
ಕಾರವಾರ: ಶತಮಾನಗಳಷ್ಟು ಹಳೆಯದಾಗಿರುವ ಇಲ್ಲಿನ ಜಿಲ್ಲಾ ಕಾರಾಗೃಹದ ದುರಸ್ತಿ ಸಲುವಾಗಿ ಕೆಲ ದಿನಗಳಲ್ಲಿ ಕಾರಾಗೃಹ ಸ್ಥಳಾಂತರದ ಸಾಧ್ಯತೆ ಇದೆ.
‘ಕಾರಾಗೃಹದಲ್ಲಿನ ಕೆಲ ಬ್ಯಾರಕ್‌ಗಳು, ಆವರಣಗೋಡೆಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ. ಇದಕ್ಕಾಗಿ ಅನುದಾನವೂ ಬಿಡುಗಡೆಯಾಗಿದೆ. ವಿಚಾರಣಾಧೀನ ಕೈದಿಗಳನ್ನು ಇರಿಸುವ ಬ್ಯಾರಕ್‌ಗಳಲ್ಲಿ ದುರಸ್ತಿ ನಡೆಸುವ ವೇಳೆ ಸುರಕ್ಷತೆ ದೃಷ್ಟಿಯಿಂದ ಕೈದಿಗಳನ್ನು ಬೇರೆಡೆ ಸ್ಥಳಾಂತರಿಸಬೇಕಾಗುತ್ತದೆ’ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
‘ಕಾರಾಗೃಹ ದುರಸ್ತಿ ಕಾರ್ಯವನ್ನು ಕೆಲ ತಿಂಗಳ ಹಿಂದೆಯೇ ಕೈಗೆತ್ತಿಕೊಳ್ಳಬೇಕಿತ್ತು. ಈ ಕುರಿತು ನಡೆಸಿದ ಸಭೆಯಲ್ಲಿ ಕಾರಾಗೃಹ ಸ್ಥಳಾಂತರಕ್ಕೆ ತಾಂತ್ರಿಕ ಸಮಸ್ಯೆಗಳಿದ್ದು, ಹಂತ ಹಂತವಾಗಿ ಬ್ಯಾರಕ್‌ಗಳ ದುರಸ್ತಿ ನಡೆಸಲು ನಿರ್ಧರಿಸಲಾಗಿತ್ತು. ಕಾರ್ಮಿಕರ ಸುರಕ್ಷತೆ ಮತ್ತು ಕೈದಿಗಳ ನಿಗಾವಣೆಗೆ ತೊಂದರೆಯಾಗಲಿರುವ ಕಾರಣ ಆವರಣಗೋಡೆ, ಬ್ಯಾರಕ್‌ಗಳ ಸುಧಾರಣೆ ಪೂರ್ಣಗೊಳ್ಳುವವರೆಗೆ ಸಂಪೂರ್ಣ ಕಾರಾಗೃಹವನ್ನೇ ಸ್ಥಳಾಂತರಿಸಲು ಇಲಾಖೆಯ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ ಕಾರಾಗೃಹ ಸ್ಥಳಾಂತರಕ್ಕೆ ಕ್ರಮವಾಗಬಹುದು’ ಎಂದೂ ಹೇಳಿದರು.
ಬ್ರಿಟಿಷ್ ಕಾಲದಲ್ಲೇ ನಿರ್ಮಾಣಗೊಂಡಿರುವ ಜಿಲ್ಲಾ ಕಾರಾಗೃಹ ಸ್ಥಾಪನೆಯಾಗಿ 100ಕ್ಕೂ ಹೆಚ್ಚು ವರ್ಷ ಪೂರ್ಣಗೊಂಡಿದೆ. 6 ಬ್ಯಾರಕ್‌ಗಳು, 10 ಬಂಧಿಖಾನೆಗಳು ಕಾರಾಗೃಹದಲ್ಲಿವೆ. ಒಂದೂವರೆ ದಶಕಗಳ ಹಿಂದೆ ಕಾರಾಗೃಹದಲ್ಲಿ ನವೀಕರಣ ಕೆಲಸ ಕೈಗೊಳ್ಳಲಾಗಿತ್ತು. ಆಗ ತಾತ್ಕಾಲಿಕವಾಗಿ ಬೆಳಗಾವಿ ಕಾರಾಗೃಹಕ್ಕೆ ಕೈದಿಗಳನ್ನು ಸ್ಥಳಾಂತರಿಸಲಾಗಿತ್ತು. ಸದ್ಯ ಇಲ್ಲಿ ಜಿಲ್ಲೆಯ ಹಾಗೂ ಮಂಗಳೂರಿನ ಕೈದಿಗಳು ಸೇರಿ 135ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿದ್ದಾರೆ.
ಜಿಲ್ಲಾ ಕಾರಾಗೃಹ ಸ್ಥಳಾಂತರದ ಕುರಿತು ಪ್ರತಿಕ್ರಿಯೆಗೆ ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆಯ ಬೆಳಗಾವಿ ವಲಯದ ಡಿಐಜಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ಪ್ರತಿಕ್ರಿಯೆಗೆ ಅವರು ಲಭಿಸಿಲ್ಲ.
ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಗೊಂಡಿರುವ ಮಂಗಳೂರಿನ ಕೈದಿಗಳು ದಾಂಧಲೆ ನಡೆಸುತ್ತಿರುವ ಘಟನೆ ಹೆಚ್ಚಿದ್ದು ಅವರ ಸ್ಥಳಾಂತರಕ್ಕೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆದೀಪನ್ ಎಂ.ಎನ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕಾರಾಗೃಹ ಜಾಗದ ಮೇಲೆ ಕ್ರಿಮ್ಸ್ ಕಣ್ಣು
ಜಿಲ್ಲಾ ಕಾರಾಗೃಹವನ್ನು ನಗರದಿಂದ ಹೊರಕ್ಕೆ ಸ್ಥಳಾಂತರಿಸಲು ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ ಹಲವು ವರ್ಷದಿಂದ ಪ್ರಯತ್ನ ನಡೆಸಿದೆ. ಕಾರವಾರ ತಾಲ್ಲೂಕಿನ ಬೇಳೂರು ಅಂಕೋಲಾ ತಾಲ್ಲೂಕಿನ ಬೆಳಸೆಯಲ್ಲಿ ಜಾಗವನ್ನೂ ಗುರುತಿಸಲಾಗಿತ್ತು. ಬಳಿಕ ಬೆಳಸೆಯಲ್ಲಿನ 25 ಎಕರೆ ಜಾಗದಲ್ಲಿ ಕಾರಾಗೃಹ ಸ್ಥಾಪನೆಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು.
‘ಕಾರಾಗೃಹ ಸ್ಥಾಪನೆಗೆ ಗುರುತಿಸಿದ ಜಾಗ ಜಿಲ್ಲಾಕೇಂದ್ರದಿಂದ ಬಹುದೂರದಲ್ಲಿರುವ ಕಾರಣದಿಂದ ಈವರೆಗೂ ಬೆಳಸೆಯ ಜಾಗಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಸ್ಥಳಾಂತರಕ್ಕೆ ಪ್ರಯತ್ನ ನಡೆದರೆ ಕಾರಾಗೃಹದ ಹಾಲಿ ಜಗವನ್ನು ವಶಕ್ಕೆ ಪಡೆಯಲು ಕ್ರಿಮ್ಸ್ ಪ್ರಯತ್ನದಲ್ಲಿದೆ. ಹಲವು ಬಾರಿ ಈ ಜಾಗಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಬೇಡಿಕೆ ಇಟ್ಟಿದೆ’ ಎಂದು ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಬಂಧಿಖಾನೆಗಳೆಲ್ಲ ಸ್ಥಗಿತ
‘ಜಿಲ್ಲೆಯಲ್ಲಿ ಜಿಲ್ಲಾ ಕಾರಾಗೃಹ ಹೊರತುಪಡಿಸಿದರೆ ಹಳಿಯಾಳದಲ್ಲಿ ಮಾತ್ರ ಉಪ ಕಾರಾಗೃಹವಿದೆ. ಈ ಹಿಂದೆ ಭಟ್ಕಳ ಕುಮಟಾ ಶಿರಸಿ ಸಿದ್ದಾಪುರ ಮತ್ತು ಯಲ್ಲಾಪುರದಲ್ಲಿದ್ದ ಉಪ ಬಂಧಿಖಾನೆಗಳು ಸ್ಥಗಿತಗೊಂಡಿವೆ. ಕೈದಿಗಳನ್ನು ಜಿಲ್ಲಾಕೇಂದ್ರಕ್ಕೆ ರವಾನಿಸುವುದರಿಂದ ವಿಚಾರಣೆ ನಡೆಸಲು ಸಮಸ್ಯೆ ಆಗಬಹುದು. ಜಿಲ್ಲಾ ಕಾರಾಗೃಹವೂ ಸ್ಥಳಾಂತರಗೊಂಡರೆ ಕೈದಿಗಳನ್ನು ನೂರಾರು ಕಿ.ಮೀ ದೂರದ ಬೆಳಗಾವಿ ಕಾರಾಗೃಹಕ್ಕೆ ಕರೆದೊಯ್ಯಬೇಕಾಗಬಹುದು. ಆಗ ವಿಚಾರಣೆಗೆ ಕರೆತರಲು ಇನ್ನಷ್ಟು ತೊಂದರೆಯಾಗಬಹುದು’ ಎಂದು ಹಿರಿಯ ವಕೀಲರೊಬ್ಬರು ಹೇಳಿದರು.