ADVERTISEMENT

ಕರಾವಳಿ ಉತ್ಸವ | ಏಳು ದಿನವೂ ಸಂಗೀತ ರಸದೌತಣ: ಉ.ಕ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 4:28 IST
Last Updated 21 ಡಿಸೆಂಬರ್ 2025, 4:28 IST
ಕೆ.ಲಕ್ಷ್ಮಿಪ್ರಿಯಾ
ಕೆ.ಲಕ್ಷ್ಮಿಪ್ರಿಯಾ   

ಕಾರವಾರ: ‘ಕರಾವಳಿ ಉತ್ಸವವನ್ನು ಇದೇ ಮೊದಲ ಬಾರಿಗೆ ಸಪ್ತಾಹವಾಗಿ ಆಚರಿಸಲಾಗುತ್ತಿದ್ದು ಡಿ.22ರಿಂದ 28ರ ವರೆಗೆ ಏಳು ದಿನವೂ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಮನರಂಜನೆ ಕಾರ್ಯಕ್ರಮ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಹೇಳಿದರು.

‘ಪ್ರತಿದಿನ ಸಂಜೆ 5.30ರಿಂದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಆರಂಭಗೊಳ್ಳಲಿದೆ. ಡಿ.23ರಿಂದ 27ರ ವರೆಗೆ ಸ್ಥಳೀಯ ಕಲಾವಿದರಿಗೆ ಅವಕಾಶ ಒದಗಿಸಲಾಗಿದೆ. ಸ್ಥಳೀಯ ಕಲಾವಿದರ ಕಾರ್ಯಕ್ರಮದ ಬಳಿಕ ಬಾಲಿವುಡ್, ಸ್ಯಾಂಡಲ್‌ವುಡ್ ಗಾಯಕರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ’ ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘22ರಂದು ಸಂಜೆ 4.30ರಿಂದ ಉತ್ಸವದ ಅಂಗವಾಗಿ ಕರಾವಳಿ ಸಾಂಸ್ಕೃತಿಕ ಕಲಾ ಮೆರವಣಿಗೆ ನಡೆಯಲಿದೆ. ಸಂಜೆ 7ರಿಂದ ಕಡಲತೀರದಲ್ಲಿ ಸಾಂಪ್ರದಾಯಿಕ ದೋಣಿಗಳಲ್ಲಿ ಮೀನುಗಾರರ ಲಾಟೀನು ಪ್ರದರ್ಶನ ನಡೆಯಲಿದೆ. ಬಳಿಕ ನೃತ್ಯ ತಂಡಗಳ ಪ್ರದರ್ಶನ ನಡೆಯಲಿದೆ. ರಾತ್ರಿ 8 ಗಂಟೆಗೆ ಉತ್ಸವಕ್ಕೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ಉದ್ಘಾಟನೆ ಬಳಿಕ ಶಂಕರ ಮಹಾದೇವನ್ ಸಂಗೀತ ಕಾರ್ಯಕ್ರಮ ನಡೆಯಲಿದೆ’ ಎಂದರು.

ADVERTISEMENT

‘23ರಂದು ಬೆಳಿಗ್ಗೆ ಪ್ರಜಾಸೌಧದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ರೀಲ್ಸ್, ಫೋಟೊ ಪ್ರದರ್ಶನ ನಡೆಯಲಿದೆ. ರಾತ್ರಿ ಗುರುಕಿರಣ್ ಸಂಗೀತ ಕಾರ್ಯಕ್ರಮ ನಡೆಯಲಿದೆ. 24ರಂದು ಪ್ರಜಾಸೌಧದಲ್ಲಿ ರಂಗೋಲಿ ಸ್ಪರ್ಧೆ, ಮಾಲಾದೇವಿ ಮೈದಾನದಲ್ಲಿ ಅಡುಗೆ ಸ್ಪರ್ಧೆ ನಡೆಯಲಿದೆ. ರಾತ್ರಿ ಖ್ಯಾತ ಗಾಯಕ ಸೋನು ನಿಗಮ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ’ ಎಂದರು.

‘25ರಂದು ಸಂಜೆ ಕಡಲತೀರದಲ್ಲಿ ಗಾಳಿಪಟ ಉತ್ಸವ, ಮರಳು ಶಿಲ್ಪ ಕಲೆ ಪ್ರದರ್ಶನ ನಡೆಯಲಿದೆ. ರಾತ್ರಿ ಗಾಯಕ ರಫ್ತಾರ್ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 26ರಂದು ಬೆಳಿಗ್ಗೆ ಕಡಲತೀರದಲ್ಲಿ ಕರಾವಳಿ ಮ್ಯಾರಥಾನ್, ಸಂಜೆ ಕವಿಗೋಷ್ಠಿ, ರಾತ್ರಿ ಲಾವಣಿ ಮತ್ತು ರಾಜೇಶ ಕೃಷ್ಣನ್ ಸಂಗೀತ ಕಾರ್ಯಕ್ರಮ ನಡೆಯಲಿದೆ. 27ರಂದು ಬೆಳಿಗ್ಗೆ ಮಾಲಾದೇವಿ ಮೈದಾನದಲ್ಲಿ ಶ್ವಾನ ಪ್ರದರ್ಶನ ನಡೆಯಲಿದ್ದು, ಅಂದು ರಾತ್ರಿ ಮೊಹಮ್ಮದ್ ಡ್ಯಾನಿಶ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. 28ರಂದು ಸಂಜೆ ದೋಣಿ ರೇಸ್ ಸ್ಪರ್ಧೆ ನಡೆಯಲಿದೆ. ಅದಾದ ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು, ರಾತ್ರಿ ದಲೇರ್ ಮೆಹಂದಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.