
ಕಾರವಾರ: ‘ಕರ್ನಾಟಕದ ಕಾಶ್ಮೀರ ಎನಿಸಿಕೊಂಡ ಕಾರವಾರದ ಹಳೆಯ ವೈಭವ ನೋಡಿದ್ದೀರಾ’ ಎಂಬ ಶೀರ್ಷಿಕೆಯಡಿ ಇಲ್ಲಿನ ಪ್ರವಾಸಿ ತಾಣ, ಜನರನ್ನು ರಂಜಿಸುತ್ತಿದ್ದ ಹಳೆಯ ಸೌಲಭ್ಯಗಳ ದೃಶ್ಯವೊಂದು ಈಚೆಗೆ ರೀಲ್ಸ್ ಮೂಲಕ ಹೆಚ್ಚು ಸದ್ದು ಮಾಡಿತು. ಇದರ ಬೆನ್ನಲ್ಲೇ ಇದ್ದ ಪ್ರವಾಸಿ ಸೌಲಭ್ಯಗಳನ್ನು ಹಾಳುಗೆಡವಲಾಗಿದೆ ಎಂಬ ಅಸಮಾಧಾನವೂ ಜನರಲ್ಲಿ ಹೆಚ್ಚುತ್ತಿದೆ.
ವರ್ಷಾಂತ್ಯದ ಸಮಯದಲ್ಲಿ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಪ್ರವಾಸಿಗರು ಕಾರವಾರಕ್ಕೆ ಭೇಟಿ ನೀಡಿದ್ದರು. ಇಲ್ಲಿನ ರೆಸಾರ್ಟ್, ಹೋಮ್ ಸ್ಟೇ, ಹೋಟೆಲ್, ವಸತಿ ಗೃಹಗಳಲ್ಲಿ ಕೊಠಡಿಗಳು ಭರ್ತಿಯಾಗಿದ್ದವು. ಆದರೆ, ಇಲ್ಲಿನ ಪ್ರವಾಸಿ ತಾಣಗಳತ್ತ ಮಾತ್ರ ಪ್ರವಾಸಿಗರು ಸುಳಿದಿರಲಿಲ್ಲ. ಪ್ರವಾಸಿಗರನ್ನು ಸೆಳೆಯಬೇಕಿದ್ದ ತಾಣಗಳು ಕಣ್ಣಿಗೆ ‘ಮರೆಯಾಗಿದ್ದು’ ಇದಕ್ಕೆ ಮುಖ್ಯ ಕಾರಣ ಎಂಬ ದೂರು ಪ್ರವಾಸೋದ್ಯಮಿಗಳಿಂದ ವ್ಯಕ್ತವಾಯಿತು.
ದೇಶದಲ್ಲೇ ಅಪರೂಪದ ಕಪ್ಪು ಮರಳಿನ ತೀಳಮಾತಿ ಕಡಲತೀರ, ಚಿತ್ತಸೆಳೆಯುವ ಟ್ಯಾಗೋರ್ ಕಡಲತೀರ, ಯುದ್ಧನೌಕೆ ವಸ್ತು ಸಂಗ್ರಹಾಲಯ ಉದ್ಯಾನ, ಕಾಳಿ ದ್ವೀಪ ಮತ್ತು ಅಲ್ಲಿನ ಕಾಂಡ್ಲಾ ನಡಿಗೆ, ಶಿಲ್ಪ ವನ (ರಾಕ್ ಗಾರ್ಡನ್), ವಿಜ್ಞಾನದ ಕೌತುಕಗಳನ್ನು ವಿವರಿಸುವ ಉಪವಿಜ್ಞಾನ ಕೇಂದ್ರ, ಅಲ್ಲೇ ಇರುವ ಮತ್ಸ್ಯ ಸಂಗ್ರಹಾಲಯ, ದೇವಬಾಗ ಕಡಲತೀರ, ಸದಾಶಿವಗಡ ಕೋಟೆ, ಕಾವಿ ಕಲೆಯ ಸಿರಿವಂತಿಕೆ ಪ್ರದರ್ಶಿಸುವ ದೇವಾಲಯಗಳು, ಹಜ್ರತ್–ಶಾ–ಕರಾಮುದ್ದಿನ್ ದರ್ಗಾ...ಹೀಗೆ ಇಲ್ಲಿನ ಪ್ರವಾಸಿ ತಾಣಗಳ ಪಟ್ಟಿ ದೊಡ್ಡದಿದೆ.
ಆದರೆ, ಈ ತಾಣಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಒಂದೂ ಫಲಕ ಇಡೀ ನಗರದಲ್ಲೆಲ್ಲೂ ಇಲ್ಲ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪರಿಣಾಮಕಾರಿ ಕೆಲಸವೇ ನಡೆದಿಲ್ಲ. ಇದ್ದ ತಾಣಗಳೂ ಪ್ರವಾಸಿಗರಿಂದ ದೂರವಾಗುತ್ತಿವೆ ಎಂಬುದು ಇಲ್ಲಿನ ಜನರ ಕೊರಗು.
‘ಕರಾವಳಿ ಭಾಗದಲ್ಲಿನ ಗೋಕರ್ಣ, ಮುರುಡೇಶ್ವರಕ್ಕಿಂತಲೂ ಹೆಚ್ಚಿನ ಪ್ರವಾಸಿ ತಾಣಗಳು ಕಾರವಾರದಲ್ಲಿವೆ. ಆದರೆ, ಅಲ್ಲಿಗೆ ಹೋಲಿಕೆ ಮಾಡಿದರೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ. ಕಾರವಾರದಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಫಲಕವಾಗಲಿ, ಪರಿಣಾಮಕಾರಿಯಾಗಿ ಪ್ರಚುರಪಡಿಸುವ ಕೆಲಸವಾಗಲಿ ನಡೆಯುತ್ತಿಲ್ಲ’ ಎನ್ನುತ್ತಾರೆ ಪ್ರವಾಸೋದ್ಯಮಿ ವಿನಯ ನಾಯ್ಕ.
‘ಪ್ರವಾಸಿಗರು ತಾಣದ ಸೌಂದರ್ಯದ ಜೊತೆಗೆ ಇಲ್ಲಿನ ಸ್ವಚ್ಛತೆಯ ಬಗ್ಗೆಯೂ ಗಮನ ಕೇಂದ್ರೀಕರಿಸುತ್ತಾರೆ. ನಗರಕ್ಕೆ ಬರುತ್ತಿದ್ದಂತೆಯೇ ಹಳೆಯ ಪರಿಕರಗಳನ್ನು ದಾಸ್ತಾನು ಮಾಡಿದ ಕಡಲತೀರದ ಪ್ರದೇಶ, ಮಲೀನ ನೀರು ಹರಿಯುವ ಕೋಣೆನಾಲಾ ಕಾಲುವೆ ಎದುರಾಗುತ್ತಿದೆ. ಹೆದ್ದಾರಿಯ ಮೇಲ್ಸೇತುವೆಯ ಬಳಿಯೂ ಸ್ವಚ್ಛತೆ ಕಾಪಾಡುತ್ತಿಲ್ಲ. ಇವೆಲ್ಲದರಿಂದ ಪ್ರವಾಸಿರು ಬೇಸರಿಸಿಕೊಳ್ಳುತ್ತಿದ್ದಾರೆ’ ಎಂದರು.
‘ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಜಲಸಾಹಸ ಚಟುವಟಿಕೆಯ ಸೌಲಭ್ಯವೂ ಇಲ್ಲಿ ಹೆಚ್ಚಿಲ್ಲ. ಈಚೆಗೆ ಕರಾವಳಿ ಉತ್ಸವ ನಡೆಸಿದ್ದರೂ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿಲ್ಲ’ ಎಂಬುದು ಪ್ರವಾಸೋದ್ಯಮಿಯೊಬ್ಬರ ದೂರು.
ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಡಲತೀರದಲ್ಲಿ ಗೋವಾ ಮಾದರಿಯಲ್ಲಿ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಸಿಆರ್‌ಝಡ್ ನಿಯಮಾವಳಿಗೆ ವಿನಾಯಿತಿ ಬಂಡವಾಳ ಹೂಡುವವರಿಗೆ ತೆರಿಗೆ ವಿನಾಯಿತಿ ಸೌಲಭ್ಯ ಕಲ್ಪಿಸಬೇಕಿದೆಸತೀಶ ಸೈಲ್ ಶಾಸಕ
ಪ್ರವಾಸಿ ತಾಣಗಳಲ್ಲಿ ಹಂತ ಹಂತವಾಗಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಕಾರಣಕ್ಕೆ ರಾಕ್ ಗಾರ್ಡನ್ ಅಭಿವೃದ್ಧಿಪಡಿಸಿಲ್ಲಮಂಗಳಗೌರಿ ಭಟ್ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ
ಗೋವಾದಲ್ಲಿನ ದುಬಾರಿ ಶೂಲ್ಕ ಕಿರುಕುಳದ ಕಾರಣಕ್ಕೆ ಪ್ರವಾಸಿಗರು ಕಾರವಾರ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳತ್ತ ಬರುವುದು ಹೆಚ್ಚಿದೆ. ಸೌಲಭ್ಯಗಳನ್ನು ವೃದ್ಧಿಸಿದರೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಬಹುದುವಿನಯ ನಾಯ್ಕ ಪ್ರವಾಸೋದ್ಯಮಿ
ಶಾಪವಾದ ಹೆದ್ದಾರಿ ಮೇಲ್ಸೇತುವೆ
‘ರಾಷ್ಟ್ರೀಯ ಹೆದ್ದಾರಿ–66ಕ್ಕೆ ಇಲ್ಲಿನ ಲಂಡನ್ ಸೇತುವೆಯಿಂದ ಆರ್‌ಟಿಒ ಕಚೇರಿವರೆಗೆ ಮೇಲ್ಸೇತುವೆ ನಿರ್ಮಿಸಿದ ಬಳಿಕ ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ. ಗೋವಾಕ್ಕೆ ಸಾಗುವ ಪ್ರವಾಸಿಗರು ಈ ಹಿಂದೆ ನಗರ ವ್ಯಾಪ್ತಿಯಲ್ಲಿ ಹಾದುಹೋಗುತ್ತಿದ್ದರು. ಇಲ್ಲಿನ ತಾಣಗಳಿಗೆ ಭೇಟಿ ನೀಡುತ್ತಿದ್ದರು. ಆದರೆ ಮೇಲ್ಸೇತುವೆಯ ಮೂಲಕ ಸಾಗುವ ವೇಳೆ ನಗರದ ಸಂಪರ್ಕ ಕಡಿದುಹೋಗುತ್ತಿದೆ. ಕೇರಳ ಕರಾವಳಿ ಭಾಗ ಸೇರಿದಂತೆ ವಿವಿಧೆಡೆಯಿಂದ ಬರುವ ಪ್ರವಾಸಿಗರು ಮೇಲ್ಸೇತುವೆಯಿಂದ ವೇಗವಾಗಿ ಹಾದುಹೋಗುವಾಗ ಕಾರವಾರ ಗಮನಕ್ಕೆ ಬರುತ್ತಿಲ್ಲ’ ಎನ್ನುತ್ತಾರೆ ಉದ್ಯಮಿ ರಾಜೇಶ ಕಾಮತ್.
* ಕಾಳಿನದಿಯ ಮಧ್ಯೆ ಇರುವ ಕಾಳಿ ದ್ವೀಪದಲ್ಲಿ ಅರಣ್ಯ ಇಲಾಖೆಯು ನಿರ್ಮಿಸಿರುವ 240 ಮೀಟರ್ ಉದ್ದದ ಕಾಂಡ್ಲಾ ನಡಿಗೆ ಪಥ (ಮ್ಯಾಂಗ್ರೋವ್ ಬೋರ್ಡ್ ವಾಕ್) ಸ್ಥಗಿತಗೊಂಡಿದೆ. ನೂರಾರು ಪ್ರವಾಸಿಗರನ್ನು ಸೆಳೆದಿದ್ದ ಪಥದಲ್ಲಿ ನಂತರದ ದಿನಗಳಲ್ಲಿ ಪ್ರವಾಸಿಗರ ಹೆಜ್ಜೆ ಗುರುತು ಮೂಡಿದ್ದೇ ಅಪರೂಪವಾಗಿದೆ. ಅಲ್ಲಲ್ಲಿ ಮರದ ಹಲಗೆಗಳು ಮುರಿದು ಬಿದ್ದಿದ್ದರೆ ಮತ್ತೆ ಕೆಲವೆಡೆ ದುರ್ಬಲ ಸ್ಥಿತಿಯಲ್ಲಿವೆ.
* ಟ್ಯಾಗೋರ್ ಕಡಲತೀರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲೇ ಇರುವ ಶಿಲ್ಪವನ ನಿರ್ವಹಣೆಯಿಲ್ಲದೆ ಸೊರಗಿದೆ. ಜಿಲ್ಲೆಯ ಬುಡಕಟ್ಟು ಜನಜೀವನ ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳು ಮುರಿದು ಬಿದ್ದಿವೆ. ಗಿಡಗಂಟಿಗಳು ಬೆಳೆದುನಿಂತು ಇಡೀ ಉದ್ಯಾನ ಅಂದ ಕಳೆದುಕೊಂಡಿದೆ.
* ಮೂರು ದಶಕದ ಹಿಂದೆ ಪ್ರವಾಸಿಗರನ್ನು ಸೆಳೆದಿದ್ದ ಕಡಲತೀರದಲ್ಲಿ ಓಡಾಡುತ್ತಿದ್ದ ‘ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್’ ಹೆಸರಿನ ಪುಟಾಣಿ ರೈಲಿನ ಅವಶೇಷ ಈಗಲೂ ಕಡಲತೀರದಲ್ಲಿನ ಶೆಡ್‌ನಲ್ಲಿದೆ.
* ಐತಿಹಾಸಿಕ ಸದಾಶಿವಗಡ ಕೋಟೆಯ ಪಳಿಯುಳಿಕೆಗಳು ಹಾಳಾಗಿವೆ. ಈ ತಾಣವನ್ನು ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ ಸಂಸ್ಥೆಗೆ ನೀಡಲಾಗಿದ್ದು ಸಂಸ್ಥೆಯು ಇಲ್ಲಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದೆ.
* ಅರಬ್ಬಿ ಸಮುದ್ರದಲ್ಲಿ ಕೂರ್ಮಗಡ ದೇವಗಡ ನಡುಗದ್ದೆಗಳಿದ್ದರೂ ಇಲ್ಲಿಗೆ ಪ್ರವಾಸಿಗರ ಭೇಟಿಗೆ ಅವಕಾಶ ಸಿಗುವುದು ಕಡಿಮೆ. ದೇವಗಡ ನಡುಗಡ್ಡೆಯು ಕೇಂದ್ರ ಸರ್ಕಾರದ ದೀಪಸ್ತಂಭ ಮತ್ತು ದೀಪನೌಕೆಗಳ ಮಹಾನಿರ್ದೇಶನಾಲಯದ ವ್ಯಾಪ್ತಿಗೆ ಒಳಪಟ್ಟಿದ್ದು ಇಲ್ಲಿಗೆ ಪ್ರವೇಶ ನಿರ್ಬಂಧವಿದೆ. ಕೂರ್ಮಗಡ ನಡುಗಡ್ಡೆಯಲ್ಲಿ ಖಾಸಗಿ ರೆಸಾರ್ಟ್ ಇದ್ದು ಸಾರ್ವಜನಿಕರ ಮುಕ್ತ ಓಡಾಟಕ್ಕೆ ಇಲ್ಲಿ ಅವಕಾಶ ನಿರಾಕರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.