ಲಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಜಿಲ್ಲಾಸ್ಪತ್ರೆಯಾಗಿ ಮಾಡಲು ಶಿರಸಿ ಭಾಗದ ಜನಪ್ರತಿನಿಧಿಗಳಿಂದ ನಿರಂತರ ಪ್ರಯತ್ನ ನಡೆದಿತ್ತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಸ್ಪತ್ರೆ ಮೇಲ್ದರ್ಜೆಗೇರಿಸುವಲ್ಲಿ ಯಶ ಕಂಡಿದ್ದರು. ಶಿರಸಿ ಶಾಸಕ ಭೀಮಣ್ಣ ನಾಯ್ಕ ಹಾಲಿ ಸರ್ಕಾರದಲ್ಲಿ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಪರಿವರ್ತಿಸಿ ಸೌಲಭ್ಯ ಹೆಚ್ಚಿಸಲು ಮನವರಿಕೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.