ಕಾರವಾರ: ‘ಜಿಲ್ಲೆಯಲ್ಲಿ ಬಿಸಿಲ ಝಳ ಹಿಂದೆಂದಿಗಿಂತಲೂ ಅಧಿಕವಾಗುತ್ತಿದ್ದು ಜನರು ಅಗತ್ಯ ಮುನ್ನೆಚ್ಚರಿಕೆ ಪಾಲಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ. ಹೇಳಿದರು.
ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆರೋಗ್ಯ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಬಿಸಿಲು ಹೆಚ್ಚಿರುವ ಅವಧಿಯಲ್ಲಿ ವೃದ್ಧರು, ಮಕ್ಕಳು ಮನೆಯಿಂದ ಹೊರಹೋಗದಂತೆ ಎಚ್ಚರ ವಹಿಸಬೇಕು. ಬೆಳಿಗ್ಗೆ, ಮಧ್ಯಾಹ್ನದ ಅವಧಿಯಲ್ಲಿ ಮನೆಯಿಂದ ಹೊರಹೋಗುವುದಿದ್ದರೆ ಛತ್ರಿ ಹಿಡಿದು ಅಥವಾ ಟೋಪಿ ಧರಿಸಿ ಸಾಗಬೇಕು. ಅತಿ ಹೆಚ್ಚು ನೀರು ಸೇವನೆ ಮಾಡಬೇಕು. ತಂಪು ಪಾನೀಯಗಳ ಬದಲು ಹಣ್ಣಿನ ಜ್ಯೂಸ್, ಮಜ್ಜಿಗೆಯಂತಹ ಆರೋಗ್ಯಕರ ಪಾನೀಯ ಸೇವಿಸಬೇಕು’ ಎಂದರು.
‘ಜಿಲ್ಲೆಯಲ್ಲಿ ಡೆಂಗಿ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹತೋಟಿಯಲ್ಲಿವೆ. ಕೆಎಫ್‌ಡಿ ಸೋಂಕಿನ ಸಮಸ್ಯೆ ಎದುರಾಗಿಲ್ಲ. ಎಲ್ಲ ಕಾಯಲೆಗಳನ್ನು ನಿಯಂತ್ರಿಸಲು ಅಗತ್ಯ ಸೌಲಭ್ಯಗಳಿವೆ’ ಎಂದರು.
ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ.ನಟರಾಜ್ ಕೆ., ಡಾ.ಕ್ಯಾಪ್ಟನ್ ರಮೇಶ ರಾವ್, ಡಾ.ಶಂಕರ ರಾವ್, ಡಾ.ಹರ್ಷ, ಡಾ.ಅರ್ಚನಾ ನಾಯ್ಕ, ಡಾ.ಅಶ್ವಿನಿ ಬೋರಕರ್ ಉಪನ್ಯಾಸ ನೀಡಿದರು.
ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ. ಹರಿಕಾಂತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಉಪಾಧ್ಯಕ್ಷ ನಾಗರಾಜ ಹರಪನಹಳ್ಳಿ, ಖಜಾಂಚಿ ಗಣಪತಿ ಹೆಗಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.