ADVERTISEMENT

ಕಾರವಾರ: ರಾಜ್ಯ ಬಜೆಟ್‌ನಲ್ಲಿ ಅಭಿವೃದ್ಧಿಗೆ ₹13 ಸಾವಿರ ಕೋಟಿ ಬೇಡಿಕೆ

ರಾಜ್ಯ ಬಜೆಟ್‌ನಲ್ಲಿ ಅನುಮೋದನೆ ಸಿಗುವ ನಿರೀಕ್ಷೆ: ಮೊದಲ ಬಾರಿಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 3:08 IST
Last Updated 6 ಫೆಬ್ರುವರಿ 2026, 3:08 IST
<div class="paragraphs"><p> ಬಜೆಟ್‌ ನಿರೀಕ್ಷೆ</p></div>

ಬಜೆಟ್‌ ನಿರೀಕ್ಷೆ

   

ಕಾರವಾರ: ಕೆಲವೇ ದಿನಗಳಲ್ಲಿ ಮಂಡನೆಯಾಗಲಿರುವ ರಾಜ್ಯ ಸರ್ಕಾರದ ಬಜೆಟ್‌ ತಯಾರಿಕೆಗೆ ಪೂರಕವಾಗಿ ಜಿಲ್ಲೆಯಿಂದ ವಿವಿಧ ಅಭಿವೃದ್ಧಿ ಯೋಜನೆಗೆ ₹13,800 ಕೋಟಿ ಮೊತ್ತದ ಪ್ರಸ್ತಾವ ಸಲ್ಲಿಕೆಯಾಗಿದೆ.

ನಗರ ಸ್ಥಳೀಯ ಸಂಸ್ಥೆಗಳು ₹3,671 ಕೋಟಿ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು ₹247 ಕೋಟಿ ಪ್ರಸ್ತಾವನೆ ಸಲ್ಲಿಸಿವೆ. ಒಟ್ಟು 46 ಇಲಾಖೆಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಯೋಜನೆಗೆ ₹405 ಕೋಟಿ, ಪರಿಶಿಷ್ಟ ಪಂಡಗಕ್ಕೆ ₹262 ಕೋಟಿ ಮೀಸಲಿಡಲಾಗಿದೆ.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಜಿಲ್ಲಾ ಯೋಜನಾ ಸಮಿತಿ ವಿವಿಧ ಇಲಾಖೆಗಳ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಈ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ತರಾತುರಿಯಲ್ಲಿ ಯೋಜನಾ ಸಮಿತಿ ಸಭೆ ನಡೆದಿತ್ತು. ರಾಜ್ಯ ಸರ್ಕಾರ ನೀಡಿದ ಅಂತಿಮ ಗಡುವಿನ ಕೊನೆ ಕ್ಷಣದಲ್ಲಿ ಸಭೆ ನಡೆಸಿ, ಪ್ರಸ್ತಾವ ಸಲ್ಲಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘2026–27ನೇ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ವಿವಿಧ ಇಲಾಖೆಯಿಂದ ಕೈಗೊಳ್ಳಲಾಗುವ ಯೋಜನೆಗಳಿಗೆ ಅನುದಾನದ ಬೇಡಿಕೆ ಪ್ರಸ್ತಾವದಲ್ಲಿದೆ. ಗ್ರಾಮೀಣ, ನಗರ ಪ್ರದೇಶದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ, ಹೊಸ ಯೋಜನೆಗಳಿಗೆ ಪೂರಕವಾದ ಅಂಶಗಳನ್ನೂ ಅದು ಒಳಗೊಂಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸರ್ಕಾರ ಬಜೆಟ್‌ ತಯಾರಿಕೆಗೆ ಜಿಲ್ಲಾಮಟ್ಟದ ಪ್ರಸ್ತಾವ ಪರಿಗಣಿಸಿದ್ದು ಅಪರೂಪ. ಅದರಲ್ಲಿಯೂ ಜಿಲ್ಲಾ ಯೋಜನಾ ಸಮಿತಿ ಸಲ್ಲಿಸುವ ಕರಡು ಪ್ರಸ್ತಾವಗಳನ್ನು ಪರಿಗಣಿಸಿದ ಉದಾಹರಣೆಗಳು ಕಡಿಮೆ. ಆದರೆ, ಈ ಬಾರಿ ಬಜೆಟ್‌ ತಯಾರಿಕೆಗೆ ಮುನ್ನವೇ ಸರ್ಕಾರದಮಟ್ಟದಿಂದ ಪ್ರಸ್ತಾವ ಸಲ್ಲಿಸಲು ಸೂಚನೆ ಬಂದಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಗ್ರಾಮ ಪಂಚಾಯಿತಿಗಳಲ್ಲಿ ನಡೆದ ಗ್ರಾಮ ಸಭೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾಮಾನ್ಯ ಸಭೆಗಳಲ್ಲಿ ಸಲ್ಲಿಸಲಾದ ಬೇಡಿಕೆಗಳನ್ನು ಕ್ರೋಢೀಕರಿಸಿ ಜಿಲ್ಲಾ ಹಂತದಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷರು ಸಭೆ ನಡೆಸಿದ್ದರು. ಈ ಕರಡು ಪ್ರಸ್ತಾವವನ್ನು ರಾಜ್ಯ ಪಂಚಾಯತ ರಾಜ್ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷರು ಈಚೆಗೆ ಶಿರಸಿಯಲ್ಲಿ ನಡೆಸಿದ ಸಭೆಯಲ್ಲಿ ವಿಶ್ಲೇಷಿಸಿ ಅನುಮೋದಿಸಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.