ADVERTISEMENT

ಕೈಗಾ ರಸ್ತೆ ಕಾಮಗಾರಿ ಆರಂಭಿಸಿ: ಶಿರವಾಡ, ಶೇಜವಾಡ ಗ್ರಾಮಸ್ಥರಿಂದ ಶಾಸಕರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 4:26 IST
Last Updated 21 ಡಿಸೆಂಬರ್ 2025, 4:26 IST
ಕಾರವಾರ–ಕೈಗಾ ರಸ್ತೆ ಕಾಮಗಾರಿಯನ್ನು ವಿಳಂಬ ಮಾಡದೆ ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಶಿರವಾಡ, ಶೇಜವಾಡ ಭಾಗದ ಗ್ರಾಮಸ್ಥರು ಶಾಸಕ ಸತೀಶ ಸೈಲ್ ಅವರಿಗೆ ಮನವಿ ಸಲ್ಲಿಸಿದರು 
ಕಾರವಾರ–ಕೈಗಾ ರಸ್ತೆ ಕಾಮಗಾರಿಯನ್ನು ವಿಳಂಬ ಮಾಡದೆ ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಶಿರವಾಡ, ಶೇಜವಾಡ ಭಾಗದ ಗ್ರಾಮಸ್ಥರು ಶಾಸಕ ಸತೀಶ ಸೈಲ್ ಅವರಿಗೆ ಮನವಿ ಸಲ್ಲಿಸಿದರು    

ಕಾರವಾರ: ಹದಗೆಟ್ಟಿರುವ ಕಾರವಾರ–ಕೈಗಾ ರಸ್ತೆ ಕಾಮಗಾರಿಯನ್ನು ವಿಳಂಬ ಮಾಡದೆ ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಶಿರವಾಡ, ಶೇಜವಾಡ ಭಾಗದ ಗ್ರಾಮಸ್ಥರು ಶನಿವಾರ ಶಾಸಕ ಸತೀಶ ಸೈಲ್ ಅವರಿಗೆ ಮನವಿ ಸಲ್ಲಿಸಿದರು.

‘ಹಬ್ಬುವಾಡಾದಿಂದ ಕೈಗಾವರೆಗೆ ರಸ್ತೆ ನಿರ್ಮಾಣಕ್ಕೆ ₹20 ಕೋಟಿ ಅನುದಾನ ಮಂಜೂರಾಗಿದೆ. ಅದೇ ಅನುದಾನ ಬಳಸಿ ಕಾಮಗಾರಿಯನ್ನು ತುರ್ತಾಗಿ ಆರಂಭಿಸಬೇಕು’ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

‘ಈ ಮಾರ್ಗದಲ್ಲಿ ಕೈಗಾದ ಅಣು ಸ್ಥಾವರ ಘಟಕ ನಿರ್ಮಾಣ ಕಾಮಗಾರಿಗೆ ಸಾಮಗ್ರಿ ಪೂರೈಸಲು ಅತಿ ಭಾರದ ವಾಹನಗಳು ಸಂಚರಿಸುತ್ತಿರುವ ಕಾರಣಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಿಕೊಡುವಂತೆ ಕೈಗಾದ ಅಣು ವಿದ್ಯುತ್ ನಿಗಮಕ್ಕೆ ಸೂಚಿಸುವ ಭರವಸೆ ಶಾಸಕರು ನೀಡಿದ್ದರು. ಅವರು ರಸ್ತೆ ನಿರ್ಮಿಸಲು ವಿಳಂಬವಾಗಬಹುದು. ಈಗಾಗಲೇ ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚರಿಸುವುದು ಕಷ್ಟವಾಗುತ್ತಿದೆ. ಹೀಗಾಗಿ, ಈಗಾಗಲೆ ಲೋಕೋಪಯೋಗಿ ಇಲಾಖೆಗೆ ಮಂಜೂರಾದ ಅನುದಾನ ಬಳಸಿಕೊಂಡು ರಸ್ತೆ ನಿರ್ಮಿಸಬೇಕು. ಅತಿ ಭಾರದ ವಾಹನ ಸಂಚರಿಸಲು ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ADVERTISEMENT

ಮನವಿ ಸ್ವೀಕರಿಸಿದ ಶಾಸಕ ಸತೀಶ ಸೈಲ್, ‘ರಸ್ತೆ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗುವುದು. ಅತಿ ಭಾರದ ವಾಹನಗಳ ಓಡಾಟಕ್ಕೆ ಅವಕಾಶ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದರು.

ಪ್ರಮುಖರಾದ ಸಮೀರ ನಾಯ್ಕ, ಚಂದ್ರಶೇಖರ ಬಾಂದೇಕರ, ಸಿದ್ಧಾರ್ಥ ನಾಯ್ಕ, ಪಾಂಡುರಂಗ ರೇವಂಡಿಕರ, ಹರೀಶ ಗುನಗಿ, ನಿತಿನ ಶೆಟ್ಟಿ, ಪ್ರಸನ್ನ ನಾಗೇಕರ, ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.