ADVERTISEMENT

ಕಾರವಾರ: ದುಸ್ಥಿತಿಯ ರಸ್ತೆ ಜಿಲ್ಲೆಗೆ ಶಾಪ

ಹೊಂಡ,ಗುಂಡಿ ರಸ್ತೆ ದಾಟಿ ತಾಣಗಳತ್ತ ಬರಲು ಪ್ರವಾಸಿಗರ ಹಿಂದೇಟು

ಗಣಪತಿ ಹೆಗಡೆ
Published 17 ನವೆಂಬರ್ 2025, 2:36 IST
Last Updated 17 ನವೆಂಬರ್ 2025, 2:36 IST
ಕಾರವಾರ–ಕೈಗಾ ರಸ್ತೆಯ ಡಾಂಬರು ಕಿತ್ತು, ಹೊಂಡ ಬಿದ್ದಿದೆ
ಕಾರವಾರ–ಕೈಗಾ ರಸ್ತೆಯ ಡಾಂಬರು ಕಿತ್ತು, ಹೊಂಡ ಬಿದ್ದಿದೆ   

ಕಾರವಾರ: ‘ಮಳೆಗಾಲದಲ್ಲಿ ಕೆಸರುಮಯವಾಗಿದ್ದ ರಸ್ತೆಗಳಲ್ಲಿ ಸಂಚರಿಸಲು ಕಷ್ಟವಾಗುತ್ತಿತ್ತು. ಈಗ ಮುಂದೆ ವಾಹನ ಹೋದರೆ ಹಿಂದಿನ ವಾಹನಕ್ಕೆ ದಾರಿ ಕಾಣದಷ್ಟು ದೂಳು ಆವರಿಸಿಕೊಳ್ಳುತ್ತಿದೆ. ಸುಸಜ್ಜಿತ ಆಸ್ಪತ್ರೆ ಇಲ್ಲದ ಜಿಲ್ಲೆಯಲ್ಲಿ ರಸ್ತೆಗಳ ಸ್ಥಿತಿಯೂ ನಿಕೃಷ್ಟವಾಗಿದೆ’

ಇದು ಜಿಲ್ಲೆಯ ಪ್ರತಿ ತಾಲ್ಲೂಕುಗಳ ಜನರ ಬಾಯಲ್ಲಿ ನಿತ್ಯ ಕೇಳಿಬರುವ ಮಾತು. ನಾಲ್ಕಾರು ಜನ ಸೇರಿದ ಕಡೆಯಲ್ಲಿ ಈಗ ಹದಗೆಟ್ಟ ರಸ್ತೆಗಳದ್ದೇ ಚರ್ಚೆ ನಡೆಯುತ್ತಿದೆ. ಮಳೆಗಾಲ ಮುಗಿದು ಒಂದೂವರೆ ತಿಂಗಳು ಕಳೆದರೂ ರಸ್ತೆಗಳ ದುರಸ್ತಿ ಕೆಲಸ ಕೈಗೆತ್ತಿಕೊಳ್ಳದ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಗೋಕರ್ಣ, ದಾಂಡೇಲಿ ಸಂಪರ್ಕಿಸುವ ಮಾರ್ಗಗಳು ಹೊಂಡಗುಂಡಿಗಳಿಂದ ತುಂಬಿವೆ.

ಜಿಲ್ಲಾ ಕೇಂದ್ರ ಕಾರವಾರ ನಗರದಲ್ಲೇ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಕಾರವಾರ–ಕೈಗಾ ರಸ್ತೆಯು ನಗರ ವ್ಯಾಪ್ತಿಯಲ್ಲಿ ಸಂಪೂರ್ಣ ಹದಗೆಟ್ಟಿದ್ದು, ಸಾಲುಸಾಲು ಪ್ರತಿಭಟನೆ ನಡೆದ ಬಳಿಕವೂ ರಸ್ತೆ ದುರಸ್ತಿ ಕೆಲಸ ನಡೆದಿಲ್ಲ. ಗ್ರಾಮೀಣ ಭಾಗದಲ್ಲೂ ರಸ್ತೆಗಳ ಡಾಂಬರು ಕಿತ್ತು ಹೋಗಿದ್ದು, ಸಂಚಾರ ದುಸ್ತರವಾಗಿದೆ.

ADVERTISEMENT

‘ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳೇ ಕೆಟ್ಟ ಸ್ಥಿತಿಗೆ ತಲುಪಿದೆ. ಅತಿವೃಷ್ಟಿಯಿಂದ ರಸ್ತೆ ಹಾಳಾಗಿದೆ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಹೊಸ ರಸ್ತೆ ನಿರ್ಮಿಸಲು ತಡವಾಗಬಹುದಾದರೂ ತಾತ್ಕಾಲಿಕ ದುರಸ್ತಿಯನ್ನಾದರೂ ಮಾಡಿಕೊಡಿ ಎಂಬ ಬೇಡಿಕೆಗೆ ಸ್ಪಂದಿಸುತ್ತಿಲ್ಲ’ ಎಂಬುದು ಸಾರ್ವಜನಿಕರ ಆರೋಪ.

ಶಿರಸಿ ನಗರವೂ ಸೇರಿದಂತೆ ತಾಲ್ಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿದೆ. ಮಳೆಗಾಲದಲ್ಲಿ ಗುಂಡಿಗಳಿಗೆ ಹೆದರಿದ್ದ ಜನರು ದೂಳಿಗೆ ಹೈರಾಣಾಗಿದ್ದಾರೆ. ಹೆದ್ದಾರಿ, ಗ್ರಾಮೀಣ ರಸ್ತೆ ಸೇರಿ 250 ಕಿ.ಮೀಗೂ ಹೆಚ್ಚಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ನಗರ ಭಾಗದ ರಸ್ತೆಯಂಚಿನ ತಿನಿಸಿನ ಅಂಗಡಿಗಳು ಸಂಪೂರ್ಣ ಮಣ್ಣಿನ ಕಣದಿಂದ ತುಂಬಿ ವ್ಯಾಪಾರವೂ ಕುಸಿಯುತ್ತಿದೆ ಎನ್ನುತ್ತಾರೆ ಹೋಟೆಲ್ ಉದ್ಯಮಿ ನಾಗರಾಜ ನಾಯ್ಕ.

ಹಳಿಯಾಳದಿಂದ ಯಲ್ಲಾಪುರಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಇಲ್ಲಿನ ಎಂಜಿನಿಯರಿಂಗ್ ಕಾಲೇಜಿನಿಂದ ಕೆಸರೊಳ್ಳಿ ಗ್ರಾಮದವರೆಗೆ ಸಂಪೂರ್ಣ ಹದಗೆಟ್ಟಿದೆ. ಕಳೆದ ಒಂದು ವಾರದಿಂದ ಸ್ಥಳೀಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳ ದಟ್ಟಣೆಯಿಂದ ಪಟ್ಟಣದ ರಸ್ತೆಗಳು ಹಾಳಾಗುತ್ತಿವೆ.

ಕಲಘಟಗಿ ಭಾಗಕ್ಕೆ ತೆರಳುವ ರಸ್ತೆಗಳಲ್ಲಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸಂಜು ನಾಯಕ ಹೇಳಿದರು.

ಗೋಕರ್ಣ ಭಾಗದ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಡಾಂಬರು ರಸ್ತೆಗಳು ಹೊಂಡಮಯವಾಗಿವೆ. ಮಾದನಗೇರಿಯಿಂದ ಗೋಕರ್ಣದ ವರೆಗಿನ ರಸ್ತೆಯಂತೂ ಕಲ್ಲು, ಜಲ್ಲಿಗಳಿಂದ ಕೂಡಿದ ಹೊಂಡಮಯ ರಸ್ತೆಯಾಗಿ ಮಾರ್ಪಟ್ಟಿದೆ. ಮಾದನಗೇರಿಯಿಂದ ಗೋಕರ್ಣದವರೆಗೆ 10 ಕಿ.ಲೋ ಮೀಟರ್ ಕ್ರಮಿಸಲು 30 ನಿಮಿಷಕ್ಕೂ ಹೆಚ್ಚು ಸಮಯ ಬೇಕಾಗುತ್ತಿದೆ ಎಂಬುದು ವಾಹನ ಸವಾರರ ದೂರು. ‘ಪ್ರತಿಬಾರಿ ಮಳೆಗಾಲ ಮುಗಿದ ನಂತರ ಹೊಂಡ ಮುಚ್ಚುವ ಕೆಲಸ ನಡೆಯುತ್ತಿತ್ತು. ಈ ಬಾರಿ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ’ ಎಂದು ಸ್ಥಳೀಯ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಲ್ಲಾಪುರ ತಾಲ್ಲೂಕಿನಲ್ಲಿ ಹೆಚ್ಚಿನ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಮಾವಿನಮನೆ ಗ್ರಾಮ ಪಂಚಾಯಿತಿಯ ಬಾರೆ ಕ್ರಾಸಿನಿಂದ ಮಲವಳ್ಳಿಗೆ ಹೋಗುವ ರಸ್ತೆ, ಬಾಸಲಿನಿಂದ ತಡಕೇಬೈಲ್ ವರೆಗಿನ ರಾಜ್ಯ ಹೆದ್ದಾರಿ, ಮಾಗೋಡು ಕ್ರಾಸ್‍ನಿಂದ ಶಿಂಬಳಗಾರ ಕ್ರಾಸ್‍ವೆಗಿನ ರಸ್ತೆ, ಮಾಗೋಡು ಫಾಲ್ಸ್ ಹತ್ತಿರದ ರಸ್ತೆ ಅತಿಯಾಗಿ ಹಾಳಾಗಿದೆ.

ಹೊನ್ನಾವರ ತಾಲ್ಲೂಕಿನ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಚತುಷ್ಪಥ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದು ಪಟ್ಟಣದಲ್ಲಿ ಸಂಚಾರ ದಟ್ಟಣೆ ಹೆಚ್ಚುವಂತೆ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಬರುವ ಗೇರುಸೊಪ್ಪ ಸಮೀಪದ ಸೂಳೆಮುರ್ಕಿ ತಿರುವು ಅಪಾಯಕಾರಿಯಾಗಿದ್ದು ಅಪಘಾತ ಹೆಚ್ಚಿದೆ.

ದಾಂಡೇಲಿ ನಗರದ ಪ್ರಮುಖ ರಸ್ತೆಗಳು ಗುಂಡಿ ಬಿದ್ದು ಸಂಚರಿಸಲು ಆಗದಷ್ಟು ಹಾಳಾಗಿ ಹೋಗಿವೆ. ಹಳಿಯಾಳ-ಜೊಯಿಡಾ-ದಾಂಡೇಲಿ ರಾಜ್ಯ ಹೆದ್ದಾರಿ ಅಲ್ಲಲ್ಲಿ ಗುಂಡಿಗಳಿಂದ ಆವೃತವಾಗಿದ್ದು ಪ್ರವಾಸಿಗರು ಸಂಚರಿಸಲು ಹಿಂದೇಟು ಹಾಕುವ ಸ್ಥಿತಿ ಉಂಟಾಗಿದೆ. ಹಳೆ ದಾಂಡೇಲಿಯ ಡಿಪೋವರಿಗಿನ ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯರು ಹಲವಾರು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ ಆದರೆ, ರಸ್ತೆ ದುರಸ್ತಿ ಆಗಿಲ್ಲ.

‘ರಸ್ತೆಗಳೂ ಹಾಳಾಗಿದ್ದರೂ ಈವರೆಗೆ ದುರಸ್ತಿಪಡಿಸುವ ಕೆಲಸ ಆರಂಭಿಸಿಲ್ಲ. ಹದಗೆಟ್ಟ ರಸ್ತೆಗಳಿಂದ ನಿತ್ಯ ರಸ್ತೆ ಅಪಘಾತ ಸಂಭವಿಸುತ್ತಿದೆ. ಪ್ರವಾಸಿಗರು ದಾಂಡೇಲಿಯತ್ತ ಬರಲು ಕೆಟ್ಟ ಸ್ಥಿತಿಯ ರಸ್ತೆಗಳ ಕಾರಣದಿಂದ ಹಿಂದೇಟು ಹಾಕುತ್ತಿದ್ದಾರೆ’ ಎಂಬುದು ಅಟಲ್ ಅಭಿಮಾನಿ ಸಂಘದ ಅಧ್ಯಕ್ಷ ವಿಷ್ಣು ನಾಯರ ಆರೋಪ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ರವಿ ಸೂರಿ, ಸಂತೋಷಕುಮಾರ ಹಬ್ಬು, ಎಂ.ಜಿ.ಹೆಗಡೆ, ಜ್ಞಾನೇಶ್ವರ ದೇಸಾಯಿ, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಗೋಕರ್ಣ ಸಮೀಪದ ಸಿದೇಶ್ವರ ಗ್ರಾಮದ ಬಳಿ ರಾಜ್ಯ ಹೆದ್ದಾರಿಯ ಡಾಂಬರು ಕಿತ್ತಿದ್ದು ಜಲ್ಲಿಕಲ್ಲುಗಳು ಮೇಲೆದ್ದು ರಸ್ತೆ ದೂಳುಮಯವಾಗಿದೆ 
ಯಲ್ಲಾಪುರ ತಾಲ್ಲೂಕಿನ ನಂದೊಳ್ಳಿ ರಸ್ತೆ ಕಾಳಿಮನೆ ತಿರುವಿನಲ್ಲಿ ಸಂಪೂರ್ಣ ಹಾಳಾಗಿದೆ
ಹೊಂಡಗಳಿಂದ ತುಂಬಿರುವ ಹುಬ್ಬಳ್ಳಿ–ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಸಾಗುತ್ತಿದೆ
ಹಳಿಯಾಲದಲ್ಲಿ ಕಬ್ಬು ನುರಿಯುವ ಪ್ರಕ್ರಿಯೆ ಆರಂಭಕ್ಕೆ ಮೊದಲು ಗ್ರಾಮೀಣ ರಸ್ತೆ ಸಕ್ಕರೆ ಕಾರ್ಖಾನೆ ರಸ್ತೆ ಸರಿಪಡಿಸುವ ಕೆಲಸ ನಡೆಯಬೇಕು. ಇಲ್ಲವಾದಲ್ಲಿ ಈ ಮಾರ್ಗಗಳು ಸಂಚಾರಕ್ಕೆ ಯೋಗ್ಯವಲ್ಲದಷ್ಟು ಹದಗೆಡುತ್ತವೆ
ಅಶೋಕ ಮೇಟಿ ಹಳಿಯಾಳ ರೈತ ಮುಖಂಡ
ಗೋಕರ್ಣಕ್ಕೆ ಬರುವ ರಸ್ತೆ ಹೊಂಡದಿಂದಲೇ ತುಂಬಿದೆ. ರಸ್ತೆ ಯಾವುದು ಹೊಂಡ ಎಲ್ಲಿದೆ ಎಂದು ಗುರುತಿಸುವುದೇ ದೊಡ್ಡ ಕೆಲಸವಾಗುತ್ತಿದೆ
ಸಾಯಿಪ್ರಕಾಶ ರೆಡ್ಡಿ ಪ್ರವಾಸಿಗ
ಹೊಸ ರಸ್ತೆ ನಿರ್ಮಿಸಲು ಆಗದಿದ್ದರೆ ಕನಿಷ್ಠಪಕ್ಷ ರಸ್ತೆ ಮಧ್ಯದಲ್ಲಿರುವ ಗುಂಡಿಗಳನ್ನಾದರೂ ಮುಚ್ಚಿದರೆ ಸಂಚಾರಕ್ಕೆ ಅನುಕೂಲವಾಗುತ್ತದೆ
ವೆಂಕಟ್ರಮಣ ಕಿರುಕುಂಭತ್ತಿ ಮಾಗೋಡು ಗ್ರಾಮಸ್ಥ

2 ವರ್ಷಗಳಿಂದ ನಿರ್ಮಾಣವಾಗದ ರಸ್ತೆ ಕಳೆದ ಎರಡು ವರ್ಷಗಳಿಂದ ಅಂಕೋಲಾ ತಾಲ್ಲೂಕಿನ ಯಾವುದೇ ಕಡೆ ಹೊಸದಾಗಿ ರಸ್ತೆ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿ ನಡೆದಿಲ್ಲ ಎಂಬುದು ಜನರ ದೂರು. ಬಹುತೇಕ ರಸ್ತೆಗಳು ಹದಗೆಟ್ಟ ಸ್ಥಿತಿಯಲ್ಲಿರುವುದು ಇದಕ್ಕೆ ನಿದರ್ಶನ. ಅಂಕೋಲಾ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಗೋಕರ್ಣ–ವಡ್ಡಿ ರಾಜ್ಯ ಹೆದ್ದಾರಿ ಹೊಂಡಮಯವಾಗಿದೆ. ಹಿಲ್ಲೂರು ಸಮೀಪ ರಸ್ತೆ ಹದಗೆಟ್ಟು ಅಪಘಾತಗಳು ಸಂಭವಿಸುತ್ತಿದ್ದು ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಗೋಕರ್ಣದಿಂದ ಮಂಜಗುಣಿ ಮಾರ್ಗವಾಗಿ ಅಂಕೋಲಾ ಸಂಪರ್ಕಿಸುವ ಪೂಜಗೇರಿ ರಸ್ತೆ ಹದಗೆಟ್ಟು ಮೂರು ವರ್ಷಗಳೇ ಕಳೆದಿದೆ. ಸತತ ಪ್ರತಿಭಟನೆ ಪರಿಣಾಮ ಕಳೆದ ಮೂರು ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿ ಆರಂಭಿಸಿದೆ.

ಸಂಚಾರ ಸಾಧ್ಯವಾಗದ ಹಳ್ಳಿ ರಸ್ತೆ ಜೊಯಿಡಾ ತಾಲ್ಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳ ಜೊತೆಗೆ ಔರಾದ್–ಸದಾಶಿವಗಡ ಉಳವಿ–ಗೋವಾ ಗಡಿ ಅಣಶಿ–ಮುಂಡಗೋಡ ಹೆದ್ದಾರಿಗಳು ಬಹುತೇಕ ಕಡೆಗಳಲ್ಲಿ ಹೊಂಡಗಳಿಂದ ತುಂಬಿವೆ. ಉಳವಿ ಗಾಂಗೋಡಾ ಬಜಾರಕುಣಂಗ ಅಣಶಿ ಕುಂಬಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25ಕ್ಕೂ ಹೆಚ್ಚು ಗ್ರಾಮಗಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಕೆಲವು ಭಾಗಗಳಲ್ಲಿ ಜನರು ಓಡಾಡಲು ಸಾಧ್ಯವಾಗದ ಸ್ಥಿತಿ ಇದೆ. ಉಳವಿ ಗೋವಾಗಡಿ ರಾಜ್ಯ ಹೆದ್ದಾರಿ ಚಂದ್ರಾಳಿಯಿಂದ ಕಡಕರ್ಣಿಯವರೆಗೆ ಸಂಪೂರ್ಣ ಹಾಳಾಗಿದೆ. ಕಿರವತ್ತಿಯಿಂದ ತೇರಾಳಿ ಮೂಲಕ ಡಿಗ್ಗಿ ಭಾಗದ ಹತ್ತು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಜೊತೆಗೆ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಕೆಟ್ಟಿದೆ ಎನ್ನುತ್ತಾರೆ ಸಿಸೈ ನಿವಾಸಿ ಪ್ರಕಾಶ ಮೀರಾಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.