
ಕಾರವಾರ: ವಾಯುಭಾರ ಕುಸಿತದ ಪರಿಣಾಮವಾಗಿ ಬಿರುಸಿನ ಗಾಳಿಯೊಂದಿಗೆ ಆಗಾಗ ಸುರಿಯುತ್ತಿರುವ ಮಳೆಯು ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಹವಾಮಾನ ವೈಪರಿತ್ಯದಿಂದಾಗಿ ನೂರಾರು ಮೀನುಗಾರಿಕೆ ದೋಣಿಗಳು ಇಲ್ಲಿನ ವಾಣಿಜ್ಯ ಬಂದರು ಸಮೀಪ ಲಂಗರು ಹಾಕಿವೆ.
ಮುಂಗಾರು ಮಳೆ ಮುಗಿದ ಬಳಿಕವೂ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಪದೇ ಪದೇ ಉಂಟಾಗುತ್ತಿರುವ ವಾಯುಭಾರ ಕುಸಿತವು ಜಿಲ್ಲೆಯಲ್ಲಿ ಮಳೆಯ ವಾತಾವರಣ ಮುಂದುವರಿಯುವಂತೆ ಮಾಡಿದೆ. ಶುಕ್ರವಾರವೂ ಜಿಲ್ಲೆಯಾದ್ಯಂತ ಗಾಳಿ, ಗುಡುಗು ಸಹಿತ ಮಳೆ ಸುರಿದಿದೆ.
ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಬಿರುಸಿನ ಗಾಳಿ ಬೀಸುತ್ತಿರುವ ಪರಿಣಾಮವಾಗಿ ಆಳಸಮುದ್ರದಿಂದ ಪರ್ಸಿನ್, ಟ್ರಾಲರ್ ದೋಣಿಗಳು ಸುರಕ್ಷಿತ ಸ್ಥಳ ಅರಸಿ ಇಲ್ಲಿನ ಬೈತಕೋಲ ಮೀನುಗಾರಿಕೆ ಬಂದರು, ವಾಣಿಜ್ಯ ಬಂದರು ಸಮೀಪ ಬಂದು ನಿಂತವು. ಮಲ್ಪೆಯ ದೋಣಿಗಳು ಸಾಲು ಸಾಲಾಗಿ ವಾಣಿಜ್ಯ ಬಂದರಿನ ಹಡಗು ಕಟ್ಟೆಯ ಬಳಿ ಬಂದು ನಿಂತರೆ, ಹೊರರಾಜ್ಯದ ದೋಣಿಗಳು ಮೀನುಗಾರಿಕೆ ಬಂದರಿನಿಂದ ಹೊರಗೆ ನಿಂತಿದ್ದವು.
ಗಾಳಿ, ಮಳೆಯಿಂದಾಗಿ ಟ್ಯಾಗೋರ್ ಕಡಲತೀರದಲ್ಲಿ ಸಾಂಸ್ಕೃತಿಕ ಉತ್ಸವದ ನಿಮಿತ್ತ ಮಳಿಗೆ ತೆರೆದಿದ್ದ ಅಂಗಡಿಕಾರರು ವಹಿವಾಟು ಇಲ್ಲದೆ ನಷ್ಟ ಎದುರಿಸುತ್ತಿದ್ದಾರೆ. ಅಕಾಲಿಕ ಮಳೆಯಿಂದಾಗಿ ಭತ್ತದ ಕಟಾವಿಗೆ ಕಾದಿರುವ ರೈತರಲ್ಲೂ ಆತಂಕ ಮನೆಮಾಡಿದೆ.
ಅ. 28ರ ವರೆಗೂ ಜಿಲ್ಲೆಯ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಅವಧಿಯಲ್ಲಿ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.