ಕಾರವಾರ: ಜಿಲ್ಲೆಯಾದ್ಯಂತ ಶುಕ್ರವಾರ ದಿನವಿಡೀ ಮಳೆ ಅಬ್ಬರಿಸಿದ್ದು ಹಲವೆಡೆ ಜಲಾವೃತ, ಮನೆ ಗೋಡೆ ಕುಸಿತದ ಘಟನೆಗಳು ನಡೆದವು. ಇನ್ನೂ ಎರಡು ದಿನ ಮಳೆ ವ್ಯಾಪಕವಾಗಿ ಸುರಿಯಲಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಸೂಚನೆ ನೀಡಿದೆ.
ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಯ ಅವಧಿಯಲ್ಲಿ ಭಟ್ಕಳ ತಾಲ್ಲೂಕಿನಲ್ಲಿ ಸರಾಸರಿ 14 ಸೆಂ.ಮೀ, ಹೊನ್ನಾವರ ತಾಲ್ಲೂಕಿನಲ್ಲಿ 11 ಸೆಂ.ಮೀ ಮಳೆ ಸುರಿದಿದೆ. ಕುಮಟಾದಲ್ಲಿ 8 ಸೆಂ.ಮೀ, ಸಿದ್ದಾಪುರದಲ್ಲಿ 5.9 ಸೆಂ.ಮೀ ಮಳೆ ಸುರಿದಿದೆ.
ಸತತವಾಗಿ ಸುರಿದ ಮಳೆಯಿಂದ ಕಾರವಾರ ನಗರದ ಸಾಯಿಕಟ್ಟಾದಲ್ಲಿ ವಿಜಯಾ ಪಾಲನಕರ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದಿದೆ. ಮನೆಯೊಳಗಿದ್ದ ವೃದ್ಧೆ ವಿಜಯಾ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಕಾಳಿ ಜಲಾನಯನ ಪ್ರದೇಶದಲ್ಲಿಯೂ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ಕದ್ರಾ ಜಲಾಶಯಕ್ಕೆ 16 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.