
ಕಾರವಾರ: ‘ಕದಂಬ ನೌಕಾನೆಲೆಯಲ್ಲಿ ಸ್ಥಳೀಯ ನಿರಾಶ್ರಿತ ಕುಟುಂಬದ ಯುವಕರಿಗೆ ಉದ್ಯೋಗ ನೀಡದೆ ಹೊರರಾಜ್ಯದವರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ’ ಎಂದು ಹಟ್ಟಿಕೇರಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ ನಾಯ್ಕ ಆರೋಪಿಸಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೌಕಾನೆಲೆಯಲ್ಲಿ ಸಿವಿಲಿಯನ್ ಹುದ್ದೆಗಳ ಭರ್ತಿಗೆ ನಿರ್ಲಕ್ಷಿಸಲಾಗುತ್ತಿದೆ. ಸೀಬರ್ಡ್ ಯೋಜನೆಗೆ ಭೂಮಿ ಬಿಟ್ಟುಕೊಟ್ಟ ನಿರಾಶ್ರಿತರಿಗೆ ಸರಿಯಾಗಿ ಉದ್ಯೋಗ ನೀಡುತ್ತಿಲ್ಲ. ವಿಶಾಖಪಟ್ಟಣಂ ನೌಕಾನೆಲೆಯಲ್ಲಿ ಅಪ್ರೆಂಟಿಸ್ ಮಾಡಿದ 300 ಮಂದಿ ಹೊರರಾಜ್ಯದ ಜನರಿಗೆ ಕದಂಬ ನೌಕಾನೆಲೆಯಲ್ಲಿ ಕಾಯಂ ಉದ್ಯೋಗ ಒದಗಿಸಿದ್ದಾರೆ’ ಎಂದು ದೂರಿದರು.
‘ನೇರನೇಮಕಾತಿ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ನೌಕಾದಳದ ಹುದ್ದೆಗೆ ಆಯ್ಕೆಯಾಗುವಂತೆ ಸ್ಥಳೀಯರಿಗೆ ಸೂಕ್ತ ತರಬೇತಿ ನೀಡಬೇಕು’ ಎಂದು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತ ಗಣಪತಿ ಮಾಂಗ್ರೆ ಮಾತನಾಡಿ, ‘ನೌಕಾದಳ ನೆಲೆ ಸ್ಥಾಪಿಸಲು ಇಲ್ಲಿನ ಜನರು ಭೂಮಿ, ಮೀನುಗಾರಿಕೆ ಚಟುವಟಿಕೆ ತ್ಯಾಗ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಇಲ್ಲಿನವರಿಗೆ ಯಾವ ಸೌಲಭ್ಯವನ್ನೂ ಸರಿಯಾಗಿ ನೀಡುತ್ತಿಲ್ಲ. ಹೊರಗುತ್ತಿಗೆ ಮೇಲೆ ದುಡಿಯುವ ಸ್ಥಳೀಯರ ಮೇಲೆ ನೌಕಾದಳದ ಅಧಿಕಾರಿಗಳ ದಬ್ಬಾಳಿಕೆಯೂ ಹೆಚ್ಚಿದೆ. ಈಚೆಗೆ ಸ್ಥಳೀಯ ಉದ್ಯೋಗಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದು, ತಪ್ಪಿತಸ್ಥ ಅಧಿಕಾರಿ ಮೇಲೆ ಕ್ರಮವಾಗಬೇಕು’ ಎಂದರು.
ಮಾರುತಿ ನಾಯ್ಕ, ವಿನೋದ ಕುಡ್ತಳಕರ, ದರ್ಶನ ರಾಮನಾಥನ್, ಪವನ ದುರ್ಗೇಕರ, ಮೋಹನ ದುರ್ಗೇಕರ, ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.