ಕಾರವಾರ: ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂದು 8 ತಿಂಗಳ ಹಿಂದೆ ಪ್ರವಾಸೋದ್ಯಮ ಇಲಾಖೆಗೆ ನೋಟಿಸ್ ನೀಡಿ, ಕಚೇರಿ ಸ್ಥಳಾಂತರಗೊಳಿಸಿದ್ದ ಜಿಲ್ಲಾಡಳಿತವು ಮುಂಚಿನ ಕಟ್ಟಡಕ್ಕೆ ಮರಳಲು ಆದೇಶಿಸಿದೆ.
ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯ ಇಕ್ಕಟ್ಟಾದ ಕೊಠಡಿಯಲ್ಲಿ ಕಚೇರಿ ನಡೆಸುತ್ತಿದ್ದ ಪ್ರವಾಸೋದ್ಯಮ ಇಲಾಖೆಗೆ ಈ ಆದೇಶ ನಿರಾಳತೆ ಉಂಟುಮಾಡಿದ್ದರೂ, ಪದೇ ಪದೇ ಕಚೇರಿ ಸ್ಥಳಾಂತರಿಸುತ್ತಿರುವುದು ಕಿರಿಕಿರಿಯನ್ನೂ ಉಂಟುಮಾಡಿದೆ.
ರಾಷ್ಟ್ರೀಯ ಹೆದ್ದಾರಿ–66ರ ಸರ್ವೀಸ್ ರಸ್ತೆಯ ಪಕ್ಕದಲ್ಲಿರುವ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಫೆ.19ರಂದು ಏಕಾಏಕಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ‘ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಕಚೇರಿ ನಡೆಸಲಾಗುತ್ತಿದೆ. ಈ ಜಾಗ ಕಂದಾಯ ಇಲಾಖೆಗೆ ಅಗತ್ಯವಿದ್ದು, ಸ್ಥಳಾಂತರಗೊಳ್ಳಬೇಕು’ ಎಂದು ಆಗ ಆದೇಶಿಸಲಾಗಿತ್ತು.
‘ಪ್ರವಾಸೋದ್ಯಮ ಇಲಾಖೆ ಕಚೇರಿ ನಡೆಯುತ್ತಿದ್ದ ಜಾಗದ ಬಳಿ ಇದ್ದ ನೀರಿನ ಟ್ಯಾಂಕ್ ಅಪಾಯಕಾರಿ ಸ್ಥಿತಿಯಲ್ಲಿತ್ತು. ಹೀಗಾಗಿ ಕಟ್ಟಡವನ್ನು ಸುರಕ್ಷತೆ ದೃಷ್ಟಿಯಿಂದ ಸ್ಥಳಾಂತರಿಸಲಾಗಿತ್ತು. ಈಗ ಟ್ಯಾಂಕ್ ತೆರವುಗೊಳಿಸಿದ್ದು, ಪುನಃ ಮೊದಲಿದ್ದ ಜಾಗಕ್ಕೆ ಕಚೇರಿ ಸ್ಥಳಾಂತರಿಸಿಕೊಳ್ಳಬಹುದು ಎಂದು ಪ್ರವಾಸೋದ್ಯಮ ಇಲಾಖೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾದವರಿಗೆ ತಕ್ಷಣ ಚಿಕಿತ್ಸೆ ನೀಡಲು ಅಗತ್ಯವಿರುವ ತುರ್ತು ಚಿಕಿತ್ಸಾ ಕೇಂದ್ರ (ಕ್ರಿಟಿಕಲ್ ಕೇರ್ ಸೆಂಟರ್) ಸ್ಥಾಪನೆಗೆ ಕ್ರಿಮ್ಸ್‌ಗೆ ₹16 ಕೋಟಿ ಮಂಜೂರಾಗಿದ್ದು, ಇದಕ್ಕಾಗಿ ಪ್ರತ್ಯೇಕ ಕಟ್ಟಡ ನಿರ್ಮಿಸಲು ಹೆದ್ದಾರಿಯ ಸರ್ವೀಸ್ ರಸ್ತೆಗೆ ಹೊಂದಿಕೊಂಡಿರುವ ಪ್ರವಾಸೋದ್ಯಮ ಕಚೇರಿ ಮತ್ತು ಅದರ ಅಕ್ಕಪಕ್ಕದ ಕಚೇರಿ ತೆರವುಗೊಳಿಸಲು ಜಿಲ್ಲಾಡಳಿತ ಈ ಹಿಂದೆ ಯೋಚಿಸಿತ್ತು. ಸದ್ಯ ಈ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಪ್ರವಾಸೋದ್ಯಮ ಇಲಾಖೆಗೆ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಮೊದಲು ಬಳಸುತ್ತಿದ್ದ ಕಟ್ಟಡ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆಕೆ. ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.