ADVERTISEMENT

ಕಾರವಾರ: ಹೊಸ ವರ್ಷಕ್ಕೆ ಸಿಡಿದ ಪಟಾಕಿ, ಬೆಳಗಿದ ಕಂದೀಲು

ಕಡಲತೀರದಲ್ಲಿನ ಸಂಭ್ರಮಾಚರಣೆಗೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 5:38 IST
Last Updated 2 ಜನವರಿ 2026, 5:38 IST
ಹೊಸ ವರ್ಷ ಆರಮಭಗೊಳ್ಳುತ್ತಿದ್ದಂತೆ ಕಾರವಾರದ ಕಡಲತೀರದಲ್ಲಿ ಯುವಕರು ಕಂದೀಲು ಬೆಳಗಿ ಹಾರಿಬಿಟ್ಟರು
ಹೊಸ ವರ್ಷ ಆರಮಭಗೊಳ್ಳುತ್ತಿದ್ದಂತೆ ಕಾರವಾರದ ಕಡಲತೀರದಲ್ಲಿ ಯುವಕರು ಕಂದೀಲು ಬೆಳಗಿ ಹಾರಿಬಿಟ್ಟರು   

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಬುಧವಾರ ಮಧ್ಯರಾತ್ರಿ ಕಂದೀಲು ಹಾರಿಸಿ, ಪಟಾಕಿ ಸಿಡಿಸುವ ಮೂಲಕ ಹೊಸ ವರ್ಷವನ್ನು ಸಾವಿರಾರು ಜನರು ಸಂಭ್ರಮದಿಂದ ಸ್ವಾಗತಿಸಿಕೊಂಡರು. ಪಟಾಕಿಗಳು ಸಿಡಿಯುತ್ತಿದ್ದಂತೆ ಜನರ ಕೇಕೆ ಮುಗಿಲು ಮುಟ್ಟಿತ್ತು.

ಕುಟುಂಬ ಸಮೇತರಾಗಿ ಬಂದವರು, ಸ್ನೇಹಿತರೊಂದಿಗೆ ಸೇರಿದ್ದವರು ಕುಣಿದು ಕುಪ್ಪಳಿಸಿದರು. ಕಡಲತೀರದುದ್ದಕ್ಕೂ ಜನಸಾಗರ ಕಂಡುಬಂತು. ವಿವಿಧ ಹಾಡುಗಳಿಗೆ ಚಿಣ್ಣರು, ಯುವತಿಯರು, ಮಹಿಳೆಯರು ಸೇರಿದಂತೆ ನೂರಾರು ಜನರು ಹೆಜ್ಜೆ ಹಾಕಿದರು. ಹೊಸ ವರ್ಷ ಆರಂಭಗೊಳ್ಳುತ್ತಿದ್ದಂತೆ ಬಣ್ಣ ಬಣ್ಣದ ಕಂದೀಲುಗಳನ್ನು (ಲ್ಯಾಂಟರ್ನ್) ಹಾರಿಬಿಟ್ಟು ಸಂಭ್ರಮಿಸಲಾಯಿತು.

ಹೊಸ ವರ್ಷ ಬರಮಾಡಿಕೊಳ್ಳುವ ಸಡಗರದ ಹಿನ್ನೆಲೆಯಲ್ಲಿ ಕಡಲತೀರದುದ್ದಕ್ಕೂ ಬೀಗಿ ಪೊಲೀಸ್ ಕಾವಲು ಹಾಕಲಾಗಿತ್ತು. ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರವಹಿಸಲಾಗಿತ್ತು. ಕುಟುಂಬ ಸಮೇತರಾಗಿ ಬಂದವರು ಅಲ್ಲಲ್ಲಿ ಊಟ, ಉಪಾಹಾರ ಸೇವನೆಯಲ್ಲಿ ತೊಡಗಿದ್ದರು. ಕೆಲವರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಮದ್ಯ ಸೇವನೆ, ಮಾದಕ ವಸ್ತು ಸೇವನೆ ನಡೆಯದಂತೆ ಪೊಲೀಸರು ನಿಗಾ ಇರಿಸಿದ್ದರು.

ADVERTISEMENT

ನಗರದ ಕೆಲ ಹೋಟೆಲ್‍ಗಳಲ್ಲಿ, ತಾಲ್ಲೂಕಿನ ವಿವಿಧೆಡೆಯಲ್ಲಿರುವ ರೆಸಾರ್ಟ್‍ಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವರ್ಷಾಂತ್ಯದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನದಿಂದ ಇಲ್ಲಿನ ಹೋಟೆಲ್, ವಸತಿಗೃಹಗಳಲ್ಲಿ ತಂಗಿದ್ದ ಬಹುತೇಕ ಪ್ರವಾಸಿಗರು ವರ್ಷದ ಕೊನೆಯ ದಿನ ಗೋವಾದತ್ತ ಮುಖ ಮಾಡಿದ್ದರು. ಅಲ್ಲಿನ ಕಡಲತೀರಗಳಲ್ಲಿ ಆಯೋಜನೆಗೊಂಡಿದ್ದ ಪಾರ್ಟಿಗಳತ್ತ ಪ್ರವಾಸಿಗರು ಹೆಚ್ಚು ಆಕರ್ಷಿತರಾಗಿದ್ದರು.

ಸಂಭ್ರಮಾಚರಣೆ ನೆಪದಲ್ಲಿ ತಡರಾತ್ರಿಯವರೆಗೂ ಕಡಲತೀರದಲ್ಲಿ ಕಾಲ ಕಳೆಯಲು, ಮೋಜು ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ. ಜನರಿಗೆ ಮನೆಗೆ ತೆರಳುವಂತೆ ಸೂಚಿಸಿದರು. ಕೆಲವು ಕಡೆ ಯುವಕರ ಗುಂಪು ನಸುಕಿನ ಜಾವದವರೆಗೂ ಮೋಜುಮಸ್ತಿಯಲ್ಲಿ ತೊಡಗಿತ್ತು. ಅಂತಹವರಿಗೆ ಎಚ್ಚರಿಕೆ ನೀಡಿ ಪೊಲೀಸರು ಕಳಿಸಿದರು.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾರವಾರದ ಕಡಲತೀರದಲ್ಲಿ ಮಹಿಳೆಯರು ನೃತ್ಯ ಮಾಡುತ್ತ ಸಂಭ್ರಮಿಸಿದರು ಪ್ರಜಾವಾಣಿ ಚಿತ್ರ: ದಿಲೀಪ ರೇವಣಕರ್
ಮುಂಡಗೋಡದಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರುವ ಸಂದೇಶ ಬರೆಯುವುದರಲ್ಲಿ ನಿರತನಾಗಿದ್ದ ಯುವಕ

ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ 

ಮುಂಡಗೋಡ: ಮೈ ಕೊರೆಯುವ ಚಳಿಯು ಯುವಸಮೂಹದ ಉತ್ಸಾಹವನ್ನು ಕಡಿಮೆ ಮಾಡಲಿಲ್ಲ. ಚಳಿಗೆ ಹೆದರಿ ಮನೆಮಂದಿ ಮನೆ ಬಾಗಿಲು ಹಾಕಿ ಒಳಗೆ ಕುಳಿತರೆ ಚಿಣ್ಣರು ಯುವಕರು ರಸ್ತೆ ಮೇಲೆ ಓಡಾಡುತ್ತ ಹೊಸ ವರ್ಷವನ್ನು ಕೇಕೆ ಕುಣಿತದಿಂದ ಸಂಭ್ರಮದಿಂದ ಸ್ವಾಗತಿಸಿದರು. ಪಟ್ಟಣದ ಬೇಕರಿಗಳಲ್ಲಿ ಗ್ರಾಹಕರನ್ನು ಸೆಳೆಯಲು ವಿದ್ಯುದೀಪಗಳಿಂದ ಅಲಂಕರಿಸಲಾಗಿತ್ತು. ಬಹುತೇಕ ಬೇಕರಿಗಳಲ್ಲಿ ರಾತ್ರಿ 10ಗಂಟೆ ವರೆಗೆ ಜನಸಂದಣಿ ಕಂಡುಬಂತು. ಹುಡುಗರು ರಸ್ತೆ ಮೇಲೆ ಹೊಸ ವರ್ಷಕ್ಕೆ ಸ್ವಾಗತ ಕೋರುವ ಸಂದೇಶಗಳನ್ನು ಬರೆದರು. ಕೆಲವೆಡೆ ಮಕ್ಕಳ ಜೊತೆ ಮಹಿಳೆಯರೂ ಸಾಥ್ ನೀಡಿದರು.

ಮನೆಯ ಮುಂದೆ ಹಾಗೂ ತಾರಸಿ ಮೇಲೆ ಮಹಿಳೆಯರು ಸಂಗೀತಕ್ಕೆ ಹೆಜ್ಜೆ ಹಾಕುತ್ತ ಹೊಸ ವರ್ಷವನ್ನು ಸಂತಸದಿಂದ ಸ್ವಾಗತಿಸಿದರು. ಯುವಕರು ರಸ್ತೆ ಬದಿ ಬೆಂಕಿ ಹಾಕಿ ನೃತ್ಯ ಮಾಡುತ್ತ ಹೊಸ ವರ್ಷವನ್ನು ಸ್ವಾಗತಿಸಿದರು. ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥಿಸಿದರು. ಸರಿಯಾಗಿ 12ಗಂಟೆಗೆ ಕೆಲ ಸೆಕೆಂಡ್ ಗಳ ಕಾಲ ವಿದ್ಯುತ್ ಕಡಿತಗೊಂಡಿತು. ಆಗ ಆಕಾಶದಲ್ಲಿ ಆಕರ್ಷಕ ಸಿಡಿಮದ್ದುಗಳ ಚಿತ್ತಾರ ಮೂಡಿತು. ಯುವಕರ ಕೇಕೆ ಪಟಾಕಿಗಳ ಸದ್ದಿನೊಂದಿಗೆ ಹೊಸ ವರ್ಷಕ್ಕೆ ಸ್ವಾಗತ ಕೋರಲಾಯಿತು. ಪಟ್ಟಣದ ಶಿವಾಜಿ ವೃತ್ತದಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದರು. ತಾಲ್ಲೂಕಿನ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಕೇಕ್ ತೆಗೆದುಕೊಂಡು ಬಂದು ಶಾಲೆಯಲ್ಲಿ ಗುರುವಾರ ಹೊಸ ವರ್ಷವನ್ನು ಸ್ವಾಗತಿಸಿದರು.

ಪ್ರವಾಸಿಗರಿಂದ ಹೊಸ ವರ್ಷಾಚರಣೆ

ಗೋಕರ್ಣ: ಗೋಕರ್ಣದ ಎಲ್ಲಾ ಕಡಲ ತೀರಗಳು ನಿರೀಕ್ಷೆಯಂತೆ ಹೊಸ ವರ್ಷದ ಆಚರಣೆಯಲ್ಲಿ ಪ್ರವಾಸಿಗರಿಂದ ತುಂಬಿತ್ತು. 2026ನ್ನು ಸಂಭ್ರಮದಿಂದ ಸ್ವಾಗತಿಸಿದರು.  ಸಂಜೆ ಸೂರ್ಯಾಸ್ತದ ಸಮಯದಿಂದಲೇ ಹೆಚ್ಚಿನ ಪ್ರವಾಸಿಗರು ಬೀಚ್‌ಗೆ ಲಗ್ಗೆ ಇಟ್ಟಿದ್ದರು. ತಡರಾತ್ರಿ 2 ಗಂಟೆಯವರೆಗೂ ಕಂಡು ಬಂದರು. ಮೇನ್ ಬೀಚ್‌ನಲ್ಲಿರುವ ಕರಿಯಪ್ಪ ಕಟ್ಟೆಯ ಬಳಿ ಹೆಚ್ಚಿನ ಜನರು ಸಂಭ್ರಮಾಚರಣೆ ಮಾಡಿದ್ದು ಕಂಡು ಬಂತು. ಸ್ವದೇಶಿ ಪ್ರವಾಸಿಗರ ಅಬ್ಬರಕ್ಕೆ ವಿದೇಶಿ ಪ್ರವಾಸಿಗರು ಮೂಕವಿಸ್ಮಿತರಾಗಿದ್ದರು. ಇವರ ಆರ್ಭಟಕ್ಕೆ ಹೆದರಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಯರು ಬೀಚ್ ಗಳಿಗೆ ಬರದೇ ವಸತಿ ಗೃಹದಲ್ಲಿಯೇ ಹೊಸ ವರ್ಷಾಚರಣೆ ಮಾಡಿದರು.

ಮೇನ್ ಬೀಚ್ ಸೇರಿದಂತೆ ಎಲ್ಲಾ ಬೀಚ್ ಗಳಲ್ಲಿಯೂ ಸಿಡಿಮದ್ದುಗಳ ಪ್ರದರ್ಶನ ಕಣ್ಮನ ಸೆಳೆಯಿತು. ಕೆಲವು ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಯಾವುದೇ ಅಹಿತಕರ ಘಟನೆ ದಾಖಲಾಗಿಲ್ಲ. 4 ಕಡೆ ಮ್ಯೂಸಿಕ್ ಪಾರ್ಟಿ ಆಯೋಜಿಸಲಾಗಿತ್ತು. ಶಾಂತತೆ ಕಾಪಾಡಲು ಎಲ್ಲಾ ಬೀಚ್ ಗಳಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಭಟ್ಕಳ್ ಡಿ.ಎಸ್.ಪಿ. ಮಹೇಶ ಎಂ.ಕೆ. ಡಿ.ಆರ್.ಡಿ ಅಧಿಕಾರಿ ರಾಘವೇಂದ್ರ ನಾಯಕ ಬೀಚ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಗೋಕರ್ಣ ಠಾಣಾ ನಿರೀಕ್ಷಕ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.