ಕಾರವಾರ: ಅಂಗನವಾಡಿ ಕೇಂದ್ರಗಳಿಗೆ ರಜೆ ಆರಂಭಗೊಂಡಿದ್ದು ಮೇ 27 ಕ್ಕೆ ಪುನರಾರಂಭಗೊಳ್ಳಲಿದೆ. ಆದರೆ, ಮಳೆಗಾಲಕ್ಕೆ ಮುನ್ನ ಕಟ್ಟಡಗಳ ದುರಸ್ಥಿ, ಸೌಕರ್ಯಗಳ ಅಳವಡಿಕೆಗೆ ಬಹುತೇಕ ಕಡೆ ಕ್ರಮವಾಗದಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಒಟ್ಟು 2,687 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 2,103 ಕೇಂದ್ರಗಳಿಗೆ ಸ್ವಂತ ಕಟ್ಟಡ ಇದ್ದರೆ, 39 ಗ್ರಾಮ ಪಂಚಾಯ್ತಿ, 100 ಸಮುದಾಯ, 7 ಯುವಕ ಮಂಡಳಿ, 1 ಮಹಿಳಾ ಮಂಡಳ, 152 ಸರ್ಕಾರಿ ಶಾಲೆಯ ಕಟ್ಟಡದಲ್ಲಿ ನಡೆಯುತ್ತಿದೆ. 278 ಅಂಗನವಾಡಿಗಳು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ಸೇರಿರುವ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ನಡೆಸಲಾಗುತ್ತಿದೆ.
ಹಲವೆಡೆ ಅಂಗನವಾಡಿ ಕೇಂದ್ರಗಳ ಪಕ್ಕದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಮರಗಳಿವೆ. ನೀರು, ಶೌಚಾಲಯದ ಸೌಲಭ್ಯವೂ ಇಲ್ಲದ ಹತ್ತಾರು ಅಂಗನವಾಡಿಗಳೂ ಇವೆ. ಚಾವಣಿ, ಗೋಡೆಗಳು ಶಿಥಿಲಗೊಂಡ ಕಟ್ಟಡಗಳಲ್ಲಿ ಕೇಂದ್ರ ನಡೆಸಲಾಗುತ್ತಿದೆ. ಇನ್ನೂ ಕೆಲವು ಕಡೆ ಅಂಗನವಾಡಿ ಪಕ್ಕದಲ್ಲೇ ಕೆರೆ, ನೀರು ತುಂಬುವ ಜಾಗಗಳಿವೆ. ಮಳೆಗಾಲದಲ್ಲಿ ಇವು ಅಪಾಯಕಾರಿಯಾಗಬಹುದು ಎಂಬುದು ಜನರ ದೂರು.
ಶಿರಸಿ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಇರುವ ಅಂಗನವಾಡಿಗಳು ಶೌಚಾಲಯ, ಶುದ್ಧ ಕುಡಿಯುವ ನೀರು ಸೇರಿ ಮೂಲ ಸೌಲಭ್ಯ ಕೊರತೆ ಅನುಭವಿಸುತ್ತಿವೆ.
ತಾಲ್ಲೂಕಿನಲ್ಲಿ 378 ಅಂಗನವಾಡಿ ಕೇಂದ್ರಗಳಿದ್ದು, 41 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಬಹುತೇಕ ಕೇಂದ್ರಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಇದರಿಂದ ಶೌಚ, ಮೂತ್ರಕ್ಕೆ ಬಯಲು ಪ್ರದೇಶವನ್ನು ಅವಲಂಬಿಸುವಂತಾಗಿದೆ. ನಗರದ ರಾಜೀವನಗರದಲ್ಲಿ ತಗಡಿನ ಶೆಡ್‍ನಲ್ಲಿ ಕೇಂದ್ರ ನಡೆಯುತ್ತಿದೆ.
‘ಜಾಗದ ಕೊರತೆಯಿಂದ ಕೆಲವು ಕೇಂದ್ರಗಳಿಗೆ ಸ್ವಂತ ಕಟ್ಟಡ ಸಾಧ್ಯವಾಗಿಲ್ಲ. ಐದು ಕೇಂದ್ರಗಳ ಸ್ವಂತ ಕಟ್ಟಡ ಸಿದ್ಧವಾಗಿದ್ದು, ಶೀಘ್ರದಲ್ಲಿ ಉಪಯೋಗಕ್ಕೆ ನೀಡಲಾಗುವುದು’ ಎಂದು ಸಿಡಿಪಿಒ ವೀಣಾ ಶಿರ್ಸಿಕರ್ ಹೇಳುತ್ತಾರೆ.
ಮುಂಡಗೋಡ ತಾಲ್ಲೂಕಿನಲ್ಲಿ ಒಟ್ಟು 195 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 18 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಕೆಲವು ಅಂಗನವಾಡಿ ಕೇಂದ್ರಗಳು ಇಕ್ಕಟ್ಟಾದ ಜಾಗದಲ್ಲಿರುವುದರಿಂದ, ಮಳೆಗಾಲದಲ್ಲಿ ಮಕ್ಕಳು ಅಂಗನವಾಡಿಗೆ ಬರಲು ತೊಂದರೆ ಪಡಬೇಕಾಗಿದೆ.
‘ಮಳೆಗಾಲದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಏನಾದರೂ ತೊಂದರೆ ಆದರೆ, ಅವುಗಳನ್ನು ದುರಸ್ತಿ ಮಾಡಿಸಲಾಗುತ್ತದೆ. ಸದ್ಯದ ಮಟ್ಟಿಗೆ ಎಲ್ಲಿಯೂ ಅಂತಹ ವರದಿಗಳಿಲ್ಲ’ ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ರೂಪಾ ಅಂಗಡಿ ಹೇಳಿದರು.
ಭಟ್ಕಳ ತಾಲ್ಲೂಕಿನಲ್ಲಿ ಒಟ್ಟೂ 228 ಅಂಗನವಾಡಿಗಳಿದ್ದು, ಅದರಲ್ಲಿ 3 ಅಂಗನವಾಡಿಗಳು ಮಾತ್ರ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ಅಂಗನವಾಡಿಗಳನ್ನು ಸ್ವಂತ ಕಟ್ಟಡಕ್ಕೆ ವರ್ಗಾಯಿಸಲು ಜಾಗದ ಹುಡುಕಾಟದಲಿದ್ದು, ಸದ್ಯದಲ್ಲಿಯೇ ಸ್ವಂತ ಜಾಗವನ್ನು ಖರೀದಿ ಮಾಡಿ ಕಟ್ಟಡ ನಿರ್ಮಿಸಲಾಗುವುದು ಎಂದು ಭಟ್ಕಳ ಸಿ.ಡಿ.ಪಿ.ಒ ಸುಶೀಲಾ ತಿಳಿಸಿದ್ದಾರೆ.
ಗೋಕರ್ಣದ ಸಮುದ್ರ ತೀರದಲ್ಲಿರುವ ಅಂಗನವಾಡಿ ಮೂಲಭೂತ ಸೌಲಭ್ಯ, ಸುಸಜ್ಜಿತ ಕಟ್ಟಡ ಸೇರಿದಂತೆ ಎಲ್ಲಾ ಸೌಲಭ್ಯವಿದ್ದರೂ ಮಕ್ಕಳ ಕೊರತೆಯಿಂದ ಮುಚ್ಚಲ್ಪಡುವ ಹಂತಕ್ಕೆ ಬಂದಿದೆ. ಕೇವಲ ಆರು ಮಕ್ಕಳ ಹಾಜರಾತಿ ಅಂಗನವಾಡಿ ಕಾರ್ಯಕರ್ತೆಗೂ ಚಿಂತೆ ಉಂಟುಮಾಡಿದೆ.
ದಾಂಡೇಲಿ ತಾಲ್ಲೂಕಿನಲ್ಲಿ 23 ಅಂಗನವಾಡಿಗಳು ಬಾಡಿಗೆ ಕಟ್ಟಡವನ್ನು ಅವಲಂಬಿಸಿವೆ. ವಿರಾಶಿಗಲ್ಲಿ, ಅಂಬೇವಾಡಿ, ನವಗ್ರಾಮ, ಅಂಬಿಕಾ ನಗರದಲ್ಲಿ ಶಾಸಕರ ಅನುದಾನದಲ್ಲಿ ಕಟ್ಟಡ ಪ್ರಗತಿಯಲ್ಲಿದೆ.
‘ಆಡಳಿತ ವೆಚ್ಚದ ಅಡಿಯಲ್ಲಿ ಅಂಗನವಾಡಿ ಬಾಡಿಗೆ ಕಟ್ಟಬೇಕು ಅನುದಾನ ಕೊರತೆಯಿಂದ ಬಾಡಿಗೆದಾರರಿಗೆ ಉತ್ತರ ಹೇಳುವುದು ಕಷ್ಟವಾಗಿದೆ. ಶಿಕ್ಷಕಿಯರೆ ಬಾಡಿಗೆ ಕೊಟ್ಟ ಉದಾಹರಣೆಗಳಿವೆ’ ಎಂದು ಹಳಿಯಾಳದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿದೇವಿ ಮಾಹಿತಿ ನೀಡಿದ್ದಾರೆ.
‘ಮೂಲಭೂತ ಸೌಕರ್ಯಗಳಿಲ್ಲ, ಇಕ್ಕಟ್ಟಾದ ಜಾಗ ಇರುವ ಕಾರಣ ಮಕ್ಕಳಿಗೆ ತೊಂದರೆ ಆಗುತ್ತಿದೆ’ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು.
‘ಅಂಗನವಾಡಿ ಪೂರೈಕೆ ಆಗುತ್ತಿರುವ ಆಹಾರ ಗುಣಮಟ್ಟ ಕಳಪೆ ಹಾಗೂ ಪ್ರಮಾಣದಲ್ಲಿ ಕಡಿಮೆ ಪೂರೈಕೆ ಆಗುತ್ತಿದೆ’ ಎಂಬುದು ಪಾಲಕರ ದೂರು.
ಸಿದ್ದಾಪುರ ತಾಲ್ಲೂಕಿನ ಶಾಂತಿಪುರ ಮತ್ತು ಬಿಳೇಗೋಡು ಅಂಗನವಾಡಿಗಳಿಗೆ ಕಟ್ಟಡದ ಸಮಸ್ಯೆ ಇತ್ತು. ಕಟ್ಟಡಕ್ಕೆ ಜಾಗ ಮಂಜೂರಾಗಿದ್ದು, ಕಟ್ಟದ ನಿರ್ಮಾಣ ಬಾಕಿ ಇದೆ.
‘ಅಂಗನವಾಡಿ ಕಟ್ಟಡಗಳಲ್ಲಿ ಇದ್ದ ಚಿಕ್ಕ ಪುಟ್ಟ ಸಮಸ್ಯೆಗಳನ್ನು ತಾಲ್ಲೂಕು ಪಂಚಾಯಿತಿಯ ಸಹಾಯ ಮತ್ತು ಇಲಾಖೆಯಲ್ಲಿ ಮೀಸಲಿಟ್ಟ ಹಣದಿಂದ ಸರಿಪಡಿಸಲಾಗುತ್ತಿದೆ’ ಎಂದು ಸಿಡಿಪಿಓ ಪೂರ್ಣಿಮಾ ಆರ್ ಮಾಹಿತಿ ನೀಡಿದರು.
ಯಲ್ಲಾಪುರ ತಾಲ್ಲೂಕಿನಲ್ಲಿ ಮೂರು ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಕೆಲವು ಕಡೆ ತೆರವಾದ, ಖಾಲಿ ಇರುವ ಶಾಲಾ ಕಟ್ಟಡವನ್ನು ಬಳಸಿಕೊಂಡು ಅಂಗನವಾಡಿ ನಡೆಸಲಾಗುತ್ತಿದೆ.
‘ಬಾಳೆಗದ್ದೆ, ಬೆಳ್ಳುಂಬಿ, ಕೋಸಗುಳಿ, ಹುಬ್ನಳ್ಳಿ, ಕೊಡ್ಸೆ, ಚೀಪಗೇರಿ, ಮದನೂರು ಹಾಗೂ ಮಂಚಿಕೇರಿಯಲ್ಲಿ ಅಂಗನವಾಡಿ ಕಟ್ಟಡ ಶಿಥಿಲವಾಗಿದ್ದು ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಫಾತಿಮಾ ತಿಳಿಸಿದರು.
ಅಂಕೋಲಾ ತಾಲ್ಲೂಕಿನಲ್ಲಿ 23 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿವೆ. ಗ್ರಾಮೀಣ ಭಾಗದಲ್ಲಿ ಕನಿಷ್ಠ ನಾಲ್ಕೈದು ಕಡೆಗಳಲ್ಲಿ ಶಿಥಿಲಗೊಂಡ ಅಂಗನವಾಡಿ ಕಟ್ಟಡಗಳಿವೆ. ಮಳೆಗಾಲ ಸಮೀಪಿಸಿದರೂ ಅವುಗಳ ದುರಸ್ಥಿ ಆಗಿಲ್ಲ ಎಂಬುದು ಜನರ ದೂರು.
‘ಶಿಥಿಲಗೊಂಡ ಕಟ್ಟಡಗಳಿದ್ದರೆ ಅವುಗಳನ್ನು ದುರಸ್ಥಿಪಡಿಸಲು ಕ್ರಮವಹಿಸಲಾಗುತ್ತಿದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ ಶಾಸ್ತ್ರೀಮಠ ಹೇಳಿದರು.
ಅಂಗನವಾಡಿ ಆರಂಭಗೊಳ್ಳುವುದರೊಳಗೆ ಅಗತ್ಯ ದುರಸ್ತಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪಾಲಕರು ಆತಂಕಪಡುವ ಅಗತ್ಯವಿಲ್ಲ.
-ಎಚ್.ಎಚ್.ಕುಕನೂರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ
ಅಂಗನವಾಡಿ ಕೇಂದ್ರ ಬಾಡಿಗೆ ಪಡೆಯುವಾಗ ಸೂಕ್ತ ಸೌಲಭ್ಯವುಳ್ಳ ಕಟ್ಟಡಕ್ಕೆ ಆದ್ಯತೆ ನೀಡಿದರೆ ಉತ್ತಮ. -ಶಿವರಾಮ ನಾಯ್ಕ ಶಿರಸಿ ಪಾಲಕ
ಮಳೆಗಾಲದಲ್ಲಿ ಅಪಾಯಕಾರಿ ಎನಿಸುವಂಥ ಕೆಲ ಅಂಗನವಾಡಿಗಳ ಪಟ್ಟಿ ತಯಾರಿಸಿ ದುರಸ್ತಿ ಕಾರ್ಯ ನಡೆಸಲಾಗುತ್ತದೆ. ಅಂಗನವಾಡಿಗಳು ಆರಂಭವಾಗುವುದರೊಳಗೆ ದುರಸ್ತಿ ಕಾರ್ಯ ಮುಗಿಯದಿದ್ದರೆ ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಿಸಲಾಗುವುದು.
-ಶೀಲಾ ಪಟೇಲ ಕುಮಟಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಮುಂಡಗೋಡ ಪಟ್ಟಣದಲ್ಲಿ ಕೆಲವು ಅಂಗನವಾಡಿ ಕೇಂದ್ರಗಳು ಜಾಗದ ಕೊರತೆಯಿಂದ ಬಳಲುತ್ತಿವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿಗೆ ಸ್ವಂತ ಜಾಗ ಮಂಜೂರಿ ಆಗಿದ್ದರೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ.
-ಪ್ರಕಾಶ ಮುಂಡಗೋಡ ಸಾಮಾಜಿಕ ಕಾರ್ಯಕರ್ತ
ನರೇಗಾ ಯೋಜನೆಯಲ್ಲಿ ನಿರ್ಮಾಣ
ಹೊನ್ನಾವರ ತಾಲ್ಲೂಕಿನಲ್ಲಿ ಕುಗ್ರಾಮದಲ್ಲಿದ್ದರೂ ಕೆಲವು ಅಂಗನವಾಡಿಗಳು ಕಟ್ಟಡ ನೀರು ಮೊದಲಾದ ಮೂಲ ಸೌಕರ್ಯಗಳೊಂದಿಗೆ ಸುಸ್ಥಿತಿಯಲ್ಲಿವೆ .ಸ್ವಂತ ನಿವೇಶನ ಹಾಗೂ ಕಟ್ಟಡಗಳಿಲ್ಲದೆ ಕೆಲವು ಕೇಂದ್ರಗಳಲ್ಲಿ ಶಿಕ್ಷಕರು ಹಾಗೂ ಚಿಣ್ಣರು ತೊಂದರೆ ಅನುಭವಿಸುತ್ತಿರುವುದು ಕಂಡು ಬರುತ್ತದೆ. ತಾಲ್ಲೂಕಿನಲ್ಲಿ ಒಟ್ಟು 330 ಅಂಗನವಾಡಿ ಕೇಂದ್ರಗಳಿದ್ದು 189 ಕೇಂದ್ರಗಳು ಮಾತ್ರ ಸ್ವಂತ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ‘40 ಅಂಗನವಾಡಿ ಕಟ್ಟಡಗಳು ನರೇಗಾ ಯೋಜನೆಯಡಿ ನಿರ್ಮಾಣಗೊಂಡಿವೆ. 23 ಅಂಗನವಾಡಿ ಕೇಂದ್ರಗಳಿಗೆ ಹೊಸದಾಗಿ ನಿವೇಶನ ಲಭ್ಯವಾಗಿದ್ದು ಅಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಯೋರ್ವರು ತಿಳಿಸಿದರು.
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ರವಿ ಸೂರಿ, ಶಾಂತೇಶ ಬೆನಕನಕೊಪ್ಪ, ಮೋಹನ ನಾಯ್ಕ, ಪ್ರವೀಣಕುಮಾರ ಸುಲಾಖೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.